ಕಾಯಕವೇ ಕೈಲಾಸ ಎಂಬ ಮಂತ್ರ ಜೀವನದುದ್ದಕ್ಕೂ ಅಳವಡಿಸಿಕೊಳ್ಳಿ; ಮೇತ್ರಿ
ಇಂಡಿ: 12ನೇ ಶತಮಾನದಲ್ಲಿ ಬಾಳಿ ಬದುಕಿದ ಎಲ್ಲ ಶರಣರು ಅಣ್ಣ ಬಸವಣ್ಣನವರು ಹೇಳಿದ “ಕಾಯಕವೇ ಕೈಲಾಸ” ಎಂಬ ಮಂತ್ರವನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು, ಅದಕ್ಕೆ ನಿಷ್ಟರಾಗಿ ದುಡಿದು ಜೀವನ ಸಾಗಿಸಿದವರಾಗಿದ್ದಾರೆ ಎಂದು ಶ್ರೀಶೈಲ ಮೇತ್ರಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಬಸವರಾಜೇಂದ್ರ ಸತ್ಸಂಗ ಸಮಿತಿ ಹಾಗೂ ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ಸಹಯೋಗದಲ್ಲಿ ನಡೆದ 60ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪನ್ಯಾಸ ನೀಡಿದರು.
ಕಾಯಕದ ಮಹತ್ವವನ್ನು ತಾವು ಅರಿತುಕೊಂಡು ಅದನ್ನು ಎಲ್ಲ ಕಡೆ ಪ್ರಸಾರ ಮಾಡಿದ್ದಾರೆ. ಕಾಯಕವನ್ನು ಭಕ್ತಿಯಿಂದ ಮಾಡಿ, ಅದರಿಂದ ಆದಾಯದ ಆಹಾರ ಧಾನ್ಯಗಳನ್ನು ತಾವಲ್ಲದೆ ತಮ್ಮ ಸುತ್ತಲಿನ ಎಲ್ಲರಿಗೂ ಉಣಬಡಿಸುತ್ತಿದ್ದರು. ಅತಿಯಾಸೆ ಬಲಿಗೆ ಬಿದ್ದು ಆಯ್ದಕ್ಕಿ ಮಾರಯ್ಯನು ತಂದ ಹೆಚ್ಚಿನ ಅಕ್ಕಿಯನ್ನು ಪತ್ನಿ ಲಕ್ಕಮ್ಮ ಅದನ್ನು ಮರಳಿ ಕೊಟ್ಟು ಬರಲು ಹೇಳಿದ್ದನ್ನು ನೆನಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಶೋಧಕ ಮಲ್ಲಿಕಾರ್ಜುನ ಜೇವರ್ಗಿ ಮಾತನಾಡಿದರು, ಸಾನಿಧ್ಯ ವಹಿಸಿದ ಸ್ಥಳೀಯ ಸಿದ್ಧಾರೂಡ ಮಠದ ಡಾಽಽ ಸ್ವರೂಪನಂದ ಸ್ವಾಮಿಜೀ ಆಶೀರ್ವಚನ ನೀಡಿ, ಎಲ್ಲ ಶರಣರು ಹೇಳಿರುವ ವಚನಗಳ ಸಾರವನ್ನು ಅರಿತುಕೊಂಡು ಜೀವನದಲ್ಲಿ ಕೆಲವನ್ನಾದರೂ ಅಳವಡಿಸಿಕೊಳ್ಳಲು ಹಿತವಚನ ನೀಡಿದರು.
ಇತ್ತೀಚಿಗೆ ನಿಧನರಾದ ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಂ.ಪಿ. ಭೈರಜಿ ಅವರ ಕುರಿತು ನುಡಿ ನಮನವನ್ನು ರಾಘವೇಂದ್ರ ಕುಲಕರ್ಣಿ, ಎನ್.ಟಿ. ಸಂಗಾ ಹಾಗೂ ಎಸ್.ಎಸ್. ಸ್ವಾಮಿ ಅವರು ಸಲ್ಲಿಸುವ ಮೂಲಕ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಶರಣ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಆರ್.ವಿ. ಪಾಟೀಲ, ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ ವಿ.ಬಿ. ನರಳೆ, ಎಂ.ಎಸ್. ಗಣೇರ ಶಿಕ್ಷಕರನ್ನು ಸತ್ಸಂಗ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಂ.ಜೆ. ಪಾಟೀಲ, ಸಿ.ಎಂ. ಉಪ್ಪಿನ, ಬಿ.ಎಸ್. ಪಾಟೀಲ, ಎಸ್.ಎಸ್. ಈರನಕೇರಿ, ಜಿ.ಎಸ್. ವಾಲಿ, ಎಚ್.ಎಸ್. ಏಳೆಗಾಂವ, ಎಸ್.ವಿ. ಹೂಗಾರ, ಶಿವಲಿಂಗಪ್ಪ ಪಟ್ಟದಕಲ್ಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹಿರೇಬೇವನೂರ ಗ್ರಾಮದ ಕೆ.ಜಿ. ನಾಟೀಕಾರ ತಮ್ಮ ತಂದೆಯವರಾದ ಲಿಂ. ಗಂಗಪ್ಪ ನಾಟೀಕಾರ ಇವರ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಶರಣ ಬಂಧುಗಳಿಗೆ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಿದ್ದರು.