ರಾಣೆಬೆನ್ನೂರ

ಸರ್ಕಾರಗಳಿಂದ ಗುತ್ತಿಗೆ ಕಾರ್ಮಿಕರ ವಿರೋಧಿ ಧೋರಣೆ: ಆರೋಪ

ಸರ್ಕಾರಗಳಿಂದ ಗುತ್ತಿಗೆ ಕಾರ್ಮಿಕರ ವಿರೋಧಿ ಧೋರಣೆ: ಆರೋಪ

ರಾಣೇಬೆನ್ನೂರು 04: ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳದ ರಾಜ್ಯಮಟ್ಟದ ಕಾರ್ಯಕಾರಿ ಸಮಿತಿಯು ನೀಡಿದ ಆದೇಶದಂತೆ ದಿನಗೂಲಿ ನೌಕರರು ಇಂದು ಹಾವೇರಿ ಜಿಲ್ಲಾಧಿಕಾರಿಗಳ ಭವನದ ಎದುರುಗಡೆ ಒಂದು ದಿನದ ಸಾಂಕೇತಿಕ ಹೋರಾಟ ಮಾಡಲು ಮುಂದಾಗಿದ್ದೇವೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಕೊಂಗಿ ಹೇಳಿದರು. 

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಹಮ್ಮಿಕೊಂಡಿದ್ದ ಸಾಂಕೇತಿಕ ಹೋರಾಟದ ನೇತೃತ್ವ ವಹಿಸಿ ಮಾತನಾಡಿದರು. 

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದ ಕಚೇರಿಗಳ ಎದುರುಗಡೆ ಇಂದು ಸಾಂಕೇತಿಕ ಧರಣಿ ಆರಂಭಿಸಲಾಗಿದೆ. ಇದರಲ್ಲಿ ಹೊರಗುತ್ತಿಗೆ, ಒಳಗುತ್ತಿಗೆ ನೌಕರರು ಅರ್ಹ ದಿನಗೂಲಿ ನೌಕರರು ಮತ್ತು ದಿನಗೂಲಿಯಿಂದ ಖಾಯಂಗೊಂಡ ನೌಕರರು ಟ್ಯಾಕ್ಸ್ ಕನ್ಸಲ್ಟೆಂಟ್ಸ್  ಸೇರಿದಂತೆ ಮತ್ತಿತರೆ ಇಲಾಖೆಗಳ ಗುತ್ತಿಗೆ ಆಧಾರಿತ ನೌಕರರು ಮಹಿಳಾ ನೌಕರರು ಪಾಲ್ಗೊಂಡಿದ್ದಾರೆ. ಸಂಜೆ ಈ ಧರಣೆ ಮುಕ್ತಾಯಗೊಂಡು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಲ್ಲೇಖಿತ ಮನವಿ ಪತ್ರವನ್ನು ರವಾನಿಸಲಾಗಿದೆ ಎಂದರು. 

ಕರ್ನಾಟಕ ರಾಜ್ಯದ ಮುಂಗಡ ಪತ್ರದ ಅಧಿವೇಶನ ನಡೆಯುತ್ತಿರುವುದರಿಂದ ಈ ಹೋರಾಟ ಅತ್ಯಂತ ಮಹತ್ವವನ್ನು ಪಡೆಯಲಿದೆ ಎನ್ನುವುದು ಮಹಾಮಂಡಳದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಕೆ.ಎಸ್.ಶರ್ಮಾ ಅವರ ಅಭಿಪ್ರಾಯವಾಗಿದ್ದು, ಅದರಂತೆಯೇ ಇಂದಿನ ಹೋರಾಟ ಮತ್ತು ಸಾಂಕೇತಿಕ ಧರಣಿ ಯಶಸ್ವಿ ಕಂಡಿರುವುದಾಗಿ ಬಸವರಾಜ ಕೊಂಗಿ ಮಾಧ್ಯಮಕ್ಕೆ ತಿಳಿಸಿದರು. 

ಸರ್ಕಾರ ಹೊರಗುತ್ತಿಗೆ ಪದ್ದತಿಯನ್ನು ರದ್ದು ಮಾಡಬೇಕು. ಈಗ ಕೆಲಸ ಮಾಡುತ್ತಿರುವ ಎಲ್ಲಾ ಗುತ್ತಿಗೆ ನೌಕರರನ್ನು ನೇರ ಖಾಯಂ ನೌಕರರೆಂದು ಪರಿವರ್ತಿಸಿ ಅವರೆಲ್ಲರಿಗೂ ಸರ್ಕಾರವೇ ನೇರವಾಗಿ ವೇತನವನ್ನು ಕೊಡಬೇಕು ಎಂದರು. 

ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ ಮಹಾ ಮಂಡಳವು ನೀಡಿರುವ ವಾಸ್ತವಿಕ ವರದಿಯಂತೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಇಲಾಖೆಯ ನೌಕರರಿಗೆ ಕೂಡಲೇ ಖಾಯಂಮಾತಿ ಗೊಳಿಸಿ ಸಹಾಯಕ್ಕೆ ಮುಂದಾಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ ಕೊಂಗಿ ಅವರು, ವಿಳಂಬ ದೋರಣಿ ಅನುಸರಿಸುವುದು ಯಾವುದೇ ಸರ್ಕಾರಗಳಿಗೆ ಶೋಭೆ ತರುವುದಿಲ್ಲ. ಕಾರ್ಮಿಕರ ತಾಳ್ಮೆಗೂ ಒಂದು ಮಿತಿ ಇದೆ. ಕೂಡಲೇ ಬೇಡಿಕೆ ಈಡೇರಿಸಿ ಇದಕ್ಕೆ ಮುಕ್ತಾ ಹಾಡಬೇಕು ಎಂದು ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ. 

ಸಾಂಕೇತಿಕ ಧರಣಿ ಮುಂಚೂಣಿಯಲ್ಲಿ ಸದಸ್ಯರಾದ ನಾಜೀರ್ ಕರ್ಜಗಿ, ಸುಭಾಷ್ ಕ್ಯಾಲಕೋಂಡ, ಶಿವಯೋಗಿ, ಭಾರತಿ, ಫಕ್ಕೀರಮ್ಮ  ಕಟಗಿ, ಆಶಾ, ಹನುಮಂತಪ್ಪ, ಶಕೀಲಾಬೀ ಸೇರಿದಂತೆ ವಿವಿದ ಇಲಾಖೆಗಳ ನೂರಕ್ಕೆ ಹೆಚ್ಚು ಕಾರ್ಮಿಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ