ಕಾರವಾರ

ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 32, ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 20 ವಿದ್ಯಾರ್ಥಿಗಳು ಗೈರು

ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 32, ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 20 ವಿದ್ಯಾರ್ಥಿಗಳು ಗೈರು

ಎಸ್‌ಎಸ್‌ಎಲ್‌ಸಿ ಪರೀಕ್ಷೆ  ಜಿಲ್ಲೆಯಲ್ಲಿ ಸುಗಮ - ಕೋವಿಡ್ ನಿಯಮ ಪಾಲಿಸಿದ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ; 

ಕಾರವಾರ 19:  ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಇಂದು ಕೋವಿಡ್ ನಿಯಮ ಪಾಲನೆ ಜೊತೆಗೆ 20756 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದರು.  

ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 32  ವಿದ್ಯಾರ್ಥಿಗಳು, ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 20 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು, ಗೈರಾದವರಲ್ಲಿ ರೀಪೀಟರ್ಸ ವಿದ್ಯಾರ್ಥಿಗಳೇ ಆಗಿದ್ದಾರೆ. 

ಎರಡೂ ಶೈಕ್ಷಣಿಕ ಜಿಲ್ಲೆಯಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು.  

ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 10,245  ವಿದ್ಯಾರ್ಥಿಗಳು, ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 997 ಫ್ರೆಶರ‌್ಸ ವಿದ್ಯಾರ್ಥಿಗಳು, ವಲಸೆ ಬಂದ  160 ವಿದ್ಯಾರ್ಥಿಗಳು, 374 ರೀಪಿಟರ‌್ಸ ಪರೀಕ್ಷೆ ಬರೆದರು. ಗಣಿತ,ವಿಜ್ಞಾನ, ಸಮಾಜ ಪರೀಕ್ಷೆಗಳು ವಿದ್ಯಾರ್ಥಿಗಳು ಎದುರಿಸಿದ್ದು, ಬಹು ಆಯ್ಕೆಯ  ಪ್ರಶ್ನೆ ಪತ್ರಿಕೆಯನ್ನು ಯಶಸ್ವಿಯಾಗಿ ಎದುರಿಸಿದ್ದಾಗಿ ಆದಿತ್ಯ ಗುನಗಿ ಎಂಬ ವಿದ್ಯಾರ್ಥಿ ಪ್ರತಿಕ್ರಿಯಿಸಿದ. ಗಣಿತ ಪರೀಕ್ಷೆ ಸ್ವಲ್ಪ ಕಷ್ಟ ಎನಿಸಿತು. ಉಳಿದಂತೆ ಸಮಾಜ ಮತ್ತು ವಿಜ್ಞಾನ ಪ್ರಶ್ನೆ ಪತ್ರಿಕೆಗಳು ಕಷ್ಟ ಎನಿಸಲಿಲ್ಲ ಎಂದ. 

122 ಕಡೆ ಪರೀಕ್ಷಾ ಕೇಂದ್ರಗಳು : 

ಕಾರವಾರ 60, ಶಿರಸಿ 62 ಸೇರಿ ಒಟ್ಟು  122 ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ಕಡೆ ಕಾಳಜಿಯಿಂದ ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಕೆಲಸ ಮಾಡಿದರು. ಪರೀಕ್ಷಾ ವ್ಯವಸ್ಥೆಗೆ ಒಟ್ಟು 2134 ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ಪರೀಕ್ಷೆಗಳು 10.30 ರಿಂದ ಪ್ರಾರಂಭವಾದವು. ಆದರೆ ವಿದ್ಯಾರ್ಥಿಗಳನ್ನು 8.30ಕ್ಕೆ ಬರಲು ಹೇಳಲಾಗಿತ್ತು. ಕೋವಿಡ್ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಕಾರವಾರದಲ್ಲಿ ಓರ್ವ ವಿದ್ಯಾರ್ಥಿ , ಶಿರಸಿ ಭಾಗದಲ್ಲಿ 3 ವಿದ್ಯಾರ್ಥಿಗಳು ಕೋವಿಡ್ ಕೊಠಡಿಗಳಲ್ಲಿ ಪರೀಕ್ಷೆ ಬರೆದರು.  150 ವರ್ಷಗಳಷ್ಟು ಹಳೆಯದಾದ, ಬ್ರಿಟಿಷರಿಂದ ಸ್ಥಾಪನೆಯಾಗ ಕಾರವಾರ ಸರ್ಕಾರಿ ಪ್ರೌಢಶಾಲಾ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಅಪರ ಜಿಲ್ಲಾಧಿಕಾರಿ ಎಚ್‌.ಕೆ.ಕೃಷ್ಣಮೂರ್ತಿ, ಡಿಡಿಪಿಐ ಹರೀಶ ಭೇಟಿ ನೀಡಿದರು. ಇದೇ ವೇಳೆ ಶಾಲೆಯ ಕಟ್ಟಡದ ಸ್ಥಿತಿ, ಶಾಲೆಗೆ ಕಂಪೌಂಡು ಇಲ್ಲದ ಕಾರಣವನ್ನು ಜಿಲ್ಲಾಧಿಕಾರಿ ತಿಳಿದುಕೊಂಡರು. ಅಲ್ಲದೇ ಶಾಲಾ ಸುಧಾರಣೆಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.  

ಗೋವಾದ 67 ವಿದ್ಯಾರ್ಥಿಗಳು , ಹಳಗಾ ಕೇಂದ್ರದಲ್ಲಿ ಪರೀಕ್ಷೆ ಬರೆದರು : 

ಗೋವಾದ ಕನ್ನಡ ಶಾಲೆಯ 67 ವಿದ್ಯಾರ್ಥಿಗಳು ಕಾರವಾರದ ಹಳಗಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದರು. ಗೋವಾ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಹಾಗೂ ಗೋವಾದಿಂದ ಬರಲು ಸಾರಿಗೆ ವ್ಯವಸ್ಥೆ ಮಾಡಿದ್ದವು. ಎಲ್ಲಾ ವಿದ್ಯಾರ್ಥಿಗಳು ಖುಷಿಯಿಂದ ಪರೀಕ್ಷೆ ಎದುರಿಸಿದರು. ಗೋವಾದಲ್ಲೇ ಪರೀಕ್ಷಾ ಕೇಂದ್ರ ತೆರೆಯಲು ಕರ್ನಾಟಕ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಗೋವಾ ಕನ್ನಡಿಗರ ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದರು. 10 ವರ್ಷಗಳಿಂದ ಪರೀಕ್ಷಾ ಕೇಂದ್ರದ ಬೇಡಿಕೆಯಿದೆ. ಆದರೂ ಸರ್ಕಾರ ವಿದ್ಯಾರ್ಥಿಗಳ ಹಿತ ನೋಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಸುದ್ದಿ ಓದಿ