ಅಂಗನವಾಡಿ ಕಾರ್ಯಕರ್ತೆ ಲೀಲಾವತಿಗೆ ರಾಜ್ಯ ಮಹಿಳಾ ಸಾಧಕಿ ಪ್ರಶಸ್ತಿ
ಹೂವಿನಹಡಗಲಿ 23: ಹೈಬ್ರಿಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ,ಕಲಾಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ ಬೆಂಗಳೂರಿನ ವೀರಶೈವ ಭವನದಲ್ಲಿ ಈಚೆಗೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
2022ನೇ ಸಾಲಿನ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಮಹಿಳಾ ಸಾಧಕಿ ಪ್ರಶಸ್ತಿಗೆ ಎಲೆಮರೆಯ ಕಾಯಿಗಳಂತೆ ಸೇವೆ ಸಲ್ಲಿಸಿದ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಅಪ್ಪಟ ಗ್ರಾಮೀಣ ಪ್ರದೇಶದ ಕೊಯಿಲಾರಗಟ್ಟಿ ಗ್ರಾಮದ ಮಾದರಿ ಅಂಗನವಾಡಿ ಕಾರ್ಯಕರ್ತೆ ಲೀಲಾವತಿ ಅವರಿಗೆ ಲಭಿಸಿದೆ,
ಸರ್ಕಾರಿ ಅಂಗನವಾಡಿ ಕೇಂದ್ರ ಎಂದರೆ ಬಡ ಮಕ್ಕಳು ಇರುವ ತಾಣ ಎಂಬ ಅನಿಸಿಕೆ ಸಾಮಾನ್ಯ ಆದರೆ ಕೊಯಿಲಾರಗಟ್ಟಿ ಅಂಗನವಾಡಿ ಕೇಂದ್ರ ಇದಕ್ಕೆ ಅಪವಾದವಾಗಿದೆ.ಕೇಂದ್ರಕ್ಕೆ ಕಾಲಿಟ್ಟರೆ ಖಾಸಗಿ ಶಾಲೆಗೆ ಭೇಟಿ ನೀಡಿದ ಅನುಭವವಾಗುತ್ತದೆ.ಕೇಂದ್ರಗಳಲ್ಲಿ ಕನಿಷ್ಠ ಸೌಲಭ್ಯಗಳಿಲ್ಲ ಎಂಬ ಆರೋಪ ಎಲ್ಲೆಡೆ ಸಾಮಾನ್ಯ.ಅದಲ್ಲದೆ ಹೆಚ್ಚಿನ ಸರ್ಕಾರಿ ಸವಲತ್ತುಗಳ ಬಗ್ಗೆ ನೀರೀಕ್ಷಿಸಲು ಸಾಧ್ಯವೇ ಇಲ್ಲ. ಅಂಗನವಾಡಿ ಒಳಭಾಗದಲ್ಲಿ ಕಲಿಕೆಗೆ ಬೇಕಾದ ನಾನಾ ಚಿತ್ರಗಳು,ಮಕ್ಕಳು ಸುಲಭವಾಗಿ ಕಲಿಯಲು ಬೇಕಾದ ವ್ಯವಸ್ಥೆಯಿದ್ದು,
ಪುಟಾಣಿಗಳ ಜ್ಞಾನವೃದ್ದಿಸಲು ಇದು ಸಹಕಾರಿಯಾಗಿದೆ. ಅಂಗನವಾಡಿ ಕಾರ್ಯಕರ್ತೆ ಮಕ್ಕಳಿಗೆ ಶಿಕ್ಷಣದ ಜೊತೆಗೆ ಆಟವಾಡಲು ಬೇಕಾದ ವ್ಯವಸ್ಥೆ ಇದೆ.ಪಕ್ಷಿ,-ಪ್ರಾಣಿಗಳು,ಗೊಂಬೆಗಳು,ತರಕಾರಿ, ಚಿತ್ರಗಳನ್ನು ಅಂಗನವಾಡಿ ಕೇಂದ್ರದ ಗೋಡೆಗಳ ಮೇಲೆ ಬಿಡಸಲಾಗಿದ್ದು,ಇದು ಮಕ್ಕಳಿಗೆ ಆಕರ್ಷಣೆ ಮಾಡುತ್ತಿದೆ.ಹಾಡುಗಳು, ಡೆನ್ಸ್,ಗೀತೆಗಳನ್ನು ಹೇಳಿಕೊಡಲಾಗುತ್ತದೆ.ತಾಯಿಯ ಹಂಬಲದಿಂದ ಇನ್ನೂ ಸಂಪೂರ್ಣ ಬಿಡುಗಡೆ ಪಡೆಯದ ಹಾಲುಗಲ್ಲದ ಮಕ್ಕಳು ಕುಳಿತು ಇಲ್ಲಿ ಅಕ್ಷರ ಕಲಿಯುತ್ತವೆ. ಇದು ಕಾನ್ವೆಂಟ್ ಶಾಲಾ ಕೇಂದ್ರಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಇಲ್ಲಿನ ಅಂಗನವಾಡಿ ಅಭಿವೃದ್ದಿಪಡಿಸಿ,ಮಕ್ಕಳನ್ನು ಆಕರ್ಷಿಸುವ ಮೂಲಕ ಮಾದರಿ ಅಂಗನವಾಡಿಯಾಗಿದೆ. 33ವರ್ಷದಿಂದ ಅಂಗನವಾಡಿ ಕಾರ್ಯಕರ್ತೆ ಲೀಲಾವತಿ ಸೇವೆಗೆ ಈಗಾಗಲೇ ಸಂಘ,ಸಂಸ್ಥೆಗಳಿಂದ ಸನ್ಮಾನಿಸಿ ಗೌರವಿಸಲಾಗಿದೆ.
ಮಹಿಳಾ ಸೇವೆಯನ್ನು ಗುರುತಿಸಿ ಬೆಂಗಳೂರಿನ ಹೈಬ್ರಿಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ,ಕಲಾಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಶಿಕ್ಷಣ ಕ್ಷೇತ್ರಕ್ಕೆ ಅಂಗನವಾಡಿ ಕಾರ್ಯಕರ್ತೆ ಲೀಲಾವತಿಗೆ ರಾಜ್ಯ ಮಹಿಳಾ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.