ಕ್ರೀಡಾ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ: ತಹಶೀಲ್ದಾರ್ ಜೂಗಲ್ ಮಂಜುನಾಯಕ
ಲೋಕದರ್ಶನ ವರದಿ
ಕಂಪ್ಲಿ, ಆ. ೨೪: ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಜೊತೆಗೆ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ತಹಶೀಲ್ದಾರ್ ಜೂಗಲ್ ಮಂಜುನಾಯಕ ಹೇಳಿದರು.
ಪಟ್ಟಣದ ಸಣಾಪುರ ರಸ್ತೆಯಲ್ಲಿರುವ ರೈನ್ಬೋ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಆರಂಭಗೊAಡ ಎರಡು ದಿನಗಳ ಕಂಪ್ಲಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡುವ ಮೂಲಕ ವಿದ್ಯಾರ್ಥಿಗಳು ಸಾಧನೆಯ ಗುರಿ ತಲುಪಬೇಕು. ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಕ್ರೀಡಾ ಮನೋಭಾವ ಮುಖ್ಯ. ಉತ್ತಮ ಆರೋಗ್ಯ ಹೊಂದಲು ಕ್ರೀಡೆಗಳು ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈನ್ಬೋ ಕಾಲೇಜಿನ ಸಂಸ್ಥಾಪಕ ಕಾರ್ಯದರ್ಶಿ ಕೆ.ಎಸ್. ಚಾಂದ್ಬಾಷಾ ಅವರು ಪ್ರತಿಜ್ಞಾವಿಧಿ ಬೋಧಿಸಿದ ಬಳಿಕ ಮಾತನಾಡಿ, ಕ್ರೀಡೆ ಸೋಲು-ಗೆಲುವಿಗಿಂತ ಕ್ರೀಡಾ ಮನೋಭಾವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಆರೋಗ್ಯಕರ ಜೀವನಕ್ಕೆ ಕ್ರೀಡೆಗಳು ಸಹಕಾರಿಯಾಗಿರುವುದರಿಂದ ಶಿಕ್ಷಣದ ಜೊತೆಗೆ ಕ್ರೀಡೆಗಳಿಗೂ ಆದ್ಯತೆ ನೀಡಬೇಕು ಎಂದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರಾವ್ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ರೈನ್ಬೋ ಕಾಲೇಜಿನ ಪ್ರಾಚಾರ್ಯ ಡಿ.ಕೆ. ಅಜೀಜ್ ಉಲ್ ಹಕ್ ಅಧ್ಯಕ್ಷತೆ ವಹಿಸಿದ್ದರು.
ಕ್ರೀಡಾಕೂಟದಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಒಟ್ಟು ಏಳು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉದ್ಘಾಟನಾ ಪಂದ್ಯವಾಗಿ ನಡೆದ ವಾಲಿಬಾಲ್ ಕ್ರೀಡೆಯಲ್ಲಿ ರೈನ್ಬೋ ಕಾಲೇಜಿನ ಬಾಲಕರ ತಂಡ ಮೊದಲ ಗೆಲುವು ದಾಖಲಿಸುವ ಮೂಲಕ ಶುಭಾರಂಭ ಮಾಡಿತು.
ಈ ಸಂದರ್ಭದಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ. ಮೂಕಯ್ಯಸ್ವಾಮಿ, ಅಕ್ಕಿಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ರೈನ್ಬೋ ಸಂಸ್ಥೆಯ ಅಧ್ಯಕ್ಷ ಶಾರುಖ್ ಕೆ.ಎಸ್., ಖಜಾಂಚಿ ಕೆ.ಎಸ್. ಮೆಹಬೂಬ್, ಕಾಲೇಜು ಉಪನ್ಯಾಸಕರಾದ ಮಾರೆಪ್ಪ, ಸಿದ್ದಪ್ಪ ಪರಮೇಶ್ವರ, ವಿರೇಶ ಕೆ.ಬಿ., ಜಿ. ಮಹಾಬಲೇಶ್ವರಪ್ಪ, ಬಸವರಾಜ ನಾಯಕ, ಬಸವರಾಜಸ್ವಾಮಿ, ಶಿಕ್ಷಣ ಸಂಯೋಜಕ ಟಿ.ಎಂ. ಬಸವರಾಜ, ಉಪ ಪ್ರಾಚಾರ್ಯ ನವೀನ್ ಕುಮಾರ್ ಎಚ್.ಆರ್., ದೈಹಿಕ ಶಿಕ್ಷಣ ನಿರ್ದೇಶಕ ಸಿ. ಜಡಪ್ಪ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಭೀರಲಿಂಗೇಶ್ವರ ಸೇರಿದಂತೆ ವಿವಿಧ ಗಣ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.