ಜಮಖಂಡಿ

ಪ್ರಾಣಿಜನ್ಯ ರೋಗಗಳ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ

ಪ್ರಾಣಿಜನ್ಯ ರೋಗಗಳ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ

ಜಮಖಂಡಿ, 11 : ಹುಚ್ಚು ನಾಯಿ ಕಡಿತದ ರೇಬೀಸ್ ರೋಗ ಮಾರಣಾಂತಿಕ ರೋಗವಾಗಿದ್ದು ಆ ದಿಸೆಯಲ್ಲಿ ಜನಜಾಗೃತಿ ವಹಿಸುವುದು ಅತ್ಯಗತ್ಯ ಎಂದು ಜಮಖಂಡಿ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ,ಆರಿ​‍್ಬ.ನಾಗರಳ್ಳಿ ಹೇಳಿದರು.    

 ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್,ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಬಾಗಲಕೋಟೆ ಜಿಲ್ಲಾ ಪ್ರಾಣಿದಯಾ ಸಂಘ ಸಂಯುಕ್ತ ಆಶ್ರಯದಲ್ಲಿ ವಿಶ್ವ ರೇಬೀಸ್ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರಾಣಿಜನ್ಯ ರೋಗಗಳ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.    

ಸಾಕು ನಾಯಿಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಅದರಲ್ಲೂ ಬೀದಿ ನಾಯಿಗಳ ಚಲನ,ವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ಜಾಗರೂಕತೆಯಿಂದ ಇರಬೇಕು. ಹುಚ್ಚುನಾಯಿ ರೋಗದ ಹೆಸರು ಕೇಳಿದ ಕೂಡಲೇ ಭಯಬೀತಿ ಆವರಿಸುತ್ತದೆ. ಇದು ಮೈಮನ ನಡುಕು ಹುಟ್ಟಿಸುವ ಪ್ರಾಣಿಜನ್ಯ ರೋಗವಾಗಿದ್ದು ಲಿಸ್ಸಾ ಎಂಬ ವೈರಾಣುವಿನಿಂದ ಹರಡುವ ಮಾರಣಾಂತಿಕ ರೋಗವಾಗಿದೆ.ಒಮ್ಮೆ ಈ ರೋಗಕ್ಕೆ ತುತ್ತಾಗಿ ಸರಿಯಾದ ರೀತಿಯಲ್ಲಿ ಉಪಚಾರ ಕೈಗೊಳ್ಳದಿದ್ದರೆ ಜೀವಕ್ಕೆ ಕಂಟಕ ಎದುರಾಗುತ್ತದೆ ಎಂದು ಎಚ್ಚರಿಸಿದರು.    

ಸೆಪ್ಟೆಂಬರ್ 28 ರಂದು ವಿಶ್ವ ಆರೋಗ್ಯ ಸಂಸ್ಥೆಯು ಲಸಿಕೆ ಕಂಡು ಹಿಡಿದ ಫ್ರೆಂಚ್ ವಿಜ್ಞಾನಿ ಲೂಯಿಸ್ ಪಾಶ್ಚರ್ ಅವರ ಪುಣ್ಯತಿಥಿಯ ಸೆ,28 ಆ ದಿನವನ್ನು ವಿಶ್ವ ರೇಬೀಸ್ ದಿನವನ್ನಾಗಿ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ ಎಂದ ಅವರು, ಮೂಕ ನಾಯಿಗಳು ಸ್ನೇಹಮಯಿಗಳಾಗಿವೆಲ್ಲದೇ ಆಜ್ಞೆಪಾಲಕ ಪ್ರಾಣಿಗಳೆಂಬ ಖ್ಯಾತಿ ಪಡೆದಿವೆ. ಹಿರಿಯರ ಸಂಗಾತಿ,ಮಕ್ಕಳೊಂದಿಗೆ ಆಟೋಟಗಳನ್ನು ಆಡುವ ಸ್ನೇಹಜೀವಿಗಳಾಗಿ ಗೃಹ ಪಾಲಕಗಳಾಗಿ ನಿಷ್ಟೆಬದ್ದತೆಗೆ ಹೆಸರವಾಸಿಗಳಾಗಿವೆ.ಅದಾಗ್ಯೂ ಇಂಥ ಪ್ರಾಣಿಯಿಂದ ಮಾನವನ ಜೀವಕ್ಕೆ ಒಮ್ಮೊಮ್ಮೆ ಅಪಾಯದ ಕರೆಗಂಟೆ ಬರುತ್ತದೆ. ಕಾರಣ ನಾಯಿ  ಸಲಹುವರು, ಸಾರ್ವಜನಿಕರು ಬಹು ಎಚ್ಚರಿಕೆಯಿಂದ ಇರಬೇಕಾದ ಪ್ರಸಂಗ ಎದುರುಗೊಳ್ಳುತ್ತದೆ. ಹುಚ್ಚು ನಾಯಿ ಕಡಿತದಿಂದ ಉಲ್ಬಣವಾಗುವ ಈ ರೋಗದ ಬಗ್ಗೆ ಎಲ್ಲರೂ ಗಮನ ಹರಿಸುವದು ಅತ್ಯಗತ್ಯ.ಸಮೀಕ್ಷೆಗಳ ಪ್ರಕಾರ ಪ್ರತಿವರ್ಷ ನಮ್ಮ ದೇಶದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಈ ರೋಗದಿಂದ ತಮ್ಮ ಅಮೂಲ್ಯ ಜೀವ ಕಳೆದುಕೊಳ್ಳುತ್ತಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.     

ರೇಬೀಸ್ ರೋಗಕ್ಕೆ ಒಳಗಾದರೆ ಗುಣಪಡಿಸುವುದು ಕಷ್ಟಕರ.ಆದರೆ ಅದನ್ನು ತಡೆಗಟ್ಟಲು ಸಾಧ್ಯ. ಈ ರೋಗದ ಬಗ್ಗೆ ಅಸಡ್ಡೆ,ನಿರ್ಲಕ್ಷ್ಯ ಎಳ್ಳಷ್ಟು ಸಲ್ಲದು ಎಂದರು.    ರೋಗದ ನಸುಳುವಿಕೆ ! ಮುಖ್ಯವಾಗಿ ರೇಬೀಸ್ ಸೋಂಕು ಪ್ರಾಣಿಗಳ ಕಡಿತದಿಂದ ,ರೋಗಾಣು ವಿರುವ ಜೊಲ್ಲು ಸಂಪರ್ಕದಿಂದ ವೈರಾಣು ಗಾಯದ ಮೂಲಕ ದೇಹವನ್ನು ಫಸರಿಸಿ ರೇಬೀಸ್ ರೋಗವನ್ನುಂಟು ಮಾಡುತ್ತದೆ. ನಾಯಿ,ಬೆಕ್ಕು, ಮೇಕೆ, ಕುರಿ,ಹಸು,ಎಮ್ಮೆ,ಕೋತಿ,ತೋಳ,ನರಿ,ಮುಂಗಸಿ,ಕುದರೆ,ಬಾವುಲಿ,ಇಲಿ ಮೊದಲಾದ ಹಲ ಸ್ತರದ ಪ್ರಾಣಿಗಳು ಕಚ್ಚಿದಾಗ ಅಥವಾ ನೆಕ್ಕಿದಾಗ ರೇಬೀಸ್ ಹರಡುತ್ತದೆ. ನಮ್ಮ ದೇಶದಲ್ಲಿ ಭಾಗಶಃ ಜನತೆಗೆ ಹುಚ್ಚುನಾಯಿ ಕಡಿತದಿಂದ ಶೇ,97 ರಷ್ಟು ರೇಬೀಸ್ ರೋಗದ ಲಕ್ಷಣಗಳು ಸಾಮಾನ್ಯವಾಗಿ ಪತ್ತೆವಾಗುತ್ತಲ್ಲಿವೆ ಎಂದರು.   ರೇಬೀಸ್ ವೈರಾಣು ಕಚ್ಚಿದ ಜಾಗದಿಂದ ನರಗಳ ಮೂಲಕ ನರಮಂಡಲದ ವ್ಯವಸ್ಥೆಗೆ ತಲುಪಿ ರೋಗದ ಲಕ್ಷಣಗಳನ್ನು ಸೃಷ್ಟಿಸುತ್ತದೆ. ದೇಹದ ಯಾವ ಭಾಗದಲ್ಲಿ ನಾಯಿ ಕಚ್ಚಿರುವುದರ ಮೇಲೆ ರೋಗದ ಲಕ್ಷಣಗಳು ಒಂದು ವಾರದಿಂದ ಒಂದು ವರ್ಷದೊಳಗೆ ಗೋಚರಿಸುತ್ತದೆ. ಈ ರೋಗದ ಲಕ್ಷಣಗಳು ನಾಯಿ,ಜಾನುವಾರು,ಮನುಷ್ಯರಲ್ಲಿ ವಿಭಿನ್ನವಾಗಿ ಕಂಡು ಬರುತ್ತವೆ. ಯಾವುದೇ ಪ್ರಾಣಿ ಕಚ್ಚಿದಾಗ ಕೂಡಲೇ ಸಾಬೂನಿನಿಂದ ಯಥೇಚ್ಛವಾಗಿ ನೀರನ್ನು ಬಳಸಿ ಗಾಯವನ್ನು ಸ್ವಚ್ಛವಾಗಿ ತೊಳೆದು ಅ್ಯಂಟಿಸೆಪ್ಟಿಕ್ ಜೌಷಧಿ ಹಚ್ಚಿಕೊಳ್ಳಬೇಕು.ಯಾವುದೇ ಕಾರಣಕ್ಕೂ ಹತ್ತಿ,ಬಟ್ಟೆಯಿಂದ ಗಾಯವನ್ನು ಮುಚ್ಚಬಾರದು.ತಕ್ಷಣವೇ ಸೂಕ್ತ ಚಿಕಿತ್ಸೆಗಾಗಿ ವೈದ್ಯರನ್ನು ಭೇಟಿಯಾಗಿ ಪ್ರಥಮ ಚಿಕಿತ್ಸಾ ಉಪಚಾರದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಡಾ.ಆರಿ​‍್ಬ.ನಾಗರಳ್ಳಿ ಸಲಹೆ ನೀಡಿದರು.     

ರೋಗಕ್ಕೆ ಒಳಗಾದ ಪ್ರಾಣಿಗಳನ್ನು ಯಾವುದೇ ಕಾರಣಕ್ಕೂ ಮುಟ್ಟದಿರಿ.ಹತ್ತು ದಿನಗಳವರೆಗೆ ಕಟ್ಟಿಹಾಕಿ ಅದರ ಚಲನ,ವಲನ ಗಮನಿಸಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಹುಚ್ಚು ನಾಯಿ ಕಡಿತಕ್ಕೊಳಗಾದ ವ್ಯಕ್ತಿಗಳು ತಪ್ಪದೇ ರೇಬೀಸ್ ಲಸಿಕೆ ಹಾಕಿಸಿಕೊಳ್ಳಬೇಕು. ಜೊತೆಗೆ ವೈದ್ಯರ ಸಲಹೆ ಮೇರೆಗೆ ಸಿದ್ದಪಡಿಸಿದ ಪ್ರತಿಕಾಯಗಳು ಹಾಗೂ ನಂಜು ನಿವಾರಕ ಚುಚ್ಚುಮದ್ದು ಪಡೆಯಬೇಕು.ಸಾಕು ಪ್ರಾಣಿಗಳ ಮಾಲೀಕರು ನಾಯಿ,ಬೆಕ್ಕು ಮರಿಗಳಿಗೆ ಮುಂಜಾಗ್ರತೆ ಕ್ರಮವಾಗಿ ಮೂರು ತಿಂಗಳಲ್ಲಿ ಪ್ರಥಮ ಲಸಿಕೆ,ಒಂದು ತಿಂಗಳ ಬಳಿಕ ಬೂಸ್ಟರ್ ಲಸಿಕೆ ಹಾಕಿಸಿ ಪ್ರತಿ ವರ್ಷ ನಿಗದಿತ ದಿನದಂದು ತಪ್ಪದೇ ರೇಬೀಸ್ ಲಸಿಕೆ ಹಾಕಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಮೂಢನಂಬಿಕೆಗಳಿಗೆ ಮಾರಿ ಹೋಗಬಾರದು. ರೋಗಗ್ರಸ್ತ ನಾಯಿಗಳು ಕಂಡು ಬಂದರೆ ಕೂಡಲೇ ಸ್ಥಳೀಯ ಸಂಘ, ಸಂಸ್ಥೆ ಸಂಬಂಧಿಸಿದವರ ಗಮನಕ್ಕೆ ತಂದು ಸಹಕರಿಸಬೇಕು ಎಂದರು.   

ಚಿಕ್ಕಪಡಸಲಗಿ ಪಶು ಚಿಕಿತ್ಸಾಲಯದ ಹಿರಿಯ ಪಶುವೈದ್ಯಾಧಿಕಾರಿ ಡಾ,ಮಂಜುನಾಥ ಹೊಳಗಿ, ಪಶು ವೈದ್ಯಕೀಯ ಪರೀವೀಕ್ಷಕ ಆರ್‌.ಎಸ್‌.ಮಿಜಿ9, ಕೃತಕ ಗರ್ಭಧಾರಣ ಕಾರ್ಯಕರ್ತ ರಮೇಶ್ ಅಂಬಿ, ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ವಿಶ್ರಾಂತ ಹಿರಿಯ ಶಿಕ್ಷಕ ಬಸವರಾಜ ಅನಂತಪೂರ, ಶಿಕ್ಷಕ ಈರಣ್ಣ ದೇಸಾಯಿ, ಜಿ.ಆರ್‌.ಜಾಧವ, ಶಿಕ್ಷಕಿಯರಾದ ಕವಿತಾ ಅಂಬಿ,ಸಹನಾ ಹತ್ತಳ್ಳಿ, ಪ್ರಮೀಳಾ ತೇಲಸಂಗ ಇತರರಿದ್ದರು. ಶಿಕ್ಷಕ ಸದಾಶಿವ ಸಿದ್ದಾಪುರ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ