ಕಾರವಾರ

ಕಾರವಾರದಲ್ಲಿ ಜಲಸಾರಿಗೆ ಇಲಾಖೆಯ ಕೇಂದ್ರ ಕಚೇರಿ: ಕಪಿಲ್ ಮೋಹನ್

ಕಾರವಾರದಲ್ಲಿ ಜಲಸಾರಿಗೆ ಇಲಾಖೆಯ ಕೇಂದ್ರ ಕಚೇರಿ: ಕಪಿಲ್ ಮೋಹನ್

ಕಾರವಾರ 05 : ರಾಜ್ಯದ ಕರಾವಳಿ ಪ್ರದೇಶದಲ್ಲಿ ಕೈಗೊಳ್ಳುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗುವಂತೆ ಕಾರವಾರದಲ್ಲಿ ಕರ್ನಾಟಕ ಜಲಸಾರಿಗೆ ಇಲಾಖೆಯ ಕೇಂದ್ರ ಕಚೇರಿಯನ್ನು ನಿರ್ಮಿಸಲಾಗುವುದು ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಅವರು ಹೇಳಿದರು.

ನಗರದ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ 58ನೇ ರಾಷ್ಟ್ರೀಯ ಕಡಲ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಲ ಸಾರಿಗೆ ಇಲಾಖೆಯ ಕೇಂದ್ರ ಕಚೇರಿಯ ನಿರ್ಮಾಣಕ್ಕೆ ಸ್ಥಳಾವಕಾಶದ ಅಗತ್ಯವಿದೆ. ಹೀಗಾಗಿ ಭೂಮಿ ಹುಡುಕಾಟದಲ್ಲಿ ಇಲಾಖೆಯ ಅಧಿಕಾರಿಗಳು ತೊಡಗಿದ್ದು, ಜಿಲ್ಲಾಧಿಕಾರಿ ಆದ್ಯತೆಯ ಮೇರೆಗೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಒದಗಿಸಿಕೊಡುವ ಪ್ರಯತ್ನ ಮಾಡಬೇಕು ಎಂದರು. 

ರಾಜ್ಯ ಹಾಗೂ ದೇಶದ ಆರ್ಥಿಕತೆಯಲ್ಲಿ ಬಂದರುಗಳ ಪಾತ್ರ ಬಹು ಮುಖ್ಯವಾಗಿದೆ. ಈ ನಿಟ್ಟನಲ್ಲಿ ದೇಶದ 7000 ಕಿ.ಮಿ. ಉದ್ದದ ಕರಾವಳಿ ಪ್ರದೇಶವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ 'ಸಾಗರಮಾಲಾ' ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಬಂದರುಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಮಾತನಾಡಿ, ರಾಜ್ಯದ 320 ಕೀ. ಮಿ  ಕರಾವಳಿ ಪ್ರದೇಶದ ಪೈಕಿ 160 ಕೀ. ಮಿ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಹೀಗಾಗಿ ಇಲ್ಲಿ ಜಲ ಸಾರಿಗೆಗೆ ಸಂಬಂಧಿಸಿದ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತವೆ. ಕಾರವಾರ ಬಂದರು ಕೋವಿಡ್-19 ಸಂದರ್ಭದಲ್ಲಿಯೂ ಸುಮಾರು 15 ಕೋಟಿ ಆದಾಯ ಗಳಿಸುವ ಮೂಲಕ ಲಾಭದಾಯಕ ಕ್ಷೇತ್ರವಾಗಿಹೊರಹೊಮ್ಮಿದೆ ಎಂದರು.

ಜಲ ಸಾರಿಗೆ ಇಲಖೆಯ ಕೇಂದ್ರ ಕಚೇರಿ ಸ್ಥಾಪನೆಗೆ ಅವಶ್ಯಕತೆಯಿರುವ ಭೂಮಿಯನ್ನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇದರ ಜೊತೆಗೆ ಎಲ್ಲರ ಸಹಾಯ, ಸಹಕಾರದೊಂದಿಗೆ ಜಿಲ್ಲೆಯ ಬಂದರುಗಳಲ್ಲಿ ಇರುವ ಸಮಸ್ಯೆಗಳನ್ನು  ನಿವಾರಣೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು  ಹೇಳಿದರು.

ಕಾರವಾರ ಬಂದರಿನ ಸಂರಕ್ಷಣಾಧಿಕಾರಿ ಸುರೇಶ್ ಶೆಟ್ಟಿ ಮಾತನಾಡಿ, ಕೋವಿಡ್-19 ಸಂದರ್ಭದಲ್ಲಿ ಆಮದು ಮತ್ತು ರಫ್ತುಗಳ ವಹಿವಾಟಿನಲ್ಲಿ ಇಳಿಕೆಯಾಗುವ ಆತಂಕವಿತ್ತು. ಆದರೆ ಕೋವಿಡ್-19 ಸುರಕ್ಷತೆಯೊಂದಿಗೆ ನಿರಂತರ ಕಾರ್ಯ ವೈಕರಿಯಿಂದ 2020-21ನೇ ಸಾಲಿನಲ್ಲಿ 2,97,116 ಮೆಟ್ರಿಕ್ ಟನ್ ಬಿಟುಮಿನ್, 32,851 ಮೆಟ್ರಿಕ್ ಟನ್ ಹೆಚ್‍ಎಸ್‍ಡಿ, 90,120 ಮೆಟ್ರಿಕ್ ಟನ್ ಇಂಡಸ್ಟ್ರಿಯಲ್ ಸಾಲ್ಟ್, 27,010 ಪಾಮ್ ಆಯ್ಲ್, 31,500 ಮೆಟ್ರಿಕ್ ಟನ್ ರಾಕ್ ಪಾಸ್ಪೇಟ್, 60 ಮೆಟ್ರಿಕ್ ಟನ್ ಯಂತ್ರೋಪಕರಣಗಳ ಬಿಡಿ ಭಾಗಗಳು, 7,005 ಮೆಟ್ರಿಕ್ ಟನ್ ಕಾಸ್ಟಿಕ್ ಸೋಡಾ ಸೊಲ್ಯೂಷನ್ ಆಮದಾಗಿದೆ. ಜೊತೆಗೆ 2,58,680 ಮೆಟ್ರಿಕ್ ಟನ್ ಮೊಲ್ಯಾಶಿಸ್, 60 ಮೆಟ್ರಿಕ್ ಟನ್ ಯಂತ್ರೋಪಕರಣಗಳ ಬಿಡಿ ಭಾಗಗಳು, 5,137 ಮೆಟ್ರಿಕ್ ಟನ್ ಕಾಸ್ಟಿಕ್ ಸೋಡಾ ಲೈ ರಪ್ತಾಗಿದೆ. ಇವೆಲ್ಲ ಸೇರಿ ಒಟ್ಟಾರೆ 4,85,662 ಮೆಟ್ರಿಕ್ ಟನ್ ಆಮದಾಗಿದ್ದು, 2,63,877 ಮೆಟ್ರಿಕ್ ಟನ್ ರಪ್ತು ಮಾಡಲಾಗಿದೆ. ಇದರಿಂದ ಬಂದರಿಗೆ 15,21,97,654 ಕೋಟಿ ರೂ  ಲಾಭವಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಕೋವಿಡ್-19 ಸಂದರ್ಭದಲ್ಲಿ ವಿವಿಧ ದೇಶಗಳಿಂದ ಬಂದಿದ್ದಂತಹ 2,400 ಹಡಗು ಸಿಬ್ಬಂದಿಗೆ ಸ್ಕ್ರೀನ್ ಟೆಸ್ಟಿಂಗ್ ಮೂಲಕ ಆರೋಗ್ಯ ತಪಾಸಣೆ ನಡೆಸಿದ್ದ  ಆರೋಗ್ಯ ಇಲಾಖೆಯ ಕೊವಿಡ್-19 ವಾರಿಯರ್ಸ್‍ಗಳಿಗೆ ಸನ್ಮಾನಿಸಲಾಯಿತು.

ನಂತರ ಕಾರ್ಯಕ್ರಮದಲ್ಲಿ ಬಂದರು ಇಲಾಖೆ ಮತ್ತು ಬಳಕೆದಾರರಿಗೆ ಆಯೋಜಿಸಲಾಗಿದ್ದ ವಿವಿಧ ಕ್ರಿಡೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ನಿರ್ದೇಶಕ ಕ್ಯಾಪ್ಟನ್ ಸಿ. ಸ್ವಾಮಿ, ಮೈಸುರು ಮರ್ಚಂಟಿಲ್ ಲಿಮಿಟೆಡ್‍ನ ಅಧ್ಯಕ್ಷ ಹೆಚ್.ಎಸ್. ಶೆಟ್ಟಿ, ಹೊನ್ನಾವರ ಬಂದರಿನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸೂರ್ಯಪ್ರಕಾಶ್, ಕ್ಯಾಪ್ಟನ್ ತರೈಸಾ, ಕ್ಯಾಪ್ಟನ್ ಗಾಂವಕರ್ ಸೇರಿದಂತೆ ನೌಕಾ ಪಡೆಯ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ