ಚಳಿಜ್ವರದ ಲಕ್ಷಣಗಳಿದ್ದಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ
ಕಾರವಾರ 08: ವಾರಗಟ್ಟಲೇ ನಿಂತಲ್ಲೇ ನಿಂತ ಮಲೀನ ನೀರು, ಕೊಳಚೆ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಅನಾಫಿಲೀಸ್ ಸೊಳ್ಳೆ ಕಡಿತದಿಂದ ಜನರು ಮಲೇರಿಯಾ ರೋಗಕ್ಕೆ ಒಳಗಾಗುವ ಸಾಧ್ಯತೆಗಳಿದ್ದು, ಚಳಿಜ್ವರದ ಲಕ್ಷಣಗಳಿರುವವರು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಕಾರವಾರ ತಾಲ್ಲೂಕಾ ಆರೋಗ್ಯಾಧಿಕಾರಿ ಡಾ. ಸೂರಜ್ ನಾಯಕ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ಸಭಾಂಗಣದಲ್ಲಿ 'ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ' ಎಂಬ ಘೋಷಣೆಯಡಿ ಗುರುವಾರ ಆಯೋಜಿಸಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ-2021 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಲೇರಿಯಾ ರೋಗಾಣವು ಬರಿ ಕಣ್ಣಿಗೆ ಕಾಣಿಸದ ಅತೀ ಸಣ್ಣ ಸೂಕ್ಷ್ಮಾಣು ಜೀವಿಯಾಗಿದ್ದು, ಪರೋಪ ಜೀವಿ ಅಂತಲೂ ಕರೆಯಲಾಗುತ್ತದೆ. ಸೂಕ್ಷ್ಮ ದರ್ಶಕದಿಂದ ಮಾತ್ರ ಇದನ್ನು ನೋಡಲು ಸಾಧ್ಯವಿದೆ. ಅನಾಫಿಲಿಸ್ ಜಾತಿಯ ಹೆಣ್ಣು ಸೊಳ್ಳೆಗಳು ಮಲೇರಿಯಾ ರೋಗವನ್ನು ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಮಲೇರಿಯಾ ರೋಗಾಣುಗಳನ್ನು ಹೊಂದಿರುವ ರೋಗಿಯನ್ನು ಕಚ್ಚಿದ ಅನಾಫಿಲಿಸ್ ಸೊಳ್ಳೆ 10 ರಿಂದ 14 ದಿನದೊಳಗಾಗಿ ರೋಗವನ್ನು ಹರಡುವ ಸ್ಥಿತಿಗೆ ಬರುತ್ತದೆ. ನಂತ ಈ ಸೊಳ್ಳೆ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ಮಲೇರಿಯಾ ಪರೋಪ ಜೀವಿಗಳು ಮನುಷ್ಯನ ದೇಹದೊಳಕ್ಕೆ ಸೇರಿ 5 ರಿಂದ 15 ದಿನಗಳೊಳಗಾಗಿ ಚಳಿಜ್ವರ ಆರಂಭವಾಗುತ್ತದೆ. ಚಳಿಯ ನಂತರದಲ್ಲಿ ವಿಪರೀತ ಜ್ವರ, ಬೆವರು, ಮೈ-ಕೈ ನೋವು, ತಲೆನೋವು, ವಾಂತಿ, ನಿಶ್ಯಕ್ತಿಯಂತ ರೋಗದ ಗುಣಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ರೀತಿಯ ಜ್ವರದ ಗುಣಲಕ್ಷಣಗಳು ಕಂಡು ಬಂದರೆ ಸಾರ್ವಜನಿಕರು ನಿರ್ಲಕ್ಷ ತೋರದೆ ತಕ್ಷಣ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಮಲೇರಿಯಾ ರೋಗವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದರು.
ಜನರು ತಾವು ವಾಸಿಸುವ ಪ್ರದೇಶದಲ್ಲಿ ಸ್ವಚ್ಚತೆ ಕಾಪಾಡುವುದು, ನೀರು ನಿಲ್ಲದಂತೆ ನೋಡಿಕೊಳ್ಳುವುದು, ಮನೆಯ ಕಿಡಕಿಗಳಿಗೆ ಮೆಸ್ ಹಾಕಿಸುವುದು, ಸೊಳ್ಳೆ ಬತ್ತಿ, ಕರಿಬೇವು ಹಾಗೂ ಕೊಬ್ಬರಿ ಎಣ್ಣೆ ಬಳಕೆಯಿಂದ ಮಲೇರಿಯಾ ರೋಗವನ್ನು ತಡೆಗಟ್ಟಬಹುದು. ಅದಲ್ಲದೇ ಎಸ್ಡಿ ರ್ಯಾಪಿಡ್ ಟೆಸ್ಟ್ನಂತ ವಿವಿಧ ಪರೀಕ್ಷೆಗಳ ಮೂಲಕ ಮಲೇರಿಯಾವನ್ನು ದೃಢಪಡಿಸಿ ರೋಗಕ್ಕೆ ಒಳಗಾದ ವ್ಯಕ್ತಿಗೆ 14 ದಿನಗಳವರೆಗೆ ಪ್ಲಮ್ಕ್ವಿನ್ ಮಾತ್ರೆಗಳನ್ನು ನೀಡಲಾಗುತ್ತದೆ. ನಂತರ ಗುಣಮುಖರಾದ ವ್ಯಕ್ತಿಗೆ ರಕ್ತ ಪರೀಕ್ಷೆ ಮಾಡಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತದೆ. ಹೀಗಾಗಿ ಜ್ವರದ ಲಕ್ಷಣಗಳಿರುವವರು ರಕ್ತ ಪರೀಕ್ಷೆಗೆ ಒಳಗಾಗಬೇಕು. ಜೊತೆಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೆಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಈ ಮೂಲಕ ಮಲೇರಿಯಾ ರೋಗ ನಿವಾರಣೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.
ಜಿಲ್ಲಾ ಕೀಟ ಶಾಸ್ತ್ರಜ್ಞೆ ಕೆ. ಜ್ಯೋಸ್ನಾ ಮಾತನಾಡಿ, ಯಾವುದೇ ಜ್ವರ ಮಲೇರಿಯಾ ಇರಬಹುದು. ಹೀಗಾಗಿ ತಡಮಾಡದೇ ರಕ್ತ ಪರೀಕ್ಷೆ ಮಾಡಿಸಿ ಸಂಪೂರ್ಣ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು. ಈ ಚಿಕಿತ್ಸೆಯ ವಿವರಗಳು ಹಾಗೂ ಮಾತ್ರೆಗಳು ಆರೋಗ್ಯ ಕಾರ್ಯಕರ್ತರು ಮತ್ತು ಎಲ್ಲ ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ. ಜಿಲ್ಲೆಯಲ್ಲಿ ಮಲೇರಿಯಾ ತಡೆಗಾಗಿ ಪ್ರಕರಣ ಕಂಡುಬಂದ ಪ್ರದೇಶದಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತದೆ. ಜೊತೆಗೆ ಮಲೇರಿಯಾ ರೋಗ ಹರಡುವಿಕೆಗೆ ಕಾರಣವಾಗುವ ಸೊಳ್ಳೆಯನ್ನು ತಿಂದು ಜೀವಿಸುವ ಲಾಲ್ವಾಹಾರಿ ಮೀನುಗಳನ್ನು ನಿಂತ ನೀರಿನಲ್ಲಿ ಬಿಡಲಾಗುತ್ತಿದೆ. ಸಧ್ಯ ಮಳೆಗಾಲದ ಸಂದರ್ಭವಾಗಿದ್ದು, ಜನರು ಮಲೇರಿಯಾ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು. ಕಳೆದ 4-5 ವರ್ಷಗಳಿಂದ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ತೀರಾ ಕಡಿಮೆಯಾಗುತ್ತಿದ್ದು, ಮಲೇರಿಯಾ ಮುಕ್ತ ಜಿಲ್ಲೆಗಳ ಪಟ್ಟಿಯಲ್ಲಿ ಉತ್ತರ ಕನ್ನಡವೂ ಸೇರಿದೆ ಎಂದರು. ಎಂ.ಎಸ್. ಸದಾಶಿವ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ವೃಂದಾ ಬಿ. ತಾಮ್ಸೆ, ಅನುಪಮಾ ಎಸ್. ಅಂಕೋಲೆಕರ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.