ಪಂಚಮಸಾಲಿ ಸಮುದಾಯಕ್ಕೆ 2ಏ ಮೀಸಲಾತಿ ಹೋರಾಟ ತೀವ್ರ : ಸಿ.ಆರ್.ಬಳ್ಳಾರಿ ಹೇಳಿಕೆ: ಜೂ.27ರಂದು ಬೊಮ್ಮಾಯಿ ಅವರ ಶಿಗ್ಗಾವಿ ನಿವಾಸದೆದುರು ಲಕ್ಷಕ್ಕೂ ಅಧಿಕ ಜನರೊಂದಿಗೆ ಪ್ರತಿಭಟನೆ
ಲೋಕದರ್ಶನ ವರದಿ
ಬ್ಯಾಡಗಿ 10: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಏ ಮೀಸಲಾತಿ ಹೋರಾಟ ತೀವ್ರಗೊಳಿಸಲಾಗುತ್ತಿದ್ದು ಜಯಬಸವ ಮೃತ್ಯುಂಜಯಶ್ರೀ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ಜೂ.27 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾವಿಯಲ್ಲಿರುವ ನಿವಾಸದೆದುರು ಒಂದು ಲಕ್ಷಕ್ಕೂ ಅಧಿಕ ಪಂಚಮಸಾಲಿ ಸಮಾಜದ ಜನರೊಂದಿಗೆ ಪ್ರತಿಭಟನೆ ನಡೆಸುವುದಾಗಿ ಪಂಚಮಸಾಲಿ ಸಮಾಜದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಆರ್.ಬಳ್ಳಾರಿ ಪ್ರಕಟಿಸಿದರು.
ಗುರುವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ಸಮಾಜದ ಅನ್ಯಾಯವಾಗುತ್ತಿದೆ ಈ ಕುರಿತು ಹಲವಾರು ಪ್ರತಿಭಟನೆ ಮನವಿಗಳನ್ನು ಸಲ್ಲಿಸಿದ್ದಾಗ್ಯೂ ಪ್ರಸ್ತುತ ಬಿಜೆಪಿ ಸರ್ಕಾರ ತಮ್ಮ ನಿರ್ಧಾರವನ್ನು ಪ್ರಕ ಟಿಸಿಲ್ಲ ಇದರಿಂದ ನಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿ ಅರ್ಥವಾಗುತ್ತದೆ, ಈಗಲೂ ಕಾಲವು ಮಿಂಚಿಲ್ಲ ಮುಂದಾಗುವ ಅನಾಹುತ ತಪ್ಪಿಸುವ ಇಚ್ಚೆಯಿದ್ದಲ್ಲಿ ಮುಖ್ಯಮಂತ್ರಿಗಳು ಕೂಡಲೇ 2ಏ ಮೀಸಲಾತಿ ಘೋಷಿಸುವಂತೆ ಆಗ್ರಹಿಸಿದರು.
ಕುಲಶಾಸ್ತ್ರ ಅಧ್ಯಯನದ ಬಳಿಕವೇಕೆ ತಡ: ಸಮಾಜದ ಕುಲಶಾಸ್ತ್ರ ಅಧ್ಯಯನ ನಡೆಸದೇ ನೂರಾರು ಸಮುದಾಯಗಳಿಗೆ ಅವರು ಕೇಳಿದ ಮೀಸಲಾತಿ ನೀಡಿದ ಉದಾಹರಣೆ ಇರುವಾಗ ಕುಲಶಾಸ್ತ್ರ ಅಧ್ಯಯನದ ಪ್ರತಿ ತಮ್ಮ ಕೈಯಲ್ಲಿದ್ದ ಬಳಿಕ ಪಂಚಮಸಾಲಿ ಸಮುದಾಯಕ್ಕೆ 2ಏ ಮೀಸಲಾತಿ ನೀಡಲು ಮೀನಮೇಷವೇಕೆ..?ಇನ್ನಾದರೂ ನಮ್ಮ ತಾಳ್ಮೆ ಪರೀಕ್ಷಿಸದೇ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಣೆಯಾಗಬೇಕು ಎಂದು ಒತ್ತಾಯಿಸಿದರು.
ಆರ್ಥಿಕವಾಗಿ ಶೈಕ್ಷಣಿಕವಾಗಿ ನೊಂದಿದ್ದೇವೆ: ಉಮೇಶ ಚೌಧರಿ ಮಾತನಾಡಿ, ಒಂದು ಕಾಲದಲ್ಲಿ ರಾಜ್ಯದ ಉದ್ದಗಲಕ್ಕೂ ಜಾತಿ-ಮತ-ಬೇಧವಿಲ್ಲದೇ ಅನ್ನ ನೀರು ಮತ್ತು ಶೈಕ್ಷಣಿಕ ದಾಸೋಹವನ್ನು ಉಚಿತವಾಗಿ ಧಾರೆಯೆರದ ಸಮುದಾಯ ನಮ್ಮದು, ಆದರೆ ಇಂದು ಪರಿಸ್ಥಿತಿ ಹಾಗೆ ಉಳಿದಿರುವುದಿಲ್ಲ ಅದರಲ್ಲೂ ಶೈಕ್ಷಣಿಕ ಮೀಸಲಾತಿಯಿಂದ ನಮ್ಮ ಸಮುದಾ ಯವ ಮಕ್ಕಳು ಬಹಳಷ್ಟು ವಂಚಿತರಾಗುತ್ತಿದ್ದು ಉತ್ತಮ ಶಿಕ್ಷಣ ಪಡೆದರೂ ಉದ್ಯೋಗವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ರಾಜಕೀಯ ಒತ್ತಡವಿದ್ದರೇ ಬಹಿರಂಗಪಡಿಸಿ:ಡಿ.ಎಚ್.ಬುಡ್ಡನಗೌಡ್ರ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಏ ಮೀಸ ಲಾತಿ ನೀಡಲು ಇಚ್ಚಾಶಕ್ತಿಯ ಕೊರತೆಯೇ ಅಥವಾ ರಾಜಕೀಯವಾಗಿ ಒತ್ತಡ, ಕಾಣದ ಕೈಗಳ ಪ್ರಭಾವಯಿದ್ರೆ ಅದನ್ನೂ ಕೂಡ ಬಹಿರಂಗಪಡಿಸಿ, ನಮ್ಮದು ವೀರರಾಣಿ ಕಿತ್ತೂರ ಚನ್ನಮ್ಮನ ವಂಶ, ಅಂತಹ ಯಾವುದೇ ದುಷ್ಟ ಶಕ್ತಿಗಳಿದ್ದರೂ ಎದುರಿಸುವ ಶಕ್ತಿಯು ನಮಗಿದೆ, ಹೋರಾಟದ ಮೂಲಕ ರಾಜ್ಯ ಹಾಗೂ ದೇಶವನ್ನು ಕಟ್ಟಿದ್ದೇವೆ ಅದೇ ಮಾದರಿಯಲ್ಲಿ 2ಏ ಮೀಸಲಾತಿ ಕೂಡ ಪಡೆದೇ ತೀರುತ್ತೇವೆ ಎಂದರು.
83 ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ: ಸಿದ್ಧನಗೌಡ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಒಂದೂವರೆ ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾಜವಿದೆ, ಒಟ್ಟು 224 ರಲ್ಲಿ (ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿನಿಧಿಸು ತ್ತಿರುವ ಶಿಗ್ಗಾವಿ ಸೇರಿದಂತೆ) 83 ಕ್ಷೇತ್ರದಲ್ಲಿ ನಿರ್ಣಾಯಕ ಸ್ಥಾನದಲ್ಲಿದ್ದೇವೆ, ಸದರಿ ಹೇಳಿಕೆ ಯಾರನ್ನೂ ಹೆದರಿಸಿ ಮೀಸಲಾತಿ ಪಡೆಯುವ ಅವಶ್ಯಕತೆ ಸಮಾಜಕ್ಕಿಲ್ಲ ಆದರೆ ಸಮಾಜದ ಜನರಿಗೆ ಅನ್ಯಾಯವಾದಲ್ಲಿ ಮುಂದೊಂದು ದಿವಸ ಸರ್ಕಾರಕ್ಕೆ ತಕ್ಕಪಾಠ ಕಲಿಸದೇ ಬಿಡುವುದಿಲ್ಲ ಎಂದು ಎಚ್ಚರಿಸಿದರು. ಈ ವೇಳೆ ಶಂಭು ಮಾಲದಾರ, ತಿರಕಪ್ಪ ಮರಬಸಣ್ಣನವರ, ಸಿ.ಸಿ.ಗಡಾದ, ಮರಡೆಪ್ಪ ಹೆಡಿಯಾಲ, ಬಿ.ಎಂ.ಕಡೇಕೊಪ್ಪ, ಶಿವಯೋಗಿ ಗಡಾದ, ಮಂಜುನಾಥ ಬಾಳಿಕಾಯಿ, ಹನುಮಂತಪ್ಪ ಕುರುಡಮ್ಮನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.