ಧಾರವಾಡ - ಹುಬ್ಬಳ್ಳಿ

ಕೆಸಿಡಿ ಕಾಲೇಜಿನಲ್ಲಿ ಶುಲ್ಕ ಏರಿಕೆ ವಿರೋಧಿಸಿ ಎಐಡಿಎಸ್‌ಒ ಪ್ರತಿಭಟನೆ

ಕೆಸಿಡಿ ಕಾಲೇಜಿನಲ್ಲಿ ಶುಲ್ಕ ಏರಿಕೆ ವಿರೋಧಿಸಿ ಎಐಡಿಎಸ್‌ಒ ಪ್ರತಿಭಟನೆ

ಲೋಕದರ್ಶನ ವರದಿ 

ಧಾರವಾಡ, ಜು.23: ಕೆಸಿಡಿ ವಿಜ್ಞಾನ ಮಹಾವಿದ್ಯಾಲಯದ ಬಿಎಸ್ಸಿ ಹಾಗೂ ಬಿಸಿಎ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಏರಿಕೆ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಎಐಡಿಎಸ್‌ಒ  ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಕಾಲೇಜು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು.  

ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಮಾತನಾಡಿ, ಈ ವರ್ಷದಿಂದ ಬಿಎಸ್ಸಿ ಕೋರ್ಸ್ನ ಪ್ರವೇಶ ಶುಲ್ಕವನ್ನು 6,699ರಿಂದ 13,112ಕ್ಕೆ ಏರಿಕೆ ಮಾಡಲಾಗಿದ್ದು, 6,413 ಹೆಚ್ಚಳವಾಗಿದೆ. ಬಿಸಿಎ ಕೋರ್ಸ್ನ ಶುಲ್ಕವನ್ನು 25,000ರಿಂದ 34,522ಕ್ಕೆ ಹೆಚ್ಚಿಸಲಾಗಿದ್ದು, 9,522 ಹೆಚ್ಚಳವಾಗಿದೆ ಎಂದು ತಿಳಿಸಿದರು.  

ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಬಹುತೇಕ ವಿದ್ಯಾರ್ಥಿಗಳು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದವರಾಗಿದ್ದು, ಏಕಾಏಕಿ ಶುಲ್ಕ ಹೆಚ್ಚಳ ಮಾಡಿರುವುದರಿಂದ ಹಲವರು ಇನ್ನೂ ಶುಲ್ಕ ಪಾವತಿಸಲು ಸಾಧ್ಯವಾಗಿಲ್ಲ. ಈ ನಿರ್ಧಾರ ವಿದ್ಯಾರ್ಥಿಗಳ ಶಿಕ್ಷಣದ ಮೇಲೆಯೇ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.  

ಹೆಚ್ಚಿಸಲಾದ ಶುಲ್ಕವನ್ನು ಕೂಡಲೇ ಹಿಂಪಡೆಯಬೇಕು. ಈಗಾಗಲೇ ಹೆಚ್ಚುವರಿ ಶುಲ್ಕ ಪಾವತಿಸಿರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಮೊತ್ತವನ್ನು ಮರುಪಾವತಿಸಬೇಕು ಎಂದು ಆಗ್ರಹಿಸಿದರು.  ಮನವಿ ಸ್ವೀಕರಿಸಿದ ಕಾಲೇಜಿನ ಪ್ರಾಂಶುಪಾಲರು, ವಿಷಯವನ್ನು ಪರೀಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.  ಈ ಸಂದರ್ಭದಲ್ಲಿ ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಸಿಂಧು ಕೌದಿ, ಸಂಘಟನಾ ಕಾರ್ಯಕರ್ತರಾದ ಶಾಂತೇಶ್ ನಂದಿಕೋಳಮಠ, ಸಿದ್ದು ಚಿಪ್ಪಲಕಟ್ಟಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ