ಯೋಜನೆಗಳ ಅನುಷ್ಠಾನ ಸಮರ್ಪಕವಾಗಿಲ್ಲವೆಂದು ಕಾರ್ಯಕರ್ತರ ಆಗ್ರಹ
ಬ್ಯಾಡಗಿ 12 : ತಾಲೂಕಿನ ಆಣೂರ ಹಾಗೂ ಬುಡಪನಹಳ್ಳಿ ಕೆರೆಗೆ ನೀರು ತುಂಬಿಸುವ ಯೋಜನೆಗಳನ್ನು ಅಧಿಕಾರಿಗಳು ಸಮರ್ಕವಾಗಿ ಅನುಷ್ಠಾನಗೊಳಿಸುತ್ತಿಲ್ಲವೆಂದು ತಾಲೂಕಾ ರೈತ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ಮಾಡಿ ತಹಶೀಲ್ದಾರ ಫಿರೋಜಾಷಾ ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ ತಾಲೂಕಿನ ಹಲವಾರು ಕೆರೆಗಳಿಗೆ ಈಗಾಗಲೇ ಇಲಾಖೆಯ ಅಧಿಕಾರಿಗಳು ನೀರು ಹರಿಸುತ್ತಿದ್ದು, ಯಾವುದೇ ಕೆರೆಗಳಿಗೆ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ, ಕಿಡಿಗೇಡಿಗಳು ವಾಲ್ಗಳನ್ನು ಎಲ್ಲೆಂದರಲ್ಲಿ ತಿರುವುತ್ತಲಿದ್ದಾರೆ. ಇದರಿಂದಾಗಿ ಕೆರೆಗಳಿಗೆ ಸಮರ್ಕವಾಗಿ ನೀರು ಬರುತ್ತಿಲ್ಲ, ಆದ್ದರಿಂದ ಕಿಡಿಗೇಡಿಗಳ ಕೃತ್ಯವನ್ನು ಕಂಡು ಹಿಡಿದು ಅಂತವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ರೈತ ಧುರೀಣ ಕಿರಣ್ ಗಡಿಗೋಳ ಮಾತನಾಡಿ ಈಗಾಗಲೇ ತಾಲೂಕಿನ ಯಾವುದೇ ಕೆರೆಗಳು ತುಂಬಿರುವುದಿಲ್ಲ, ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಈ ವಾಲಗಳ ಅನಾನುಕೂಲವಾಗುವಲ್ಲಿ ಕಿಡಿಗೇಡಿಗಳು ಕಾರಣವಾಗಿದ್ದಾರೆ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಚಿಕ್ಕಪ್ಪ ಚತ್ರದ, ಜಾನಪುನಿತ ಸೇರಿದಂತೆ ಇತರರಿದ್ದರು.