ಸ್ಯಾನಿಟರಿ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು: ಸುರಪುರಮಠ
ಲೋಕದರ್ಶನ ವರದಿ
ಬೆಳಗಾವಿ 05: ಸ್ವಚ್ಛ ಭಾರತ ಅಭಿಯಾನದ ವ್ಯಾಪಕತೆಯ ಪರಿಣಾಮದಿಂದ ಸರ್ಕಾರಿ ಕ್ಷೇತ್ರದಲ್ಲಿ ಮಾತ್ರವಲ್ಲದೆ ಖಾಸಗಿ ಕಂಪನಿಗಳಲ್ಲಿ ಕೂಡಾ ಸ್ಯಾನಿಟರಿ ಶಿಕ್ಷಣ ಪಡೆದವರಿಗೆ ಸ್ಯಾನಿಟರಿ ಇನ್ಸಪೆಕ್ಟರ್ ಅವಕಾಶಗಳು ವಿಪುಲವಾಗಿವೆ ಎಂದು ಆಲ್ ಇಂಡಿಯಾ ಇನ್ಸಿ-್ಟಟ್ಯೂಟ್ ಆಫ್ ಲೋಕಲ್ ಸೆಲ್ಫ್ ಗವರ್ನಮೆಂಟ್ (ಎಐಐಎಲ್ಎಸ್ಜಿ) ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದ ಶಿವಕುಮಾರ ಸುರಪುರಮಠ ಹೇಳಿದರು. ಭಾಗ್ಯನಗರದಲ್ಲಿನ ಆಲ್ ಇಂಡಿಯಾ ಇನ್ಸಿ-್ಟಟ್ಯೂಟ್ ಆಫ್ ಲೋಕಲ್ ಸೆಲ್ಫ್ ಗವರ್ನಮೆಂಟ್ ಸಂಸ್ಥೆಯ ಸ್ಥಾನಿಕ ಭವನದಲ್ಲಿ ಶನಿವಾರ ಜರುಗಿದ, ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮ ಮತ್ತು ಸ್ಯಾನಿಟರಿ ಇನ್ಸ್ಪೆಕ್ಟರ್ ಡಿಪ್ಲೋಮಾ ತರಬೇತಿಯಲ್ಲಿ ಉತ್ತೀರ್ಣರಾದರಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಮಹಾನಗರ ಸಭೆ, ಪಂಚಾಯಿತಿ ಕೂಡಾ ಅವಕಾಶ ಪಡೆಯಬಹುದು. ಖಾಸಗಿ ಕಂಪನಿಗಳಾದ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಹೊಟೇಲ್ ಅಲ್ಲದೆ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಸ್ಯಾನಿಟರಿ ಇನ್ಸ್ಪೆಕ್ಟರ್ ನೌಕರಿ ವ್ಯಾಪಕವಾಗಿವೆ. ವಿದ್ಯಾರ್ಥಿಗಳು ಕೇವಲ ಸ್ಥಳಿಯ ಮತ್ತು ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದ ವಿವಿಧ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಕೂಡಾ ನೌಕರಿ ಅವಕಾಶಗಳನ್ನು ಪಡೆಯಲು ಮುಂದಾಗಬೇಕು ಎಂದರು.
ಮುಖ್ಯ ಅತಿಥಿ ಬಾಗಲಕೋಟೆಯ ಅಹಿಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮು. ಎಸ್. ಡಿಸಿ. ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಆರೋಗ್ಯ ಸಂವರ್ಧನೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಆ ನಿಮಿತ್ತ ನಗರ, ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಸ್ಥಳಿಯ ಸಂಸ್ಥೆಗಳು ಸ್ಯಾನಿಟರಿ ಇನ್ಸ್ಪೆಕ್ಟರ್ ಅವರನ್ನು ನೇಮಕಾತಿ ಅವಕಾಶ ದೊರೆಯಲಿವೆ. ವಿದ್ಯೆ ಮತ್ತು ತರಬೇತಿ ನೀಡಿದ ಸಂಸ್ಥೆಯನ್ನು ಸದಾ ಸ್ಮರಿಸಬೇಕು. ಸಮಾಜದ ಸ್ವಚ್ಛತೆ ಬಗ್ಗೆ ತರಬೇತಿ ನೀಡುತ್ತಿರುವ ಎಐಐಎಲ್ಎಸ್ಜಿ ಸಂಸ್ಥೆಯು ಪ್ರಸಕ್ತ ವರ್ಷ ಶತಮಾನೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು.
2025 26 ಶೈಕ್ಷಣಿಕ ವರ್ಷದ ಸಾಲಿನಲ್ಲಿ ಸ್ಯಾನಿಟರಿ ಇನ್ಸಪೆಕ್ಟರ್ ಡಿಪ್ಲೋಮಾ ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದ ನೂತನ ಮಧುಕರ ಕಾಟೆ, ದ್ವಿತೀಯ ಸ್ಥಾನ ಪಡೆದ ನಾಗೇಶ ಕಲ್ಪತ್ರಿ ಮತ್ತು ತೃತೀಯ ಸ್ಥಾನ ಪಡೆದ ಸಂತೋಷ ಅವರಿಗೆ ಸನ್ಮಾನಿಸಲಾಯಿತು. ಬಾಗಲಕೋಟೆಯ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಯತೀಶ ಮೇಟಿ, ಬಾಗಲಕೋಟೆ ತಾಲೂಕು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವಾನಂದ ಡೊಳ್ಳಿನ, ಪ್ರಾಚಾರ್ಯ ಡಾ. ಸುರೇಶ ರಾನಡೆ ಮತ್ತು ಪ್ರಾಧ್ಯಾಪಕ ಡಾ. ಬಸವರಾಜ ಇಂಗಳಗೇರಿ, ಷಣ್ಮುಖ ಆದಿಯೇಂದ್ರ ಉಪಸ್ಥಿತರಿದ್ದರು. ನಿರೂಪಣೆ ಸರಸ್ವತಿ ಮಗದುಮ್ ನಿರೂಪಿಸಿದರು, ಆನಂದ ಹಂಪಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.