ಉತ್ತುಂಗದ ಹಾದಿಯಲ್ಲಿನ ಸಾಧಕಿಯರಿಗೊಂದು ನಮನ
ರಾಣೇಬೆನ್ನೂರ 21: ಜಗತ್ತಿನ ಸೃಷಿ,್ಟ ಸ್ಥಿತಿ, ಲಯಕ್ಕೆ ಕಾರಣೀಕರ್ತಳು ಮಹಿಳೆ. ಸರಳ ಜೀವನ, ಸಮ್ಮಾನ ಜೀವನ, ಸ್ವಾಭಿಮಾನದ ಜೀವನ ಮತ್ತು ಋತು ಆಧಾರಿತ ಬೆಳೆ ಪದ್ಧತಿ, ಕೃಷಿಯಲ್ಲಿನ ಏಳು ಬೀಳುಗಳ ಮೂಲಕ ಸಮಗ್ರವಾದ ಮಿಶ್ರ ಬೇಸಾಯ ಪದ್ಧತಿಯನ್ನು ಈ ದೇಶದ ಪ್ರತಿಯೊಬ್ಬ ರೈತರೂ ತಮ್ಮ ನಿತ್ಯದ ಕೃಷಿ ಕಾಯಕದಲ್ಲಿ ನಿರತರಾದಾಗ ಮಾತ್ರ ಉತ್ತಮ ಆಹಾರ, ದವಸ-ಧಾನ್ಯಗಳು, ಒದಗಿಸಲು ಸಾಧ್ಯವಾಗಲಿದೆ ಎಂದು ರೈತ ಮಹಿಳಾ ಸಾಧಕಿ ಕವಿತಾ ಮಿಶ್ರಾ ಹೇಳಿದರು.
ಅವರು ಗುರುವಾರ ನಗರ ಹೊರವಲಯದ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಸಾಧಕ ರೈತ ಮಹಿಳೆಯರ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮಹಿಳೆಯರು ಈ ದೇಶದ ಪ್ರಥಮ ಕೃಷಿ ಕಾರ್ಯದಲ್ಲಿ ತೊಡಗಿಕೊಂಡು ಅದರಲ್ಲಿ ಸಾಧನೆ ಮೆರೆದ ಭವ್ಯ ಇತಿಹಾಸವಿದೆ. ಮಹಿಳೆಯರಿಂದಲೇ ಆರಂಭದಲ್ಲಿ ಕೃಷಿ ಕಾಯಕ ನಡೆದಿರುವ ಭವ್ಯ ಪರಂಪರೆಯಿದೆ. ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮೆರೆಯುವದ ಮೂಲಕ ಈ ದೇಶದ ಸಮಗ್ರ ಪ್ರಗತಿಗೆ ಸಹಕಾರಿಯಾಗಿದ್ದಾಳೆ ಎಂದ ಅವರು ಸಮಾಜಮುಖಿ ಕಾರ್ಯದಲ್ಲಿ ಮಹಿಳೆ ಮುಂದಾದಾಗ ಮಾತ್ರ ಸಮಾಜದಲ್ಲಿ ಸಮಾನತೆ ಶಾಂತಿ ನೆಲೆಸಲು ಸಾಧ್ಯವಾಗುವುದು ಎಂದರು.
ಇನ್ನೋರ್ವ ಅತಿಥಿ ವಾಗ್ಮಿ ಭಾವನಾ ಆರ್. ಗೌಡರ ಅವರು ಪ್ರತಿಯೊಬ್ಬರ ಜೀವನ ರೂಪಿಸುವಲ್ಲಿ ತಾಯಿಯ ಪಾತ್ರ ಪ್ರಮುಖವಾಗಿದೆ. ತಾಯಿಯೇ ಮೊದಲ ಪಾಠಶಾಲೆ. ಸಂಸ್ಕಾರ, ಸಂಸ್ಕೃತಿ, ರಾಷ್ಟ್ರ ಭಕ್ತಿ, ತಾಯ್ನಾಡಿಗೆ ತೋರುವ ಪ್ರೀತಿ, ಸಾಕ್ಷಾತ್ಕಾರ, ಜೀವನ ಸದುಪಯೋಗ, ಸನಾತನ ಧರ್ಮದ ಆಚರಣೆ ಹಾಗೂ ಅಪ್ಪ ಅಂದರೆ ಮನೆಯ ಕಾಮಧೇನು ತಾಯಿ ಗುರು ಈ ಇಬ್ಬರನ್ನು ಮೊದಲು ಗೌರವಿಸದೆ ಹೋದರೆ ಯಾವುದೇ ಕಾರಣಕ್ಕೂ ಸಂಸ್ಕಾರವಂತರಾಗಲು ಸಾಧ್ಯವಿಲ್ಲ ಎಂದರು.
ಆಡಳಿತ ಮಂಡಳಿಯ ನಿರ್ದೇಶಕಿ ವಜ್ರೇಶ್ವರಿ ಲದ್ವಾ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷ ವಾಸುದೇವಸಾ ಲದ್ವಾ, ಕಾರ್ಯದರ್ಶಿ ನಾಗೇಶ ಮುರಡಣ್ಣವರ, ನಿರ್ದೇಶಕರಾದ ತುಳಜಪ್ಪ ವ್ಹಿ. ಲದ್ವಾ, ಡಾ. ಎಂ. ಎಸ್. ಬಣಕಾರ, ಡಾ.ಎಂ ಎಂ ಅನಂತರೆಡ್ಡಿ, ಡಾ.ಬಿ.ಆರ್ ಸಾವುಕಾರ, ಮಲ್ಲಿಕಾರ್ಜುನ ಅಂಗಡಿ, ಪರಶುರಾಮ ಕಬಾಡಿ, ಮಂಜುನಾಥ ಮಾನ್ವಿ ಮತ್ತಿತರ ಗಣ್ಯರು, ಉಪನ್ಯಾಸಕರು ಉಪಸ್ಥಿತರಿದ್ದರು.
ಪ್ರಜ್ಙಾ ಮೆಹರವಾಡೆ ಸ್ವಾಗತಿಸಿದರು. ಜೀವನ ಮಡಿವಾಳರ ನಿರೂಪಿಸಿ ಖನೀಜ್ ಜುವೇರಿಯಾ ಪ್ರಾಸ್ಥಾವಿಕವಾಗಿ ಮಾತನಾಡಿದರು. ಸಂಭ್ರಮ್ ಸೀತಾಳದ ವಂದಿಸಿದರು.