ಜ. 1ರಿಂದ ಗೋಕಾಕ ನಗರದಲ್ಲಿ 20ನೇ ಕನ್ನಡ ಜಾತ್ರೆ
ಬಾಲವಾಗ್ಮಿ ಹಾರಿಕಾ ಮಂಜುನಾಥರಿಂದ ಉಪನ್ಯಾಸ
ಗೋಕಾಕ 28: ಕಪರಟ್ಟಿ ಕಳ್ಳಿಗುದ್ದಿಯ ಪವಾಡ ಪುರುಷ ಗುರು ಮಹಾದೇವಜ್ಜನವರ 86ನೇ ಜಯಂತಿ ಹಾಗೂ ಗುರು ಮಹಾದೇವ ಆಶ್ರಮ ಸೇವಾ ಸಂಘ ಇವರ ಆಶ್ರಯದಲ್ಲಿ 20ನೇ ಕನ್ನಡ ಜಾತ್ರೆ ನಿಮಿತ್ಯ ಜ. 1 ಮತ್ತು 2ರಂದು ನಗರದ ಅಂಬಿಗರ ಗಲ್ಲಿಯ ಶಿವಾನುಭವ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಕಾರ್ಯಕ್ರಮದ ನೇತೃತ್ವ ವಹಿಸಿರುವ ಬಸವರಾಜ ಸ್ವಾಮಿಗಳು ಹಿರೇಮಠ ಕಪರಟ್ಟಿ-ಕಳ್ಳಿಗುದ್ದಿ ಅವರು ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಣ್ಣೂರು ಮರಡಿಮಠದ ಕಾಡಸಿದ್ದೇಶ್ವರ ಮಠದ ಡಾ. ಪವಾಡೇಶ್ವರ ಮಹಾಸ್ವಾಮಿಗಳು ಹಾಗೂ ಕುಂದರಗಿ-ಅಂಕಲಿಗೆ ಅಡವಿಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಮಹಾಸ್ವಾಮಿಗಳು ಇವರಿಗೆ “ಕಾಯಕಯೋಗಿ” ಹಾಗೂ ಶಾಸಕ ರಮೇಶ ಜಾರಕಿಹೊಳಿ ಮತ್ತು ಹೆಸರಾಂತ ಹಿರಿಯ ಜಾನಪದ ಕಲಾವಿದರಾದ ಗುರುರಾಜ ಹೊಸಕೋಟೆ ಇವರಿಗೆ “ಕನ್ನಡ ಜ್ಯೋತಿ” ಹೀಗೆ ಎರಡು ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ದಿ. 1ರಂದು ಸಾಯಂಕಾಲ 5.30ಕ್ಕೆ ನಡೆಯುವ ಕನ್ನಡ ಜ್ಯೋತಿ ಹಾಗೂ ಕಾಯಕಯೋಗಿ ಪ್ರಶಸ್ತಿ ಪ್ರಧಾನ ಸಮಾರಂಭದ ಸಾನಿಧ್ಯವನ್ನು ಗೋಕಾಕ ನಗರದ ಶೂನ್ಯ ಸಂಪಾದನ ಮಠದ ಮುರುಘೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು, ಹೆಸರಾಂತ ಬಾಲವಾಗ್ಮಿ ಬೆಂಗಳೂರಿನ ಕುಮಾರಿ ಹಾರಿಕಾ ಮಂಜುನಾಥ್ ಅವರು ಕನ್ನಡ ಜಾತ್ರೆಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಈ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ದಿ 2ರಂದು ಸಾಯಂಕಾಲ 6 ಗಂಟೆಗೆ ನಡೆಯುವ 2 ನೇ ದಿನದ ಪ್ರಶಸ್ತಿ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ವಹಿಸಲಿದ್ದು. ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಲಾ ಸುರೇಶ ಅಂಗಡಿ, ರಾಜಕೀಯ ಮುಖಂಡರು ಅಶೋಕ್ ಪೂಜಾರಿ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭವು ಜರುಗಲಿದೆ.
ಎರಡು ದಿನಗಳ ವರೆಗೆ ನಡೆಯುವ ಈ ಕನ್ನಡ ಜಾತ್ರೆಯಲ್ಲಿ ನಿತ್ಯ ವಿವಿಧ ಗಣ್ಯರಿಗೆ, ಶರಣ ದಂಪತಿಗಳಿಗೆ ಸತ್ಕಾರ ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ವಿಜಯಪುರದ ಜ್ಯೂನಿಯರ್ ವಿಷ್ಣುವರ್ಧನ, ಗೋಕಾಕ ನಾಡಿನ ಹಲಾರು ಕಲಾವಿದರಿಂದ ಭರತನಾಟ್ಯ, ಸಂಗೀತ ಗಾಯನ ಜರುಗುವುದು.