ಸೌಂದತ್ತಿ

ಎಪಿಎಂಸಿ ಹಮಾಲಿ ಕಾರ್ಮಿಕರ ರಾಜ್ಯ ಸಮಾವೇಶ

ಎಪಿಎಂಸಿ ಹಮಾಲಿ ಕಾರ್ಮಿಕರ ರಾಜ್ಯ ಸಮಾವೇಶ

ಸವದತ್ತಿ: ದೇಶದ ಅಭಿವೃದ್ಧಿಗೆ ರೈತರು ಎಷ್ಟು ಪ್ರಮುಖವೋ ಅಷ್ಟೇ ಸಾಮಾಜಿಕ ವಲಯದಲ್ಲಿ ಶ್ರಮಜೀವಿಗಳಾದ ಹಮಾಲರು ಪ್ರಮುಖರಾಗಿದ್ದು, ಅವರ ಬದುಕಿಗೆ ಉತ್ತಮ ಕಾಯಕಲ್ಪವನ್ನು ಕಲ್ಪಿಸುವಂತ ವ್ಯವಸ್ಥೆಗಳಾಗಬೇಕಿವೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಸ್ಥಳೀಯ ಎಪಿಎಮ್ಸಿ ಆವರಣದಲ್ಲಿ  ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಇವರಿಂದ ಹಮ್ಮಿಕೊಂಡ ಎಪಿಎಮ್ಸಿ ಹಮಾಲಿ ಕಾರ್ಮಿಕರ 3ನೇ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಎಪಿಎಮ್ಸಿಯಲ್ಲಿ ನಾನು ಒಬ್ಬ ವ್ಯಾಪಾರಸ್ಥನಾಗಿ 18 ವರ್ಷಗಳಿಂದ ಶ್ರಮಿಕರಾದ ಹಮಾಲರ ಬದುಕನ್ನು ನೋಡಿದ್ದು, ಇಲ್ಲಿಯವರೆಗೆ ಅವರಿಗೆ ಶಾಸ್ವತವಾದಂತ ನೆಲೆ ಇಲ್ಲದಾಗಿದೆ ಎಂದರು. ಎಪಿಎಮ್ಸಿಗೆ ಮಾರಕವಾಗಿರುವ ಕಾಯ್ದೆಯ ತಿದ್ದುಪಡಿಯನ್ನು ನಮ್ಮ ಸಿದ್ದರಾಮಯ್ಯನವರ ಸರಕಾರ ರದ್ದುಗೊಳಿಸುವ ಮೂಲಕ ಮತ್ತೆ ಎಪಿಎಮ್ಸಿಗೆ ಪುನಃಶ್ಚೇತನ ನೀಡುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಅತೀ ಶೀಘ್ರದಲ್ಲಿ ಹಮಾಲಿ ಕಾರ್ಮಿಕರಿಗೆ ಉತ್ತಮ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಸರಕಾರ ಉತ್ತಮ ಕ್ರಮಕೈಗೊಳ್ಳುವ ಭರವಸೆ ನನಗಿದ್ದು, ಹಮಾಲಿ ಕಾರ್ಮಿಕರ 9ಬೇಡಿಕೆಗಳ ಕುರಿತು ಡಿಸೆಂಬರನಲ್ಲಿ ನಡೆಯುವ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಅವರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದರು.

ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿ, ಓದು ಬರಹ ಬರದೆ ಇರುವಂತ ಹಮಾಲಿ ಕಾರ್ಮಿಕರ ಬದುಕು ಅತಂತ್ರವಾಗಿದ್ದು, ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರವಾಗಿ ಸಾಗುತ್ತಿದೆ ಎಂದರು.

ಸವದತ್ತಿ ಎಪಿಎಮ್ಸಿ ಅಧ್ಯಕ್ಷ ಚಂದ್ರು ಪೂಜೇರ ಮಾತನಾಡಿ, ಎಪಿಎಮ್ಸಿ ಕಾಯ್ದೆಯ ತಿದ್ದುಪಡಿಯ ವಿಚಾರದಲ್ಲಿ ರಾಜ್ಯದ ಎಲ್ಲ ಎಪಿಎಮ್ಸಿಗಳು ಇಂದು ಕೇವಲ ಜೀವಂತ ಶರೀರವಾಗಿ ಮಾತ್ರ ಉಳಿದುಕೊಂಡಿದ್ದು, ಈ ಕಾಯ್ದೆಯು ರದ್ದುಗೊಂಡಾಗ ಮಾತ್ರ ಎಪಿಎಮ್ಸಿಗಳು ಹಾಗೂ ಎಪಿಎಮ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲರು ಅಸ್ತಿತ್ವದಲ್ಲಿ ಉಳಿಯಲು ಸಾಧ್ಯ ಎಂದರು.

ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೈಬು ಜೈನೇಖಾನ ಮಾತನಾಡಿ, ಕೇಂದ್ರ ಸರಕಾರವು ಎಲ್ಲವನ್ನು ಖಾಸಗಿಕರಣಗೊಳಿಸಿ ದೇಶದಲ್ಲಿ ದುಡಿಯುವ ಜನರನ್ನು ಪ್ರಪಾತಕ್ಕೆ ತಳ್ಳುವ ಕಾರ್ಯವನ್ನು ಮಾಡುತ್ತಿದ್ದು, ಶ್ರಮಿಕರಿಗೆ ಉತ್ತಮ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಿದೆ ಎಂದರು.

ಕನರ್ಾಟಕ ರಾಜ್ಯ ಹಮಾಲಿ ಕಾರ್ಮಿಕರ ಫಡರೇಶನ್ ರಾಜ್ಯಾಧ್ಯಕ್ಷ ಕೆ.ಮಹಾಂತೇಶ ಅಧ್ಯಕ್ಷತೆವಹಿಸಿ ಮಾತನಾಡಿ, ಕಾಯಕ ನಿಧಿಯಲ್ಲಿ ಇಂದು ಶ್ರಮಿಕರಿಗೆ ಅನೇಕ ಲಾಭಗಳು ದೊರಕುತ್ತಿದ್ದು, ಇನ್ನು ಸಾಕಷ್ಟು ಬೇಡಿಕೆಗಳನ್ನು ಸರಕಾರಗಳು ಈಡೇರಿಸುವ ಕಾರ್ಯಗಳಾಗಬೇಕಿವೆ ಎಂದರು. 60 ವರ್ಷಗಳಾದ ಹಮಾಲಿ ಕಾರ್ಮಿಕರಿಗೆ ಒಂದು ಬಾರಿ ಕನಿಷ್ಠ 1ಲಕ್ಷ ರೂ.ಗಳ ನಿವೃತ್ತಿ ಪರಿಹಾರವನ್ನು ನೀಡಬೇಕಿದ್ದು, ಇದರಂತೆ ನಮ್ಮ 9 ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರಕಾರವು ಜವಾಬ್ದಾರಿವಹಿಸಬೇಕೆಂದರು. ಹೋರಾಟವಿಲ್ಲದೆ ಯಾವುದೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲದಾಗಿದ್ದು, 2024ರ ಬಜೆಟ್ ಪೂರ್ವದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ರಾಜ್ಯಾದ್ಯಂತ ಹೋರಾಟದ ಮೂಲಕ ಸಂಘಟಿಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದರು.

ಜಿ.ಕೆ.ವೆಂಕಟೇಶ, ಟಿ.ಯಶವಂತ, ಸದಾಶಿವ ಕೌಜಲಗಿ, ಮದನಲಾಲ ಚೋಪ್ರಾ, ಎಲ್.ಎಸ್.ನಾಯಕ, ಚಂದ್ರಣ್ಣ ಶಾಮರಾಯನವರ, ಬಸವರಾಜ ಕಾರದಗಿ, ಸಂಗಯ್ಯ ವಡಿಯರ, ಮಾರುತಿ ಬಸಲಿಗುಂದಿ, ಸಿದ್ದಪ್ಪ ನಡುವಿನಹಳ್ಳಿ, ಶಿವಾನಂದ ಪಟ್ಟಣಶೆಟ್ಟಿ, ಮಲ್ಲಿಕಸಾಬ ಬಾಗೋಜಿಕೊಪ್ಪ, ಶಂಕರಯ್ಯ ಪಾಟೀಲ, ಬಸವರಾಜ ಹೂಲಿಕಟ್ಟಿ, ನಿರುಪಾದಿ ಬೆನಕಲ್ಲ  ಹಾಗೂ ಸವದತ್ತಿಯ ಕಣವಿ ಬಸವೇಶ್ವರ ಹಮಾಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಹುಸೇನ ನದಾಫ ನಿರೂಪಿಸಿ ವಂದಿಸಿದರು.


ಸುದ್ದಿ ಓದಿ