ಕಾರವಾರ

ಕುದಲೆಳೆಯ ಅಂತರದಲ್ಲಿ ತಪ್ಪಿದ ದುರಂತ! ರಸ್ತೆ ಮಧ್ಯೆ ಧರೆಗುರುಳಿದ ಬೃಹತ್ ಮರ!

ಕುದಲೆಳೆಯ ಅಂತರದಲ್ಲಿ ತಪ್ಪಿದ ದುರಂತ! ರಸ್ತೆ ಮಧ್ಯೆ ಧರೆಗುರುಳಿದ ಬೃಹತ್ ಮರ!

ಲೋಕದರ್ಶನ ವರದಿ  

ಮುಂಡಗೋಡ 05 : ಮುಂಡಗೋಡ ತಾಲೂಕಿನ ಬೆಡಸಗಾವ್ ಹಿ ಮಳಗಿ ಮುಖ್ಯರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಗಾಳಿ-ಮಳೆಯ ಅಬ್ಬರಕ್ಕೆ ಬೃಹತ್ ಗಾತ್ರದ ಮುಳ್ಳು ಕಂಟಿಗಳಿದ್ದ ಮರ ರಸ್ತೆ ಮಧ್ಯೆ ಧರೆಗುರುಳಿದ್ದು, ಕೆಲವೇ ಕ್ಷಣಗಳಲ್ಲಿ ಅದೇ ಮಾರ್ಗವಾಗಿ ಬರುತ್ತಿದ್ದ ಕೆಎಸ್‌ಆರ್ಟಿಸಿ ಬಸ್ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದೆ. ಮರ ರಸ್ತೆ ಮಧ್ಯೆ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ರಸ್ತೆ ಎರಡೂ ಬದಿಗಳಲ್ಲಿ ಮನೆಗಳಿದ್ದು, ಮಳಗಿ, ತೋಗರಳ್ಳಿ, ಕುರ್ಲಿ ಹಾಗೂ ಬೆಡಸಗಾಂವ ಭಾಗದ ವಿದ್ಯಾರ್ಥಿಗಳು ಪ್ರತಿದಿನ ಇದೇ ರಸ್ತೆಯನ್ನು ಬಳಸುತ್ತಾರೆ. ಅಲ್ಲದೆ ಸಾರ್ವಜನಿಕರು ಸಹ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಇಂದು ಭಾನುವಾರವಾಗಿದ್ದರಿಂದ ಶಾಲೆಗಳಿಗೆ ರಜೆ ಇತ್ತು. ಇಲ್ಲದಿದ್ದರೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸುವ ಸಮಯವೇ ಆಗಿದ್ದರಿಂದ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.  

ಮರ ಬಿದ್ದಿರುವ ಮಾಹಿತಿ ದೊರೆಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಸಿಬ್ಬಂದಿ, ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಬೆಡಸಗಾಂವ ಗ್ರಾಮ ಪಂಚಾಯತ್ನ ಮಾಜಿ ವಾರ್ಡ್‌ ಸದಸ್ಯ ನಾಗರಾಜ್ ಎನ್‌. ನಾಯ್ಕ ತಮ್ಮ ಸ್ನೇಹಿತರೊಂದಿಗೆ ಸ್ಥಳಕ್ಕೆ ಧಾವಿಸಿದರು. ಸಾರ್ವಜನಿಕರ ಸಹಕಾರದೊಂದಿಗೆ ಮರವನ್ನು ಕತ್ತರಿಸಿ ರಸ್ತೆಯಿಂದ ತೆರವುಗೊಳಿಸಿ ವಾಹನ ಸಂಚಾರವನ್ನು ಪುನಃ ಆರಂಭಿಸುವಲ್ಲಿ ಯಶಸ್ವಿಯಾದರು. 


ಸುದ್ದಿ ಓದಿ