ಲೇಖನಗಳು

ಮತ್ತೇ ‘ಪ್ರೇಮ ಮಹಲ್‌’

ಮತ್ತೇ  ‘ಪ್ರೇಮ ಮಹಲ್‌’

                   ಈ ಲೇಖನದ ಶಿರ್ಷಿಕೆಯಲ್ಲಿ ‘ಮತ್ತೆ’ ಎನ್ನುವ ಪದವನ್ನು ಏಕೆ ಬಳಸಲಾಗಿದೆಯೆಂದು ಆಶ್ಚರ್ಯವೆ? ಹೌದು ಈ ಪದದ ಅಗತ್ಯವಿದೆ. ಅದುವೇ ‘ನಿರಂಜನ ಮಹಲ್‌’. ದಿನಾಂಕ 17-12-2001ರಂದು ನಾನು ಇಲ್ಲಿ ಭೇಟಿ ನೀಡಿ ಪರೀಶೀಲಿಸಿದ್ದೆ. ನನಗೆ ನೆನಪಿದ್ದ ಮಟ್ಟಿಗೆ ಕೆಲ ಪತ್ರಿಕೆಗಳಲ್ಲಿ ಹಾಗೂ  ‘ಗಡಿ ಎಕ್ಸಪ್ರೆಸ್‌’ ವಾರ ಪತ್ರಿಕೆಯಲ್ಲಿ ದಿನಾಂಕ 13-5-2002ರಂದು ಈ ಲೇಖನದ ಸಾರವನ್ನು ಒಳಗೊಂಡ ಲೇಖನವನ್ನು ಸಿದ್ದಪಡಿಸಿ, ಅವಸಾನದ ಅಂಚಿನತ್ತ ಸಾಗುತ್ತಿದ್ದ ಈ ಸ್ಮಾರಕದ ಕುರಿತು ಬೆಳಕು ಚೆಲ್ಲಿ ಕೊನೆಗೆ ಖ್ಯಾತ ಸಂಶೋಧಕರಾದ ಡಾ. ಅ.ಸುಂದರ್‌ರವರ ‘ಕಿತ್ತೂರು, ಕಾಕತಿ, ಬೈಲಹೊಂಗಲ, ದೇಶನೂರು ಮತ್ತು ನಂದಗಡ ಈ ಎಲ್ಲ ಸ್ಥಳಗಳಲ್ಲಿಯ ಕಿತ್ತೂರು ನಾಡಿಗೆ ಸಂಬಂಧಿಸಿದ ಸ್ಮಾರಕಗಳನ್ನು ‘ರಾಜ್ಯದ ಸಂರಕ್ಷಿತ ಸ್ಮಾರಕ’ ಗಳೆಂದು  ಘೋಷಿಸಬೇಕು. ಈ ಊರುಗಳನ್ನು ಒಂದು ಸರಣಿಯಲ್ಲಿ ಅಬಿವೃದ್ಧಿಪಡಿಸಿ, ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾದ ಇವುಗಳನ್ನು ಚಾರಿತ್ರಿಕ ಪ್ರದೇಶಗಳೆಂದು ಗುರುತಿಸಿ, ಇವೆಲ್ಲವುಗಳನ್ನು ಒಂದೇ ದಿನದಲ್ಲಿ ವೀಕ್ಷಿಸಲು ಅವಕಾಶವಾಗುವಂತೆ ರಸ್ತೆ ಮತ್ತು ಇತರ ಅನುಕೂಲತೆಗಳನ್ನು  ಕಲ್ಪಿಸಬೇಕು’ ಎನ್ನುವ ಅಭಿಪ್ರಾಯವನ್ನು ಹೇಳಿ, ಸರಕಾರ ಈ ಕುರಿತು ತುರ್ತು ಗಮನ ನೀಡಬೇಕು ಮುಂತಾದ ಕಳಕಳಿಯನ್ನು ವ್ಯಕ್ತಪಡಿಸಲಾಗಿತ್ತು.  

ಅವಸಾನದ ಅಂಚಿನತ್ತ ನಿರಂಜನಿ ಮಹಲ್    ತದನಂತರ ಈ ಕುರಿತು ಸಂಬಂಧಿಸಿದವರ ಗಮನಕ್ಕೂ ತರಲಾಯಿತು. 2015ರ ಅವಧಿ. ಆಗ ನಾನು ಕಿತ್ತೂರಿನ ತಹಸೀಲ್ದಾರನಾಗಿದ್ದೆ ಮತ್ತು ಡಾ. ವಿಜಯಕುಮಾರ ಹೊನಕೇರಿಯವರು ಬೈಲಹೊಂಗಲ ಉಪ ವಿಭಾಗಾಧಿಕಾರಿಗಳಾಗಿದ್ದರು. ಅವರನ್ನು ದೇಶನೂರಿಗೆ ಕರೆದುಕೊಂಡು ಹೋಗಿ ಈ ಸ್ಮಾರಕದ ಸ್ಥಿತಿಯನ್ನು ವಿವರಿಸಿದೆ. ಅದರ ಪರಿಣಾಮವಾಗಿ ಈ ಸ್ಮಾರಕದ ಸುತ್ತ ಆವರಣ ಗೋಡೆ, ಕಬ್ಬಿಣದ ಬಾಗಿಲು, ಸ್ಮಾರಕದ ಸಮೀಪ ಚಿಕ್ಕ ಕಟ್ಟೆ ನಿರ್ಮಾಣವಾಯಿತು.   ತದನಂತರ ದಿನಾಂಕ 22-11-2025ರಂದು ಸುಮಾರು 10 ವರ್ಷಗಳ ನಂತರ ಮತ್ತೊಮ್ಮೆ ಭೇಟಿ ನೀಡಿದೆ. ಸ್ಮಾರಕ ಮಾತ್ರ ಮೊದಲಿನ ಹೀನಾಯ ಸ್ಥಿತಿಯಲ್ಲಿಯೇ ಇದೆ.  

2015ರಲ್ಲಿ ನಿರ್ಮಾಣವಾದ ಸ್ಮಾರಕ ರಕ್ಷಣಾ ಗೋಡೆ    ಇಷ್ಟಕ್ಕೆ ಬಿಡದ ನಾನು ಈ ಸ್ಮಾರಕದ ಇತಿಹಾಸವನ್ನೇ ಕೇಂದ್ರ ಬಿಂದುವಾಗಿಟ್ಟುಕೊಂಡು 2019ರಲ್ಲಿ  ‘ರುದ್ರಸರ್ಜನ ಪ್ರೇಮ ಪ್ರಸಂಗ’ ಹೆಸರಿನ ನಾಟಕ ರಚಿಸಿದೆ. ಸವದತ್ತಿಯ ಹೆಸರಾಂತ ‘ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ’ ವತಿಯಿಂದ ಸವದತ್ತಿ, ಬೆಳಗಾವಿ ಹಾಗೂ ಕಿತ್ತೂರಿನಲ್ಲಿ ಈ ನಾಟಕ ಪ್ರದರ್ಶನವನ್ನು ಮಾಡಿದ್ದೂ ಆಯಿತು. ಆಗ ಈ ಸ್ಮಾರಕ ಹಾಗೂ ರುದ್ರಸರ್ಜನ ಪ್ರೇಮದ ಕಥನ ಒಂದಿಷ್ಟು ಪರಿಚಯವಾಯಿತು.ಹೌದು ಸ್ವಾತಂತ್ರ್ಯ, ಸ್ವಾಭಿಮಾನ, ಯುದ್ಧದ ಕಥೆಗಳನ್ನು ಕೇಳಿದ ಕಿತ್ತೂರು ಸಂಸ್ಥಾನದಲ್ಲೊಂದು  ‘ಪ್ರೇಮ ಮಹಲ್‌’ಇದೆ. ಅದುವೇ ‘ನಿರಂಜನ ಮಹಲ್‌’. ತನ್ನ ಪ್ರೇಯಸಿಗಾಗಿ ಸಿಂಹಾಸನವನ್ನೇ ತ್ಯಾಗ ಮಾಡಿದ ಅಪ್ಪಟ ಪ್ರೇಮಿಯ ಕಥನವಿರುವ ಸ್ಮಾರಕವಿದು. ಸಧ್ಯಕ್ಕಂತೂ ನಿರ್ಲಕ್ಷ್ಯತನಕ್ಕೆ ಒಳಪಟ್ಟಿದೆ.  

ಕಿತ್ತೂರಿನ ಹಲವಾರು ಸ್ಮಾರಕಗಳ ಕುರಿತು ಇರುವ ನಿರ್ಲಕ್ಷ್ಯತನ ಮತ್ತು ಸಂಸ್ಥಾನದ ಚರಿತ್ರೆಯ ಕುರಿತು ಇರುವ ಗೊಂದಲಗಳ ಕುರಿತು ಇರುವ ಪ್ರಸ್ತುತ ವಿಷಯಕ್ಕೆ ಈ ಸ್ಮಾರಕ ತಾಜಾ ಉದಾಹರಣೆ. ಉದಾಹರಣೆಗೆ ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮನ ಕುರಿತು ಭಾಷಣದಲ್ಲಿ ನಿರರ್ಗಳವಾಗಿ ಮಾತನಾಡುತ್ತೇವೆ. ಆದರೆ ಈ ರಾಣಿ ಜನಿಸಿದ ದಿನಾಂಕವೇ ಗೊತ್ತಿಲ್ಲದ ಸಂದರ್ಭದಲ್ಲಿ ನಾನು ಸಂಶೋಧನೆ ಮಾಡಿದ್ದ ಫಲಶ್ರುತಿಯಾಗಿ,  ದಿನಾಂಕ 14-11-1778 ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಖಚಿತಪಡಿಸಿ ಪ್ರತಿ ವರ್ಷ ಆಚರಣೆ ಮಾಡುತ್ತಲಿದೆ. ಆದರೆ ಕಳೆದ ತಿಂಗಳಷ್ಟೇ ಬೆಳಗಾವಿಯ ‘ಕನ್ನಡ ಭವನ’ ದಲ್ಲಿ ರಾಣಿಯ ‘ಜನ್ಮದಿನ’ ದ ಕುರಿತು ಕಾರ್ಯಕ್ರಮ ಏರಿ​‍್ಡಸಿದಾಗ ಸೇರಿದ ಜನ ಮಾತ್ರ ಅತೀ ಕಡಿಮೆ. ಇನ್ನೂ ದುರ್ದೈವದ ಸಂಗತಿಯೆಂದರೆ ‘ಅಂದು ಮದುವೆಗಳಿವೆ,  ಇಂತಹ ವೇಳೆಯಲ್ಲಿ ಕಾರ್ಯಕ್ರಮ  ಇಟ್ಟರೆ ಹೇಗೆ?’ ಎನ್ನುವ ಪೃಶ್ನೆಯನ್ನು ಒಬ್ಬ ಮಹಿಳೆಯೇ ಎತ್ತಿದರು. ಅಂದರೆ ವೈಯಕ್ತಿಕ ಕಾರಣಗಳಿವೆ ಎನ್ನುವ ಕಾರಣದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅಗಷ್ಟ 15ರ ಬದಲಾಗಿ ಬೇರೆ ದಿನ  ಆಚರಣೆ ಮಾಡಲು ಸಾಧ್ಯವೆ? ಇದೇ ರೀತಿ ಜನ್ಮ ದಿನಾಂಕವೂ ಕೂಡ.... 

   1734-49ರ ಅವಧಿಯಲ್ಲಿ  ಕಿತ್ತೂರು ಸಂಸ್ಥಾನದ 9ನೆಯ ಅರಸನಾಗಿದ್ದ ರುದ್ರಸರ್ಜ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕಾಶ್ಮೀರಕ್ಕೆ ಹೋದಾಗ, ಅಲ್ಲಿ ರಂಜನಾ ಎನ್ನುವ ಮುಸ್ಲಿಂ  ರಾಜನರ್ತಕಿಯನ್ನು ಪ್ರೇಮಿಸಿ ಕಿತ್ತೂರಿಗೆ ಕರೆ ತಂದು, ಅವಳನ್ನೇ ಮದುವೆಯಾಗುವುದಾಗಿ ಹಠ ಹಿಡಿಯುತ್ತಾನೆ. ಆದರೆ ಆತನಿಗೆ ಮೊದಲೇ ಮಲ್ಲವ್ವ ಎನ್ನುವ ರಾಣಿಯು ಇರುವುದರಿಂದ ಕಿತ್ತೂರಿನ ಗುರು ಹಿರಿಯರು ಈತನ ಹಠವನ್ನು ನಯವಾಗಿ ನಿರಾಕರಿಸಿದರೂ, ಹಠ ಬಿಡದ ಆತನಿಗೆ ‘ನಿನಗೆ ಪ್ರೇಯಸಿ ಬೇಕೋ, ಸಿಂಹಾಸನ ಬೇಕೋ’ ಎಂದು ಕೇಳಿದಾಗ ‘ನನಗೆ ಪ್ರೇಯಸಿಯೆ’  ಬೇಕೆಂದು ಸಿಂಹಾಸನ ತ್ಯಾಗ ಮಾಡಿ, ಪ್ರೇಮದ ಚರಿತ್ರೆ ನಿರ್ಮಿಸಿದ ಪ್ರೇಮಿ. ತದನಂತರ, ಕಿತ್ತೂರಿನ ಉಪ ರಾಜಧಾನಿಯಾದ ದೇಶನೂರಿಗೆ ಬಂದ, ಇಲ್ಲಿ ವಿರಕ್ತಮಠದ ಶ್ರೀಗಳಿಂದ ಅವಳಿಗೆ ಲಿಂಗಾಯತ  ದೀಕ್ಷೆ ನೀಡಿ ‘ನಿರಂಜನಿ’ ಎಂದು ಮರುನಾಮಕರಣ ಮಾಡಲಾಯಿತು. ರುದ್ರಸರ್ಜನು ಗುಡ್ಡದ ಮೇಲೆ ಒಂದು ಕೋಟೆ, ಕೆಳಗೆ ‘ನಿರಂಜನಿ ಮಹಲ್‌’, ಭಾವಿ ಇತ್ಯಾದಿ ನಿರ್ಮಿಸಿದ.    

ನೇಸರಗಿ ಸಮೀಪದ ದೇಶನೂರಿನಲ್ಲಿರುವ ತನ್ನ ಗತಕಾಲ ನೆನಪುಗಳನ್ನು ಅಳಿವಿನ ಅಂಚಿನ ಮೂಲಕ ನೆನಪಿಸಿಕೊಳ್ಳುತ್ತಿರುವ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡವೇ  ‘ನಿರಂಜನಿ ಮಹಲ’. ಸ್ಥಳೀಯರು ಇದನ್ನು ‘ಅಮರವ್ವನ ಗುಡಿ’ ಎಂದೇ ಕರೆಯುತ್ತಾರೆ. ಬಹುಶಃ ತಮ್ಮ ಪ್ರೀತಿ-ಪ್ರೇಮದಿಂದ, ಸಿಂಹಾಸನ ತ್ಯಾಗ ಮಾಡಿದ್ದಕ್ಕಾಗಿ,  ಅಮರರಾದ ಪ್ರೇಮಿಗಳ ನೆನಪಿಗಾಗಿ ಮುಗ್ಧ ಗ್ರಾಮೀಣ ಜನರಿಂದ ಈ ಉದ್ಘಾರ ಹೊರಟಿರಬಹುದು.  

ಹೊರನೋಟಕ್ಕೆ ಇದೊಂದು ಅತೀ ಸಾಮಾನ್ಯ ಕಟ್ಟಡ. ಇದನ್ನು ನೋಡಿದ ತಕ್ಷಣ ‘ಇದರಲ್ಲೆೇನಿದೆ?’ ಎನ್ನುವ ಉಡಾಫೆ ಉತ್ತರ ಹೊರಬರಬಹುದು. ಇದೇನು ಸಮಾಧಿಯೋ ಅಥವಾ ಅರಮನೆಯೋ ಎನ್ನುವ ಯೋನೆ ಬರುತ್ತದೆ. ಆದರೆ ರುದ್ರಸರ್ಜನ ಸಮಾಧಿಯು ಕಿತ್ತೂರಿನಲ್ಲಿದ್ದೆ. ಆದ್ದರಿಂದ ಇದು ನಿರಂಜನಿ ಮಹಲ ಎನ್ನುವುದೇ ಸರಿ. ಈ ಕಟ್ಟಡವು ಹಮೊಟೈಜ್ ಕ್ವಾರ್ಟಜೈಟ್ಟ ಕಲ್ಲಿನಿಂದ ರಚಿಸಲಾಗಿದ್ದು, ಬಿಳಿ ಸುಣ್ಣ ಹೊಂದಿದ ಗಾರೆಯ ಲೇಪನ ಈ ಕಟ್ಟಡಕ್ಕಾಗಿದೆ.  ಕಟ್ಟಡದ ಒಳನೋಟ ನೋಡಿದಾಗ ವಿಸ್ಮಯ  ಉದ್ಭವಿಸುತ್ತದೆ.  

ನಿರಂಜನಿ ಮಹಲ್‌ದೊಳಗಿನ ಸಿಹಿ ನೀರಿನ ಭಾವಿ 

ಕಟ್ಟಡದ ಒಳಗೆ ಒಂದು ಸಿಹಿ ನೀರಿನ ಭಾವಿ, ನಾಲ್ಕು ಚಿಕ್ಕ ಕೋಣೆಗಳು, ಒಳ ಪ್ರವೇಶ ಮಾಡಿದರೆ ಸಾಕು ತಣ್ಣನೆಯ ಹಿತಕರ ವಾತಾನುಕೂಲಿ ಕೋಣೆಯನ್ನು ಪ್ರವೇಶಿಸಿದ ಅನುಭವ ಉಂಟಾಗುತ್ತದೆ. ಕಟ್ಟಡದ ಒಳಗೆ ಪ್ರವೇಶವಾದ ನಂತರ,  ಬಲಬದಿಗೆ ಇರುವ  ಒಂದು ಚಿಕ್ಕ ಕೋಣೆಯಲ್ಲಿ ದತ್ತಾತ್ರೇಯ ಆರಾಧಕರು, ಪಂತ ಬಾಳೇಕುಂದ್ರಿ ಮಹಾರಾಜರು ತಪಸ್ಸು ಮಾಡಿರುವರು ಎಂದು ಸ್ಥಳೀಯರಾದ ಶ್ರೀ ಪ್ರಕಾಶ ಪಾಟೀಲರು ಹೇಳಿದರು. ಈ ಸ್ಮಾರಕದ ಎದುರಿಗೆ  ರಸ್ತೆ ಆಚೆಗೆ ಚಚ್ಚೌಕಾರದ ಭಾವಿ ಒಂದಿದ್ದು ಇಲ್ಲಿ ನೀರಿದೆ, ಆದರೆ, ಗ್ರಾಮಸ್ಥರು ಚೆಲ್ಲಿದ  ಕಸ ಕಡ್ಡಿ ‘ಹೊಲಸೆ’ ಲ್ಲವುಗಳ ಪರಿಣಾಮವಾಗಿ  ಇಲ್ಲಿ ‘ಹೊಲಸೆ’ ತುಂಬಿ ತುಳುಕುತಿದೆ.   

     ಇಂತಹ ಚಾರಿತ್ರಿಕ ಘಟನೆ ಹಾಗೂ ಸ್ಮಾರಕಗಳನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡ ಶೂರರ ನಾಡಿನಲ್ಲಿ ಸುಮಾರು 280 ವರ್ಷಗಳ ಇತಿಹಾಸ ಹೊಂದಿದ ‘ಪ್ರೇಮ ಮಹಲ್‌’ ಗೆ ತುರ್ತಾಗಿ ಬೇಕಾಗಿರುವುದ ಕಾಯಕಲ್ಪ.  

 ಯ.ರು. ಪಾಟೀಲ 

ಚಾರಿತ್ರಿಕ ಕಾದಂಬರಿಕಾರರುನಿವೃತ್ತ  ತಹಸೀಲ್ದಾರ ಹಾಗೂ 

ನಿಕಟಪೂರ್ವ  ಜಿಲ್ಲಾಧ್ಯಕ್ಷರು, ಕ.ಸಾ.ಪ.  ಬೆಳಗಾವಿ 


ಸುದ್ದಿ ಓದಿ