ದೇಶದ ಅಭಿವೃದ್ಧಿಗೆ ಪೂರಕ ಬಜೆಟ್
ಲೋಕದರ್ಶನ ವರದಿ
ಅಥಣಿ 02: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ್ ನೇರ್ಲಿ ಹೇಳಿದರು.
ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿದ ಅವರು ಸಮತೋಲನದ ಈ ಬಜೆಟ್ ಮುಂದಿನ 25 ವರ್ಷಗಳ ದೂರದೃಷ್ಟಿ ಉಳ್ಳದ್ದಾಗಿದೆ. ಕೃಷ್ಣಾ-ಪೆನ್ನಾರ, ಗೋದಾವರಿ-ಪೆನ್ನಾರ್, ಕಾವೇರಿ-ಪೆನ್ನಾರ್ ನದಿಗಳ ಜೊಡಣೆ ಯೋಜನೆಗೆ ಚಾಲನೆ ನೀಡಲಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ 60 ಲಕ್ಷ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗಿದೆ. 25 ಸಾವಿರ ಕಿಲೋ ಮೀಟರ್ ಹೈವೆ ನಿರ್ಮಾಣಕ್ಕೆ ಬಜೆಟ್ನಲ್ಲಿ ಅನುದಾನ ಮೀಸಲಿಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶದಲ್ಲಿರುವ 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗಿದೆ ಜೊತೆಗೆ ಎಲ್ಲ ಅಂಗನವಾಡಿಗಳಿಗೆ ಆಡಿಯೋ ಹಾಗೂ ವಿಡಿಯೋ ಸೌಲಭ್ಯಗಳನ್ನು ನೀಡುವ ಯೋಜನೆಗೆ ಚಾಲನೆ ನೀಡಲಾಗಿದೆ. ಕೇಂದ್ರ ಸರಕಾರದಿಂದ ರಾಜ್ಯ ಸರಕಾರಗಳಿಗೆ 1 ಲಕ್ಷ ಕೋಟಿ ರೂ.ಗಳ ಸಾಲವನ್ನು 50 ವರ್ಷಗಳ ಅವಧಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಗೆ, ದೇಶದಲ್ಲಿ 2022 ರಿಂದಲೇ 5ಜಿ ಆರಂಭಿಸಲಾಗುವುದು ಮತ್ತು ದೇಶದ ಗ್ರಾಮೀಣ ಪ್ರದೇಶದಲ್ಲಿ ಆಪ್ಟಿಕಲ್ ಫೈಬರ್ ಅಳವಡಿಕೆ ಯೋಜನೆಗೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಚಾಲನೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯ ಕೃಷಿ ಮಾಡುವ ರೈತರಿಗೆ ಹಾಗೂ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ರೈತರಿಗೆ ಆರ್ಥಿಕ ಸಹಾಯ ನೀಡುವ ಯೋಜನೆಗೆ, ದೇಶದ 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕ್ ಸ್ಥಾಪನೆ ಜೊತೆಗೆ ಅಂಚೆ ಕಛೇರಿಯಲ್ಲಿಯೂ ಬ್ಯಾಂಕ್ ಸೌಲಭ್ಯ ಒದಗಿಸುವ ಯೋಜನೆಗೆ, ಹರ್ ಘರ್ ನಲ್ ಸೇ ಜಲ ಯೋಜನೆಯಡಿ 60000 ಕೋಟಿ ರೂ.ಅನುದಾನದಲ್ಲಿ 3.8 ಕೋಟಿ ಮನೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವ ಯೋಜನೆಗೆ, ಪಿ.ಎಮ್ ಅವಾಸ ಯೋಜನೆಯಡಿ 18 ಲಕ್ಷ ಮನೆಗಳ ನಿರ್ಮಾಣದ ಯೋಜನೆಗೆ ಬಜೆಟ್ನಲ್ಲಿ ಅನುದಾನ ಮೀಸಲಿಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2022 ರ ಈ ಬಜೆಟ್ ರೈತರ, ಬಡವರ, ಮಧ್ಯಮ ವರ್ಗದ, ಉದ್ಯಮಿಗಳ, ಸಣ್ಣ ವ್ಯಾಪಾರಸ್ಥರ, ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗ ಜನಸ್ನೇಹಿ ಬಜೆಟ್ ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.