ಸೌಹಾರ್ದ ಕಾನೂನು ರದ್ದುಗೊಳಿಸಿ ಸಹಕಾರಿ ಕಾನೂನಿನಡಿ ವಿಲಿನಗೊಳಿಸುವ ಸಾಧ್ಯತೆ: ಶಾಸಕ ಸವದಿ
ಲೋಕದರ್ಶನ ವರದಿ
ಅಥಣಿ 29: ಸೌಹಾರ್ದ ಕಾನೂನು ರದ್ದುಗೊಳಿಸಿ ಸಹಕಾರಿ ಕಾನೂನಿನಡಿ ವಿಲಿನಗೊಳಿಸುವ ಸಾಧ್ಯತೆ ಇದೆ ಈ ಸಂಬಂಧ ಚರ್ಚೆ ನಡೆದಿದೆ ಎಂದು ಮಾಜಿ ಡಿಸಿಎಮ್ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ನಂದಗಾಂವ ಗ್ರಾಮದ ವಿವಿದೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಸೌಹಾರ್ದ ಕಾನೂನಿನಡಿ ನೊಂದಾಯಿತ ಅನೇಕ ಸಹಕಾರಿ ಸಂಘಗಳಲ್ಲಿ ಮತ್ತು ಬ್ಯಾಂಕುಗಳಲ್ಲಿ ಠೇವಣಿದಾರರ ಹಣ ದುರುಪಯೋಗ ಪಡೆಸಿಕೊಂಡ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ತಪ್ಪಿಸಲು ಸಹಕಾರಿ ಕಾನೂನಿನಡಿ ಸೌಹಾರ್ದ ಕಾನೂನನ್ನು ವಿಲಿನಗೊಳಿಸುವ ಪ್ರಕ್ರಿಯೆ ನಡೆದಿದೆ ಎಂದರು.
ಸಹಕಾರಿ ಸಂಘದ ಕಾನೂನುಗಳಲ್ಲಿ ಕೆಲ ಬದಲಾವಣೆ ಮತ್ತು ತಿದ್ದುಪಡಿ ಮಾಡುವ ರಾಜ್ಯ ಸರಕಾರ ಜಾರಿಗೆ ತಂದಿರುವ 7 ಜನರ ಸಮಿತಿಯ ಅಧ್ಯಕ್ಷನಾಗಿ ನಾನು ಕಾರ್ಯನಿರ್ವಹಿಸುತ್ತಿರುವೆ ಎಂದು ಅವರು ಸಹಕಾರಿ ಕಾನೂನುಗಳಲ್ಲಿ ಬದಲಾವಣೆಗಳು ಮತ್ತು ತಿದ್ದುಪಡಿ ಮಾಡುವ ದೃಷ್ಟಿಯಿಂದ ಸಲಹೆ ಸೂಚನೆಗಳಿದ್ದಲ್ಲಿ ನನ್ನ ನೇತೃತ್ವದ ಸಮಿತಿಗೆ ಕೊಡಬೇಕು ಎಂದರು.
ರಾಜ್ಯದ 21 ಡಿಸಿಸಿ ಬ್ಯಾಂಕುಗಳಲ್ಲಿ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ ಸಾಲ ವಿತರಣೆಯಲ್ಲಿ ಮೊದಲ ಸ್ಥಾನದಲ್ಲಿದೆ ಜೊತೆಗೆ ಬಿಡಿಸಿಸಿ ಬ್ಯಾಂಕ ಅತೀ ಹೆಚ್ಚು ಠೇವಣಿ ಹಣವನ್ನು ಕೂಡ ಸಂಗ್ರಹಿಸುವಲ್ಲಿ ಮೊದಲ ಸ್ಥಾನದಲ್ಲಿದೆ ಎಂದ ಅವರು ಸಾಲ ಪಡೆದುಕೊಂಡ ರೈತರು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸಬೇಕು ಎಂದು ಮನವಿ ಮಾಡಿದರು. ಸಹಕಾರ ಸಂಘದ ಲಾಕರ್ ಉದ್ಘಾಟಿಸಿ ಮಾತನಾಡಿದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಟ್ರ್ಯಕ್ಟರ್ ಖರೀದಿಗೆ, ನೀರಾವರಿಗಾಗಿ ಪೈಪಲೈನ್, ಹನಿ ನೀರಾವರಿ, ಹೈನುಗಾರಿಕೆಗಾಗಿ ಜಾನುವಾರುಗಳ ಖರೀದಿಗೆ ವರ್ಷಕ್ಕೆ ಶೇ.3ರ ಬಡ್ಡಿ ದರದಲ್ಲಿ ಬಿಡಿಸಿಸಿ ಬ್ಯಾಂಕ ಮೂಲಕ ಕೊಡುತ್ತೇವೆ ಆದರೆ ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಯಾವುದೇ ಕಾರಣ ಕೊಡದೆ ಮರುಪಾವತಿ ಮಾಡಲೇ ಬೇಕು ಎಂದು ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಡಮಾಡುವ ಆರ್ಥಿಕ ಯೋಜನೆಗಳನ್ನು ರೈತರಿಗೆ ತಲುಪಿಸುವ ಕಾರ್ಯ ಬಿಡಿಸಿಸಿ ಬ್ಯಾಂಕ ಮೂಲಕ ಮಾಡುತ್ರೇವೆ ಎಂದರು.
ಸಾನಿಧ್ಯವನ್ನು ನಾಂದಣಿ ಮಠದ ಸ್ವಸ್ತಿ ಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಮತ್ತು ನೇತೃತ್ವ ವಹಿಸಿದ್ದ ಭೂ ಕೈಲಾಸ ಮಂದಿರದ ಶ್ರೀ ಮಹಾದೇವ ಮಹಾರಾಜರು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ ಅಧ್ಯಕ್ಷ ಪರಪ್ಪ ಸವದಿ, ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಶೈಲ ಕಾಂಬಳೆ, ಗ್ರಾ.ಪಂ ಸದಸ್ಯ ರಾವಸಾಹೇಬ ಬಿ.ಪಾಟೀಲ, ಪ್ರಗತಿ ಪರ ರೈತ ಮುತ್ತಣ್ಣಾ ಕಾತ್ರಾಳ, ಲೆಕ್ಕ ಪರಿಶೋಧಕ ಸಂತೋಷ ಲಠ್ಠೆ, ಬಿಡಿಸಿಸಿ ಬ್ಯಾಂಕ ನಿಯಂತ್ರಣಾಧಿಕಾರಿ ಎಸ್.ಎಸ್.ನಂದೇಶ್ವರ, ಸಹಕಾರಿ ಧುರೀಣ ಅಪ್ಪು ನೇಮಗೌಡ, ಅರುಣ ಯಲಗುದ್ರಿ, ಡಿವೈಎಸ್.ಪಿ ಶ್ರೀಪಾದ ಜಲದೆ, ಪಿಎಸ್.ಐ ರವೀಂದ್ರ ನಾಯ್ಕೊಡಿ, ಬ್ಯಾಂಕ್ ನಿರೀಕ್ಷಕ ಚೇತನಕುಮಾರ ದಳವಾಯಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸಪ್ಪ ಗುಮಟಿ ವಹಿಸಿ ಮಾತನಾಡಿ, 1945 ರಲ್ಲಿ ಪ್ರಾರಂಭಗೊಂಡ ಸಹಕಾರಿ ಸಂಘ ಇಲ್ಲಿಯವರೆಗೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತ ಬಂದಿದೆ ಎಂದ ಅವರು ಸಹಕಾರಿ ಸಂಘದ ಕಟ್ಟಡ ಶೀಥಿಲಗೊಂಡಿದ್ದರಿಂದ ನೂತನ ಕಟ್ಟಡ ನಿರ್ಮಿಸಿದ್ದೇವೆ ಎಂದರು.
ನಮ್ನ ಸಹಕಾರಿ ಸಂಘಕ್ಕೆ 84 ಲಕ್ಷ ಲಾಭ ಗಳಿಕೆಯಾಗಿದ್ದು ಸಹಕಾರಿ ಸಂಘದ ಸದಸ್ಯರಿಗೆ ಶೇ.10 ರಷ್ಟು ಲಾಭಾಂಶ ನೀಡಲಾಗಿದೆ ಎಂದ ಅವರು ಬಿಡಿಸಿಸಿ ಬ್ಯಾಂಕಿನಿಂದ ಮತ್ತಷ್ಟು ಸಹಕಾರ ದೊರಕಿದಲ್ಲಿ ಮತ್ತಷ್ಟು ಸಹಕಾರಿ ಸಂಘ ಮತ್ತಷ್ಟು ಅಭಿವೃದ್ಧಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ನಿರ್ದೇಶಕ ಮಂಡಳಿ ಸದಸ್ಯ ಶಾಂತಿನಾಥ ನಂದೇಶ್ವರ ಮಾತನಾಡಿ, 75ವರ್ಷಗಳಿಗೂ ಹೆಚ್ಚು ಅವಧಿಯಿಂದ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿರುವ ನಂದಗಾಂವ ಗ್ರಾಮದ ವಿವಿಧ ಉದ್ದೇಶಗಳ ಪ್ರಾಥಮಿಕ ಕೃಷಿ ಸಹಕಾರಿ ಸಂಘಕ್ಕೆ ಇಂದು ನೂತನ ಕಟ್ಟಡದ ಭಾಗ್ಯ ಒಲಿದು ಬಂದಿದೆ ಎಂದ ಅವರು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸಿ ಎಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ನಾನಾಸಾಹೇಬ ಗಿರಿಗೌಡ, ನಿರ್ದೇಶಕ ಮಂಡಳಿಯ ರಾವಸಾಹೇಬ ಬಿ.ಪಾಟೀಲ, ತಾತ್ಯಾಗೌಡ ಪಾಟೀಲ, ಮಹಾವೀರ ಸಕಲಕನವರ, ಲಕ್ಕಪ್ಪ ತೋಳಿ, ಪರಗೊಂಡ ಸಕಲಕನವರ, ಧರೆಪ್ಪ ನಂದೇಶ್ವರ, ಶೇಖರ ಗಣಾಚೇರಿ, ಲಕ್ಚ್ಮೀ ಮುತ್ತಣ್ಣಾ ಕಾಗವಾಡ, ಮಲಾ ಸಿದ್ದಣ್ಣಾ ಪಡಸಲಗಿ, ಚೇತನಕುಮಾರ ದಳವಾಯಿ ಮತ್ತು ಮುಖ್ಯ ಕಾರ್ಯನಿರ್ವಾ ಹಕ ಅಧಿಕಾರಿ ಲಖಗೌಡ ಬಿ.ಪಾಟೀಲ ಸೇರಿದಂತೆ ಸಹಕಾರ ಸಂಂಘದ ಸದಸ್ಯರು, ಹಿತೈಷಿಗಳು ಉಪಸ್ಥಿತರಿದ್ದರು