ಕಾರವಾರ

ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ

ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ
ಮುಂಡಗೋಡ ತಾಲೂಕಿನ ಮಳಗಿ ಗ್ರಾ.ಪಂ ಕಛೇರಿಯ ಪಕ್ಕದ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಜಮಾಯಿಸಿದ ಸದಸ್ಯರು ಹಾಗೂ ಮುಖಂಡ

ಮುಂಡಗೋಡ 11:  ತಾಲೂಕಿನ ಮಳಗಿ ಗ್ರಾಮ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಬೆಂಬಲಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡುವ ಹಂತ ತಲುಪಿದ ಪ್ರಸಂಗ ಬುಧವಾರ ನಡೆಯಿತು. 

ತಾಲೂಕಿನ ಮಳಗಿ ಗ್ರಾಮ ಪಂಚಾಯತ 17 ಜನ ಸದಸ್ಯ ಬಲ ಹೊಂದಿದ್ದು, ಇದರಲ್ಲಿ 8 ಕಾಂಗ್ರೆಸ್ ಬೆಂಬಲಿತ ಹಾಗೂ ಬಂಡಾಯ ಬಿಜೆಪಿ ಸೇರಿದಂತೆ 9 ಬಿಜೆಪಿ ಬೆಂಬಲಿತ ಸದಸ್ಯರಿದ್ದರು. 

ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ 9 ಬಿಜೆಪಿ ಬೆಂಬಲಿತ ಹಾಗೂ 8 ಕಾಂಗ್ರೆಸ್ ಬೆಂಬಲಿತ ಸದಸ್ಯರು ಪಂಚಾಯತ ಕಚೇರಿಯ ಒಳಗಡೆ ಹೋಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತವಾಗಿ ವಿನಯಗೌಡ ಪಾಟೀಲ ಹಾಗೂ ಕಾಂಗ್ರೆಸ್ ಬೆಂಬಲಿತವಾಗಿ ಪ್ರದೀಪ ಕೊಳಗಿ ನಾಮಪತ್ರ ಸಲ್ಲಿಸಿದ್ದರು. ಬಳಿಕ ಚುನಾವಣೆ ನಡೆದು ಮತ ಏಣಿಕೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ 9 ಮತಗಳು ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ 8 ಮತಗಳು ಬಿದ್ದಿದ್ದರಿಂದ ಪಂಚಾಯತ ಕಚೇರಿ ಬಳಿ ಜಮಾಯಿಸಿದ್ದ ಮುಖಂಡರು ಹಾಗೂ ಸದಸ್ಯರಿಗೆ ಭಾರಿ ಮುಜುಗರ ಉಂಟಾಯಿತು ನಂತರ ಸದಸ್ಯರೆಲ್ಲರು ಹೊರ ಬಂದ ನಂತರ ನಮ್ಮಲ್ಲಿ ಯಾರೋ ಒಬ್ಬರು ನಮ್ಮ ಅಭ್ಯರ್ಥಿ ಬಿಟ್ಟು ಬೇರೆಯವರಿಗೆ ಮತ ಚಲಾಯಿಸಿದೀರಿ ಎಂದು ಇವನ ಬಿಟ್ಟು ಅವನ ಬಿಟ್ಟು ಇವನಾರು ಎಂಬಂತೆ ಸದಸ್ಯರ ನಡುವೆ ಮಾತಿನ ಚಕಮಕಿ ಆರಂಭವಾಯಿತು.

ಈ ವೇಳೆ ಕೆಲ ಸದಸ್ಯರು ಪಂಚಾಯತ ಕಚೇರಿ ಪಕ್ಕದ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಎಲ್ಲ ಸದಸ್ಯರು ಆಣೆ ಪ್ರಮಾಣ ಮಾಡಬೇಕೆಂದು ಪಟ್ಟುಹಿಡಿದರು. ಈ ವೇಳೆ ಒಂಬತ್ತು ಸದಸ್ಯರು ಸಹ ನಾವು ಬಿಜೆಪಿ ಬೆಂಬಲಿತ ವಿನಯಗೌಡ ಅವರಿಗೆ ಮತ ಚಲಾಯಿಸಿದ್ದೇವೆ ಬೇರೆ ಯಾರಿಗೂ ಮತ ಚಲಾಯಿಸಿಲ್ಲ ಎಂದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆಣೆ ಪ್ರಮಾಣ ಮಾಡಿದರು ಎನ್ನಲಾಗಿದೆ. 


ಸುದ್ದಿ ಓದಿ