ಜಮಖಂಡಿ

ಬಿತ್ತನೆಗೆ ಅವಶ್ಯಕತೆ ಇರುವಷ್ಟು ರಸಗೊಬ್ಬರಗಳ ದಾಸ್ತಾನು: ಸಿದ್ದಪ್ಪ ಪಟ್ಟಿಹಾಳ

ಬಿತ್ತನೆಗೆ ಅವಶ್ಯಕತೆ ಇರುವಷ್ಟು ರಸಗೊಬ್ಬರಗಳ ದಾಸ್ತಾನು: ಸಿದ್ದಪ್ಪ ಪಟ್ಟಿಹಾಳ
ಜಮಖಂಡಿ ತಾಲೂಕಾ ಸಹಾಯಕ ಕೃಷಿ ನಿರ್ದೇಶಕ ಸಿದ್ದಪ್ಪ ಪಟ್ಟಿಹಾಳ,

ಜಮಖಂಡಿ 31: ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ಬಿತ್ತನೆಗೆ ಹಾಗೂ ಬಿತ್ತನೆಯಾದ ನಂತರ ಅವಶ್ಯಕತೆ ಇರುವಷ್ಟು ರಸಗೊಬ್ಬರಗಳ ದಾಸ್ತಾನು ಮಾಡಲಾಗಿದೆ. ಯೂರಿಯಾ 9062 ಟನ್, ಡಿ.ಎ.ಪಿ 653 ಟನ್, ಸಂಯುಕ್ತ ಗೊಬ್ಬರಗಳು 5552 ಟನ್, ಪೊಟ್ಯಾಷ್ 524 ಟನ್, ಸೂಪರ್ ಫಾಸ್ಪೇಟ್ ಮತ್ತು ಇತರೆ ಗೊಬ್ಬರಗಳು 451 ಟನ್ ದಾಸ್ತಾನು ಮಾಡಲಾಗಿದೆ. ರೈತ ಬಾಂಧವರು ಪರವಾನಗಿ ಪಡೆದ ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ಆಧಾರಕಾರ್ಡ ಒದಗಿಸಿ ರಸಗೊಬ್ಬರಗಳನ್ನು ಖರೀದಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಸಿದ್ದಪ್ಪ ಪಟ್ಟಿಹಾಳ ತಿಳಿಸಿದರು.    

ತಾಲೂಕಿನಲ್ಲಿ ಜನೇವರಿಯಿಂದ ಇಂದಿನವರಗೆ 79 ಮಿ.ಮೀ ಮಳೆಯಾಗಿದ್ದು. ಮಳೆ 64 ಮಿ.ಮೀ ಇದೆ. ರಬಕವಿ-ಬನಹಟ್ಟಿ ತಾಲೂಕಿನಲ್ಲಿ 126 ಮಿ.ಮೀ ಮಳೆಯಾಗಿದ್ದು. ಮಳೆ 53 ಮಿ.ಮೀ. ಇದೆ. ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮಳೆಯಾಗದಿರುವುದರಿಂದ ರೈತ ಬಾಂಧವರು ತಮ್ಮ ಜಮೀನಿನ ಮಣ್ಣಿನಲ್ಲಿರುವ ತೇವಾಂಶವನ್ನು ಅರಿತುಕೊಂಡು ಬಿತ್ತನೆ ಮಾಡುವುದು ಸೂಕ್ತ ಎಂದು ಕಳೆದ ವರ್ಷ ಬರಗಾಲದಿಂದ ತತ್ತರಿಸಿದ ರೈತರು ಹೆಚ್ಚಿನ ಬೆಳೆ ಬೆಳೆಯದೇ ಪರಿತಪಿಸುವಂತಾಗಿತ್ತು. ಈ ಬಾರಿ ತಾಲೂಕಿನ ಮೂರು ಹೋಬಳಿಗಳಲ್ಲಿ ಕಳೆದ ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಬಿತ್ತನೆಗೆ ಅನುಕೂಲವಾಗುವ ಲಕ್ಷಣಗಳಿವೆ. ಮುಂಗಾರು ಪೂರ್ವ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗಿರುವುದರಿಂದ ರೈತರು ಭೂಮಿ ಹದಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನೂ ಕೆಲವಡೆ ಬಿತ್ತನೆಗೆ ರೈತರು ಸಜ್ಜಾಗುತ್ತಿದ್ದಾರೆ. ಬಿತ್ತನೆಗೆ ಮೊದಲು ಸಾವಯವ ಪದ್ದತಿಯಿಂದ ಅಥವಾ ರಾಸಾಯನಿಕಗಳ ಬಳಕೆಯಿಂದ ಬೀಜೋಪಚಾರ ಮಾಡಬೇಕು. ಇದರಿಂದ ಬೀಜಗಳಿಂದ ಮಣ್ಣಿನಿಂದ ಹರಡಬಹುದಾದ ರೋಗಗಳು ತಡೆಗಟ್ಟಬಹುದು ಹಾಗೂ ಮೊಳಕೆ ಪ್ರಮಾಣ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದರು.   

ಪ್ರಮುಖ ಬೆಳೆಗಳಾದ ಉದ್ದು, ಮೆಕ್ಕೆಜೋಳ, ಸಜ್ಜೆ, ಹೆಸರು, ತೊಗರಿ, ಸೂರ್ಯಕಾಂತಿ ಹಾಗೂ ಸೋಯಾ ಅವರೆ ಮುಂತಾದ ಬೆಳೆಗಳ ಬಿತ್ತನೆಗೆ ಆಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜಮಖಂಡಿ, ಸಾವಳಗಿ ಹಾಗೂ ತೇರದಾಳ ಹೋಬಳಿಯಲ್ಲಿ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದೆ. ಏಕದಳ, ದ್ವಿದಳ, ಎಣ್ಣೆಕಾಳು ಹಾಗೂ ವಾಣಿಜ್ಯ ಬೆಳೆಗಳ ಬಿತ್ತನೆ ಗುರಿ 50150 ಹೆಕ್ಟೇರ್ ಹಾಗೂ ರಬಕವಿ-ಬನಹಟ್ಟಿ ತಾಲೂಕಿನಲ್ಲಿ 25610 ಹೆಕ್ಟೇರ್‌ನಷ್ಟು ಅಂದಾಜಿಸಲಾಗಿದೆ. ಜಮಖಂಡಿ, ಸಾವಳಗಿ ಹಾಗೂ ತೇರದಾಳ ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ, ಸೂರ್ಯಕಾಂತಿ, ಹೆಸರು, ಉದ್ದು ಹಾಗೂ ಮೆಕ್ಕೆಜೋಳ ಒಳಗೊಂಡಂತೆ 470 ಕ್ವಿಂಟಾಲ್‌ನಷ್ಟು ಬಿತ್ತನೆ ಬೀಜ ದಾಸ್ತಾನಿಕರಿಸಲಾಗಿದೆ. ರೈತರು ಯಾವುದೇ ಆತಂಕವಿಲ್ಲದೇ ದಾಖಲಾತಿಗಳನ್ನು ಒದಗಿಸಿ ಬೀಜ ಖರೀದಿಸಬಹುದಾಗಿದೆ. ವಿವಿಧ ಬೆಳೆಗಳ ಶಿಫಾರಸ್ಸಿನಂತೆ ಹಾಗೂ ಮಣ್ಣಿಗೆ ಅವಶ್ಯಕತೆ ಇರುವಷ್ಟು ಪೋಷಕಾಂಶಗಳ ಬಳಕೆ ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಬಹುದಾಗಿದೆ. ಈಗಾಗಲೇ ಮೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಬೇಡಿಕೆಗೆ ತಕ್ಕಂತೆ ದಾಸ್ತಾನು ಮಾಡಿ ಬೀಜ ವಿತರಣೆ ಕಾರ್ಯ ಆರಂಭ ಮಾಡಲಾಗಿದೆ  ಎಂದರು. 


ಸುದ್ದಿ ಓದಿ