ಬಸ್ ಪಾಸ್‌ನ ಕಾಲಾವಧಿ ವಿಸ್ತರಿಸುವಂತೆ ಆಗ್ರಹಿಸಿ ಮನವಿ
ತಾಳಿಕೋಟೆಲಾಕ್ ಡೌನ್ ಕಾರಣದಿಂದಾಗಿ ಎಲ್ಲಾ ಪದವಿ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾಗಿದ್ದು, ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಮುಗಿಯುವವರೆಗೆ ಯಾವುದೇ ಅಧಿಕ ಶುಲ್ಕ ವಿಧಿಸದೇ ಬಸ್ ಪಾಸ್‌ನ ಕಾಲಾವಧಿ ವಿಸ್ತರಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಹಶೀಲ್ದಾರ ಮೂಲಕ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದರು.
ಪಟ್ಟಣದ ಎಸ್.ಕೆ.ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಬಸವೇಶ್ವರ ವೃತ್ತ, ಬಸ್ ನಿಲ್ದಾಣದ ಮೂಲಕ ಹಾಯ್ದು ತಹಶೀಲ್ದಾರ ಕಚೇರಿಗೆ ಆಗಮಿಸಿತು. ಲಾಕ್ ಡೌನ್ ಕಾರಣದಿಂದಾಗಿ ಎಲ್ಲಾ ಪದವಿ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾಗಿದ್ದು, ಕೊರೋನದ ನಂತರ ಶಾಲಾ ಕಾಲೇಜುಗಳು ಪ್ರಾರಂಭವಾಗಿ, ಶಿಕ್ಷಣ ವ್ಯವಸ್ಥೆಯು ಇದೀಗ ಸುಧಾರಣೆಯನ್ನು ಕಂಡುಕೊಂಡು ಸಾಮಾನ್ಯ ಸ್ಥಿತಿಗೆ ಮರುಕಳಿಸುತ್ತಿದೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಪ್ರಾರಂಭವಾಗಬೇಕಾದ ನೂತನ ಶೈಕ್ಷಣಿಕ ವರ್ಷವು 3 ತಿಂಗಳುಗಳ ಕಾಲ ವಿಳಂಬವಾಗಿ ಪ್ರಾರಂಭವಾಗುತ್ತಿದೆ. ಪ್ರಸ್ತುತ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷವು ಸೆಪ್ಟೆಂಬರ್‌ನಲ್ಲಿ ಹಾಗೂ ಕಾನೂನು ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷವು ಅಕ್ಟೋಬರ್ ಕೊನೆಯಲ್ಲಿ ಮುಕ್ತಾಯವಾಗಲಿದೆ. ರಾಜ್ಯಾದ್ಯಂತ ಬಹುತೇಕ ವಿದ್ಯಾರ್ಥಿಗಳು ಕೆ.ಎಸ್.ಆರ್.ಟಿ.ಸಿ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಿದ್ದು, ಬಸ್ ಪಾಸ್ ವ್ಯವಸ್ಥೆಯು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಪಡೆಯುವಲ್ಲಿ ಸಹಕಾರಿಯಾಗಿದೆ. ಆದರೆ ಈ ಬಾರಿ ಶೈಕ್ಷಣಿಕ ವರ್ಷವು ವಿಳಂಬವಾಗಿದ್ದು, ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯು ಶೈಕ್ಷಣಿಕ ವರ್ಷ ಕೊನೆಗೊಳ್ಳುವ ಮೊದಲೇ ಮುಕ್ತಾಯವಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಶೈಕ್ಷಣಿಕ ವರ್ಷ ಮುಗಿಯುವವರೆಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸದೆ ಬಸ್ ಪಾಸ್ ಅವಧಿಯನ್ನು ವಿಸ್ತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ತಹಶೀಲ್ದಾರ ಶ್ರೀಧರ ಗೋಟೋರ ಮನವಿಯನ್ನು ಸ್ವಿಕರಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಘಟಕದ ಸಾಮಾಜಿಕ ಜಾಲತಾಣದ ಪ್ರಮುಖ ಶ್ರೀಶೈಲ ಹೂಗಾರ, ರಾಜ್ಯ ಕಾರ್ಯಕಾರಣಿ ಸದಸ್ಯ ಸಂಗಮೇಶ ಕತ್ತಿ, ನಗರ ಕಾರ್ಯದರ್ಶಿ ನವೀನಸಿಂಗ ಗೌಡಗೇರಿ, ತಾಲೂಕು ಸಹ ಸಂಚಾಲಕ ಸಂದಿಪ ರಂಜಣಗಿ, ಮೌನೇಶ ಹೂಗಾರ, ಉದಯ ಪತ್ತಾರ, ಗುರು ಪ್ರಸಾದ್, ಮಹಮ್ಮದ್ ಪಟೇಲ್, ನಾಗವೇಣಿ ಪತ್ತಾರ, ಪ್ರೀತಿ, ಕಾವ್ಯ, ಷಹಾಜೀ, ನವನಾಥ, ಮಹೇಶ್ ನಾಯಕ್, ಕಾಶಿನಾಥ್, ಹಣಮಂತ್ರಾಯ ಸೇರಿದಂತೆ ಸಾವಿರಾರು ಭಾಗವಹಿಹಿಸಿದ್ದರು