ಭಕ್ತಿಭಾವ, ವೈಭವದ ಅದ್ಭುತ ಸಂಗಮ ; ಮುಂಡಗೋಡದಲ್ಲಿ ಮಾರಿಕಾಂಬಾ ದೇವಿಯ ಭವ್ಯ ರಥೋತ್ಸವ!
ಭಕ್ತಿಭಾವ, ವೈಭವದ ಅದ್ಭುತ ಸಂಗಮ ; ಮುಂಡಗೋಡದಲ್ಲಿ ಮಾರಿಕಾಂಬಾ ದೇವಿಯ ಭವ್ಯ ರಥೋತ್ಸವ!
ಲೋಕದರ್ಶನ ವರದಿ
ಮುಂಡಗೋಡ 05: ಪಟ್ಟಣದ ಆರಾಧ್ಯ ದೈವವಾಗಿರುವ ಮಾರಿಕಾಂಬಾ ದೇವಿಯ ಭವ್ಯ ರಥೋತ್ಸವವು ಬುಧವಾರ ಶ್ರದ್ಧಾ-ಭಕ್ತಿಯಿಂದ ಅದ್ಧೂರಿ ವೈಭವದಿಂದ ನೆರವೇರಿತು.
ಬೆಳಗಿನ ಜಾವ ವಿಶೇಷ ಪೂಜಾ ವಿಧಿವಿಧಾನಗಳೊಂದಿಗೆ ಆರಂಭವಾದ ಈ ರಥೋತ್ಸವದಲ್ಲಿ ಸಾವಿರಾರು ಭಕ್ತರು ಉತ್ಸಾಹದಿಂದ ಪಾಲ್ಗೊಂಡು ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾದರು. ದೇವಾಲಯದ ಆವರಣದಲ್ಲಿ ಬೆಳಿಗ್ಗೆ 8.51 ಗಂಟೆಗೆ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪುಷ್ಪಗಳಿಂದ ಅಲಂಕರಿಸಲ್ಪಟ್ಟ ಭವ್ಯ ರಥದಲ್ಲಿ ಅಮ್ಮನವರು ವಿರಾಜಮಾನರಾದ ಕ್ಷಣ ಭಕ್ತರ ಜಯಘೋಷಗಳಿಂದ ಮುಗಿಲುಮುಟ್ಟಿತು. ಅವಧೂತ ರಾಜೇಂದ್ರ ಭಟ್ಟರು ರಥೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್. ಪಾಟೀಲ, ತಹಶೀಲ್ದಾರ್ ಶಂಕರ ಗೌಡಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷಕುಮಾರ ಎಚ್. ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಭವ್ಯ ಮೆರವಣಿಗೆ: ದೇವಾಲಯದ ಮುಂಭಾಗದಿಂದ ಆರಂಭವಾದ ರಥ ಸಂಚರಣೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ರಥ ಸಾಗುವಾಗ ಭಕ್ತರು ಬಾಳೆಹಣ್ಣು ಹಾಗೂ ಉತ್ತತ್ತಿ ಎಸೆಯುವ ಮೂಲಕ ತಮ್ಮ ಭಕ್ತಿ ಭಾವ ವ್ಯಕ್ತಪಡಿಸಿದರು. ಮಂಗಳವಾದ್ಯಗಳ ನಾದ, ಭಕ್ತರ ಜಯಘೋಷ ಮತ್ತು ಸಂಪ್ರದಾಯಬದ್ಧ ಆಚರಣೆಗಳ ನಡುವೆ ದೇವಿಯ ದಿವ್ಯ ಮೂರ್ತಿ ಸಹಸ್ರಾರು ಭಕ್ತರಿಗೆ ದರ್ಶನ ನೀಡಿತು.
ಚೌತಮನೆ ಪೀಠದಲ್ಲಿ ಪ್ರತಿಷ್ಠಾಪನೆ: ಭವ್ಯ ಮೆರವಣಿಗೆಯ ಮೂಲಕ ಆಗಮಿಸಿದ ಅಮ್ಮನವರನ್ನು ಮಧ್ಯಾಹ್ನ 1.45 ಗಂಟೆಗೆ ಚೌತಮನೆ ಪೀಠದಲ್ಲಿ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಯಿತು. ನಂತರ ಭಕ್ತರಿಗೆ ಅನ್ನಸಂತರೆ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗಣ್ಯರ ಉಪಸ್ಥಿತಿ: ಶಾಸಕ ಶಿವರಾಮ ಹೆಬ್ಬಾರ ಅವರು ರಥೋತ್ಸವದಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದು ಕ್ಷೇತ್ರದ ಜನತೆಯ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಬಿಗಿ ಭದ್ರತಾ ವ್ಯವಸ್ಥೆ: ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸಿಪಿಐ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ಒಟ್ಟಾರೆ, ಮುಂಡಗೋಡದ ಮಾರಿಕಾಂಬಾ ದೇವಿಯ ರಥೋತ್ಸವವು ಭಕ್ತಿಭಾವ, ಸಂಸ್ಕೃತಿ ಮತ್ತು ಪರಂಪರೆಯ ವೈಭವವನ್ನು ಪ್ರತಿಬಿಂಬಿಸುವ ಅಪೂರ್ವ ಆಚರಣೆಯಾಗಿ ಯಶಸ್ವಿಯಾಗಿ ನೆರವೇರಿತು.