ಕೊಣ್ಣೂರ ಗ್ರಂಥಾಲಯ ಗಣಕಿಕೃತವಾಗಿಸಲು 4 ಲಕ್ಷ ರೂ ನೀಡಿದ ವಿಜಯಕುಮಾರ ಅಸ್ಕಿ
ತಾಳಿಕೋಟೆ22: ಎಲ್ಲ ಸಂಪತ್ತುಗಳಲ್ಲಿ ಶಿಕ್ಷಣ ಸಂಪತ್ತು ಎಂಬುದು ದೊಡ್ಡದಾಗಿದೆ. ಶಿಕ್ಷಣ ಸಂಪತ್ತು ಯಾರು ಗಳಿಸಿಕೊಳ್ಳುತ್ತಾರೋ ಅವರು ಇಡೀ ಜಗತ್ತನೇ ಆಳಬಹುದು. ಅಂತಹ ಸಾಧನೆ ಮಾಡಿದ ಯುವಕ ಆರ್ಥಿಕತೆಯಿಂದ ಹಾಗೂ ಪುಸ್ತಕ ಸಂಪತ್ತು ಸಿಗದೇ ಇರುವ ವಿದ್ಯಾರ್ಥಿಗಳಿಗೆ ಜ್ಞಾನದ ಹೊತ್ತಿಗೆಯನ್ನು ಒಂದೆಡೆ ಸಿಗುವಂತೆ ಮಾಡಿದ ಅಸ್ಕಿ ಕುಟುಂಬದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಮತ್ತು ನಗರ ಗ್ರಂಥಾಲಯ ಉಪನಿರ್ದೇಶಕ ಅಜಯ್ ಕುಮಾರ ಹೇಳಿದರು.
ಅವರು ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಅಮೆರಿಕಾದ ಮೈಕ್ರೋಸಾಪ್ಟ್ ಕಂಪನಿಯ ಪಾಲುದಾರ ನಿರ್ದೇಶಕ ವಿಜಯಕುಮಾರ ಕುಭೇರ್ಪ ಅಸ್ಕಿ ಅವರು 4 ಲಕ್ಷ ವೆಚ್ಚದಲ್ಲಿ ಗಣಕಿಕೃತಗೊಳಿಸಿದ ಗ್ರಾಮ ಪಂಚಾಯತ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ತಮ್ಮ ಗ್ರಾಮದಲ್ಲಿ ಓದಿನ ಹವ್ಯಾಸ ಇದ್ದು ಸಕಾಲದಲ್ಲಿ ಪುಸ್ತಕ ಸಿಗದೇ ಇರುವ ವಿದ್ಯಾರ್ಥಿಗಳಿಗಾಗಿ ಜಗತ್ತಿನ ಎಲ್ಲ ಪುಸ್ತಕಗಳನ್ನು ಓದಲು ಸಿಗುವಂತೆ ಮಾಡುವ ಉದ್ದೇಶದಿಂದ ಗ್ರಂಥಾಲಯವನ್ನು ಗಣಕಿಕೃತಗೊಳಿಸಿದ್ದಾರೆ. ಕೊಣ್ಣೂರ ಗ್ರಾಮದಲ್ಲಿ ನಿರ್ಮಿತವಾಗಿರುವ ಡಿಜಿಟಲ್ ಗ್ರಂಥಾಲಯ ಜಿಲ್ಲೆಯಲ್ಲಿಯೇ ಮೊದಲ ಡಿಜಿಟಲ್ ಗ್ರಂಥಾಲಯವಾಗಿದ್ದು ಇಂತಹ ಸಣ್ಣ ಗ್ರಾಮದಲ್ಲಿ ಆಧುನಿಕತೆ ತಕ್ಕಂತೆ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. ಗಣಕಿಕೃತ ಗ್ರಂಥಾಲಯದಲ್ಲಿ ತಮಗೆ ಬೇಕಾದ ಪುಸ್ತಕವನ್ನು ಓದಲು ಪಡೆಯಬಹುದಾಗಿದೆ. ಗಣಕಿಕೃತದಲ್ಲಿ ಡಿಜಿಟಲ್ ಗ್ರಂಥಾಲಯದ ಆಪ್ ಅಳವಡಿಸಲಾಗುತ್ತಿದ್ದು ಇದರಿಂದ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಡಿಜಿಟಲ್ ಗ್ರಂಥಾಲಯದ ದಾನಿ ಅಮೇರಿಕಾದ ಮೈಕ್ರೋಸಾಪ್ಟ್ ಸಂಸ್ಥೆಯ ಪಾಲುದಾರ ನಿರ್ದೇಶಕ ವಿಜಯಕುಮಾರ ಅಸ್ಕಿ ಮಾತನಾಡಿ, ಬಧುಕಿನ ಅನುಕ್ಷಣದ ಆಭರಣವೆಂದರೆ ಗ್ರಂಥಾಲಯವಾಗಿದೆ. ಯಾವುದೇ ವಿಷಯ ಅಧ್ಯಯನ ಮಾಡಬೇಕೆಂದರೆ ಗ್ರಂಥಾಲಯಕ್ಕೆ ಬರಬೇಕು. ಅಲ್ಲಿ ಸರಿಯಾದ ಮಾರ್ಗದರ್ಶನ ಪುಸ್ತಕವಿಲ್ಲದಿದ್ದರೆ ಪರಿಪೂರ್ಣತೆ ಸಿಗುವದಿಲ್ಲ. ಹೀಗಾಗಿ ಡಿಜಿಟಲ್ ಗ್ರಂಥಾಲಯ ನಿರ್ಮಿಸಿದರೆ ಎಲ್ಲ ರೀತಿಯ ಅಧ್ಯಯನ ಪುಸ್ತಕಗಳು ಕ್ಷಣಾರ್ಧದಲ್ಲಿ ಲಭ್ಯವಾಗಲಿವೆ ಎನ್ನುವ ಉದ್ದೇಶದಿಂದ ನನಗೆ ಜನ್ಮ ನೀಡಿರುವ ಕೊಣ್ಣೂರ ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. ಕೊಣ್ಣೂರನ ಪ್ರತಿಯೊಬ್ಬ ವಿದ್ಯಾರ್ಥಿಯು ದೇಶದ ಅತ್ಯುನ್ನತ ಹುದ್ದೆಯಲ್ಲಿರಬೇಕು. ಗ್ರಾಮದ ಹೆಸರು ದೇಶದಲ್ಲಿ ಪ್ರಜ್ವಲಿಸಬೇಕೆಂಬ. ಸದುದ್ದೇಶದಿಂದ ಗ್ರಾಮದಲ್ಲಿಯ ಸಾರ್ವಜನಿಕ ಗ್ರಂಥಾಲಯವನ್ನು ಉನ್ನತೀಕರಣಗೊಳಿಸಿ ಡಿಜಿಟಲ್ ಮಾದರಿಗೆ ಅಳವಡಿಸಲು ಮುಂದಾಗಿದ್ದೇನೆ ಸದರಿ ಗ್ರಂಥಾಲಯದ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಂಡು ಶ್ರೇಷ್ಠ ಜ್ಞಾನಿಗಳಾಗಬೇಕೆಂದು ಸಲಹೆ ನೀಡಿದರು.
ನಿವೃತ್ತ ಪಿಎಸ್ಐ ಸಂಜೀವ ನಾಯ್ಕೋಡಿ ಮಾತನಾಡುತ್ತಾ ನಿವೃತ್ತಿಯ ವೇತನದಲ್ಲಿ ಪ್ರತಿ ತಿಂಗಳು 500 ರೂಗಳನ್ನು ಗ್ರಂಥಾಲಯಕ್ಕೆ ನೀಡುವದಾಗಿ ವಾಗ್ದಾನ ಮಾಡಿದರು. ಡಾ.ಮಲ್ಲನಗೌಡ ಹಡಲಗೇರಿ ಅವರು ಡಿಜಿಟಲ್ ಗ್ರಂಥಾಲಯದಲ್ಲಿ ಪುಸ್ತಕ ಖರೀದಿಗೆ 10 ಸಾವಿರ ರೂ. ವೈಯಕ್ತಿಕವಾಗಿ ಪ್ರೋತ್ಸಾಹಧನ ನೀಡುವದಾಗಿ ಘೋಷಿಸಿದರು.
ಗ್ರಾಮದ ಮುಖಂಡ ಬಾಪುಗೌಡ ಹಿರೇಗೌಡರ, ನಿವೃತ್ತ ಪ್ರಾಚಾರ್ಯ ಎಸ್.ಆರ್.ಪಾಟೀಲ, ತಿಪ್ಪಣ್ಣ ದೊಡಮನಿ ಮಾತನಾಡಿದರು. ಜಿಲ್ಲಾ ಮತ್ತು ನಗರ ಸಾರ್ವಜನಿಕ ಗ್ರಂಥಾಲಯದ ವತಿಯಿಂದ ಹಾಗೂ ಗ್ರಂಥಾಲಯ ಮೇಲ್ವಿಚಾರಕ ಸಂಘದ ವತಿಯಿಂದ ಹಾಗೂ ಕೊಣ್ಣೂರ ಗ್ರಾಮಸ್ತರ ವತಿಯಿಂದ ವಿಜಯಕುಮಾರ ಅಸ್ಕಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾನಿದ್ಯ ವಹಿಸಿದ್ದ ಶ್ರೀನಾಥಯ್ಯ ಹಿರೇಮಠ ಆಶಿರ್ವಚನ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಜೀವ ನಾಯ್ಕೋಡಿ, ಚಿದಾನಂದ ಬಿರಾದಾರ, ಮಲ್ಲನಗೌಡ ಹಡಲಗೇರಿ, ವಿನೋಧ ಬಿರಾದಾರ, ತಿಪ್ಪಣ್ಣ ದೊಡಮನಿ ಅವರನ್ನು ಅಸ್ಕಿ ಪರಿವಾರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕುಭೇರ್ಪ ಅಸ್ಕಿ, ಡಾ.ಬಸವರಾಜ ಅಸ್ಕಿ, ಗ್ರಾಂಪಂ ಉಪಾಧ್ಯಕ್ಷೆ ಯಂಕಮ್ಮ ಅಂಗಡಗೇರಿ, ಮುಖಂಡರಾದ ಶಂಕರಗೌಡ ಹಿಪ್ಪರಗಿ, ರಾಮನಗೌಡ ಇಂಗಳಗಿ, ಎಸ್.ಸಿ.ಗುಣಕಿ, ಬಾಪುಗೌಡ ದ್ಯಾಪೂರ, ಸೋಮನಗೌಡ ಹಡಲಗೇರಿ, ಗ್ರಂಥಾಲಯ ಮೇಲ್ವಿಚಾರಕ ಪಿ.ಸಿ.ಬಿರಾದಾರ, ಶಿವಾನಂದ ದೇಸಾಯಿ, ಸಂಗಮೇಶ ಛಾಯಾಗೋಳ, ಶಂಕರ ಹುಕುಮನಾಳ, ಯಲಗೂರೇಶ ಪಾತ್ರದ, ಎಸ್.ಬಿ.ಪಾಟೀಲ, ಎಸ್.ಆರ್.ಬಳಗಾನೂರ, ಆರ್.ಪಿ.ಬಿರಾದಾರ, ಎಂ.ಎಚ್.ಬಿರಾದಾರ, ಜೆಟ್ಟೆಪ್ಪ ಆಲ್ಯಾಳ ಸೇರಿದಂತೆ ಇತರರು ಇದ್ದರು. ಅಶೋಕ ಹಡಲಗೇರಿ ಸ್ವಾಗತಿಸಿದರು. ಶಿಕ್ಷಕ ಎಂ.ಎನ್.ಅಸ್ಕಿ ನಿರೂಪಿಸಿದರು.