ಅಥಣಿ

ಕೇವಲ 30 ರೂಪಾಯಿಗೆ ಸೇವೆ ಸಲ್ಲಿಸುತ್ತಿರುವ ವೈದ್ಯ

ಕೇವಲ 30 ರೂಪಾಯಿಗೆ ಸೇವೆ ಸಲ್ಲಿಸುತ್ತಿರುವ ವೈದ್ಯ

ವೈದ್ಯಕೀಯ ಸೇವೆಯ ಜೊತೆಗೆ ರೋಗಿಗಳ ಮನೋಸೈರ್ಯ ಹೆಚ್ಚಳಕ್ಕೂ ಸೈ  

ಅಥಣಿ 17:  ಕೊರೊನಾ ಎಂಬ ಮಹಾಮಾರಿ ಜಗತ್ತನ್ನೇ ನಡುಗಿಸುತ್ತಿದೆ. ಎಲ್ಲಿ ನೊಡಿದರೂ ಸಾಲು ಸಾಲು ಸಾವಿನ ಸುದ್ದಿಗಳೇ. ಆಕ್ಸಿಜನ್ ಕೊರತೆ, ವೆಂಟಿಲೇಟರ್ ಕೊರತೆಗಳೇ ಹೆಚ್ಚು. ಸಣ್ಣ ಪುಟ್ಟ ಎಂದು ತಿಳಿದುಕೊಂಡ ರೋಗಗಳಾದ ನೆಗಡಿ, ಕೆಮ್ಮು, ಜ್ವರಗಳೇ ಈಗ ಮನುಕುಲದ ಹೆದರಿಕೆಗೆ ಕಾರಣಗಳಾಗಿಬಿಟ್ಟಿವೆ. ಈ ಕೊರೊನಾ ಎಂಬ ಮಹಾಮಾರಿ ನಗರ​‍್ರದೇಶಗಳಿಗಷ್ಟೇ ಸೀಮಿತವಾಗದೇ ಹಳ್ಳಿ ಹಳ್ಳಿಗಳಲ್ಲಿ ಹಬ್ಬಿಕೊಂಡಿದೆ. ಅದರ ಪರಿಣಾಮವಾಗಿ ಹಳ್ಳಿಗಳ ಜನಕ್ಕೆ ದಿಕ್ಕೇ ತೋಚದಂತಾಗಿದೆ. ನೆಗಡಿ, ಕೆಮ್ಮು, ಜ್ವರಗಳನ್ನು ಈಗ ನಿರ್ಲಕ್ಷ್ಯ ಮಾಡುವಂತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ಚಿಕಿತ್ಸೆ ದೊರಕದೇ ಪಟ್ಟಣಕ್ಕೆ ಬರಬೇಕು. ಬಂದರೆ ಪಟ್ಟಣದ ಆಸ್ಪತ್ರೆಗಳ ಬಿಲ್ ನೋಡಿಯೇ ಅರ್ಧ ಸತ್ತ ಅನುಭವವಾಗುವುದು ಸುಳ್ಳಲ್ಲ. ಆ ರಿಪೋರ್ಟ್‌, ಈ ರಿಪೋರ್ಟ್‌ ಅಂತಾ ಸಾವಿರಾರು ರೂಪಾಯಿ ಕಿತ್ತುಕೊಳ್ಳುವ ಡಾಕ್ಟರ್‌ಗಳೇ ಹೆಚ್ಚು. ಹಾಗಂತಾ ಎಲ್ಲಾ ಡಾಕ್ಟರ್‌ಗಳು ಈ ರೀತಿ ಮಾಡುತ್ತಾರೆ ಎಂಬ ಮಾತು ಸುಳ್ಳು. ಸಮಾಜಸೇವೆ ಮಾಡುವ, ಮಾಡುತ್ತಿರುವ ಅನೇಕ ಡಾಕ್ಟರ್ ಗಳು ನಮಗೆ ಸಿಗುತ್ತಾರೆ. ಮನೋಸ್ಥೈರ್ಯ ತುಂಬಿ ಚಿಕಿತ್ಸೆ ನೀಡುವುದು ಈ ಸಮಯದಲ್ಲಿ ತುಂಬಾ ಮುಖ್ಯವಾದ ಸಂಗತಿ. ಯಾಕೆಂದರೆ ನೆಗಡಿ, ಕೆಮ್ಮು ಬಂದರೆ ಕೊರೋನಾ ಆಗಿರಬಹುದೇ ಎಂಬ ದುಗುಡ ಮನಸ್ಸಿನಲ್ಲಿರುತ್ತದೆ. 

ಅಂದಹಾಗೆ ಪಟ್ಟಣಗಳಲ್ಲಿ ಬಡವರಿಗೆ ಅನುಕೂಲವಾಗುವ, ಮನೋಸ್ಥೈರ್ಯ ತುಂಬುವ, ಅತ್ಯಂತ ಕಡಿಮೆ ದರದಲ್ಲಿ ರೋಗ ವಾಸಿ ಮಾಡುವ ವೈದ್ಯರು ಸಿಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ಹೌದು. ಅಂತಹ ವೈದ್ಯರೊಬ್ಬರು ಅಥಣಿ ಪಟ್ಟಣದಲ್ಲಿ ಇದ್ದಾರೆ. ಅವರೇ ಡಾ. ಆನಂದ ಮೊಳೇಕರ್‌. ಅಥಣಿಯ ಅನಂತಪುರ ರಸ್ತೆಯ ಸಾವಡ್ಕರ್ ಪೆಟ್ರೋಲ್ ಬಂಕ್ ಎದುರಿಗಿರುವ "ಆಯುಷ್ ಕ್ಲೀನಿಕ್" ಎಂಬ ದವಾಖಾನೆಯೊಂದನ್ನು ಇಟ್ಟುಕೊಂಡು ಹಗಲಿರುಳು ರೋಗಿಗಳ ಸೇವೆ ಸಲ್ಲಿಸುತ್ತಿದ್ದಾರೆ. 

ಅರೆ ಇದರಲ್ಲೇನಿದೆ ವೈದ್ಯರು ಅದನ್ನೆಲ್ಲಾ ಮಾಡಲೇಬೇಕು, ಅವರು ಕರ್ತವ್ಯ ಅಂತೀರಾ..!? ಇದು ಕೋವಿಡ್ ನ ಕರಾಳ ಸಮಯ ಅನೇಕ ವೈದ್ಯರು ತಮ್ಮ ತಮ್ಮ ದವಾಖಾನೆಗಳನ್ನು ಮುಚ್ಚಿಕೊಂಡು ನಮಗ್ಯಾಕೆ ಬೇಕು ಎಂದು, ದವಾಖಾನೆಗೆ ಹೋದರೆ ಕನಿಷ್ಟ ಪಕ್ಷ ಸರಿಯಾಗಿ ಮಾತನಾಡಿಸದೇ, ಮುಟ್ಟದೇ ಸುಮ್ಮನಿರುವಾಗ ಈ ಸಮಯದಲ್ಲಿ ರೋಗಿಗಳ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಶ್ಲಾಘನೀಯ. ಅದಕ್ಕಿಂತಲೂ ಹೆಚ್ಚಾಗಿ ಮನೋಬಲ ತುಂಬುವ ಕೆಲಸ ಮಾಡುತ್ತಿದ್ದಾರೆ. ಅಥಣಿ ಪಟ್ಟಣ ಸೇರಿ ಸುತ್ತಮುತ್ತಲಿನ ಊರುಗಳಾದ ಅಬ್ಬಿಹಾಳ, ಭರಮಖೋಡಿ, ಯಕ್ಕಂಚಿ, ಕೋಹಳ್ಳಿ, ಅಡಹಳ್ಳಿ, ಬೇವನೂರು, ಶಿವನೂರು, ಮದಭಾವಿ, ದೇಸಾರಟ್ಟಿ, ರಡ್ಡೇರಹಟ್ಟಿ, ಅನಂತಪುರ, ಹೊಸಟ್ಟಿ ಹೀಗೆ ಅನೇಕ ಗ್ರಾಮಗಳ ರೋಗಿಗಳು ಇವರ ಹತ್ತಿರ ಬಂದು ರೋಗಮುಕ್ತರಾಗಿದ್ದಾರೆ, ಆಗುತ್ತಿದ್ದಾರೆ. 

ಅನೇಕ ಜನರಿಗೆ ಕೋವಿಡ್ ಗುಣಲಕ್ಷಣಗಳು ಇದ್ದರೂ ಸಹ ಅವರನ್ನು ಸುಷ್ರೂಶಣೆ ಕಳಿಸಿದ್ದಾರೆ. ಕೆಲ ರೋಗಿಗಳ ಪ್ರಕಾರ ಡಾಕ್ಟರ್ ಅವರು ರೋಗವನ್ನು ಅವರ ಮಾತುಗಳ ಮೂಲಕವೇ ಅರ್ಧ ಕಡಿಮೆ ಮಾಡುತ್ತಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಇವರು ಇಷ್ಟೆಲ್ಲಾ ಚಿಕಿತ್ಸೆ ಕೊಡುವುದಕ್ಕೆ ತೆಗೆದುಕೊಳ್ಳುವ ಕನಿಷ್ಠ ಫೀಸ್ ಮಾತ್ರ 30 ರೂಪಾಯಿಂದ 50 ರೂಪಾಯಿ. ಅದಕ್ಕೆ ಇರಬಹುದು ಇವರನ್ನು "ಬಡವರ ಡಾಕ್ಟರ್" ಎಂದು ಕರೆಯುವುದು.  

ಅದೇನೇ ಇರಲಿ ಇಂತಹ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸದ್ದಿಲ್ಲದೇ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವ ವೈದ್ಯರು ಸಿಗುವುದು ವಿರಳ. ಅಂತವರ ಸಾಲಿನಲ್ಲಿ ಡಾಽಽ ಆನಂದ ಮೊಳೇಕರ್ ಒಬ್ಬರು. ಬಡರೋಗಿಗಳ ಪರವಾಗಿ, ನಮ್ಮ ನಿಮ್ಮೆಲ್ಲರ ಪರವಾಗಿ  

ಅವರಿಗೊಂದು ಮೆಚ್ಚುಗೆ ಇರಲಿ. ಸಂಪರ್ಕ: ಡಾ:ಆನಂದ ಮೊಳೇಕರ್‌- 8904518385. 

ನನ್ನ ಪರಿಸ್ಥಿತಿ ನೋಡಿದರೆ ನನಗೆ ಕೋವಿಡ್ ಆಗಿರಬಹುದು ಎಂಬ ಅನುಮಾನದಿಂದ ಮೂರ್ನಾಲ್ಕು ದಿನದಿಂದ ಊಟವೇ ಮಾಡಿರಲಿಲ್ಲ ಇವರ ಹತ್ತಿರ ಬಂದಮೇಲೆ ಅದನ್ನೆಲ್ಲಾ ಮನಸ್ಸಿನಿಂದ ತೆಗೆದು ನನಗೆ ಸರಿಯಾದ ಚಿಕಿತ್ಸೆ ನೀಡಿದ್ದಾರೆ ಈಗ ನಾನು ಸಂಪೂರ್ಣವಾಗಿ ಹುಶಾರಾಗಿದ್ದೇನೆ

- ಲಕ್ಷ್ಮಣ ಬಡಕಂಬಿ (ಸಾರ್ವಜನಿಕ, ಅಥಣಿ). 

ಈ ಕೋವಿಡ್ ಪರಿಸ್ಥಿತಿಯಲ್ಲಿ ವೈಧ್ಯರಾದ ನಾವು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಈ ವೇಳೆ ಸಾಧ್ಯವಾದಷ್ಟು ಕಡಿಮೆ ದರದಲ್ಲಿ ಸೇವೆ ಒದಗಿಸುವುದು ನಮ್ಮ ಕರ್ತವ್ಯವಾಗಿದ್ದು ಯಾರೇ ಇದ್ದರೂ ನಮ್ಮಲ್ಲಿ ಯಾವುದೇ ಸಮಯದಲ್ಲೂ ಸೇವೆ ಪಡೆದುಕೊಳ್ಳಬಹುದು

(ಡಾ. ಆನಂದ ಮೋಳೆಕರ). 


ಸುದ್ದಿ ಓದಿ