ರಾಣೇಬೆನ್ನೂರಲ್ಲಿ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ
ರಾಣೆಬೆನ್ನೂರು 04: ಪ್ರತಿನಿತ್ಯವೂ ಮಳೆ ಗಾಳಿ ಚಳಿ ಎನ್ನದೆ ಸೇವಾ ಮನೋಭಾವನೆಯಿಂದ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಪತ್ರಿಕಾ ವಿತರಕರಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆ ಆರ್ಥಿಕ ಸಮಾನತೆ ಅವಕಾಶಗಳನ್ನು ಕಲ್ಪಿಸಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷ ಸಂಕಪ್ಪ ಮಾರನಾಳ ಹೇಳಿದರು. ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ.ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪತ್ರಕರ್ತರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಕಾಯಕದಲ್ಲಿ ನಿರತರಾಗಿದ್ದಾರೆ, ಇನ್ನು ಮಹತ್ವವಾದ ಸುದ್ದಿಯನ್ನು ಹೊತ್ತ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಕಾಯಕ ಮಾಡುತ್ತಿದ್ದಾರೆ, ಅವರ ಪಾತ್ರವು ಸಹ ಬಹುಮುಖ್ಯವಾಗಿದೆ. ಹಲವು ವರ್ಷಗಳಿಂದ ವಿತರಕರು ತಮ್ಮ ಜೀವನದ ಭದ್ರತೆಗಾಗಿ ಹೋರಾಟ ಮಾಡುತ್ತಲೇ ಇದ್ದಾರೆ, ಆದರೆ ಸರಕಾರಗಳು ಕಣ್ಣು ತೆರೆಯದೆ ಬರಿ ಆಶ್ವಾಸನೆ ಯಲ್ಲಿ ಕಾಲ ತಳ್ಳುತ್ತಿರುವುದು ಸರಿಯಲ್ಲ ಕೂಡಲೇ ಸರ್ಕಾರ ನೀಡಿದ ಭರವಸೆಯಂತೆ ನಡೆದುಕೊಳ್ಳಬೇಕು ಎಂದರು. ತಾಲೂಕಾ ಘಟಕದ ಅಧ್ಯಕ್ಷ ಪರಶುರಾಮ ಕಾಳೇರ ಅವರು ಮಾತನಾಡಿ ನಿತ್ಯದ ವೃತ್ತಪತ್ರಿಕೆಗಳು ಪತ್ರಿಕೆ ಮುದ್ರಣಗೊಂಡು, ಹೊರಬಂದು, ಓದುಗನ ಕೈ ಸೇರಬೇಕಾದರೆ, ವರದಿಗಾರರು, ಸಂಪಾದಕರು, ಪುಟ ವಿನ್ಯಾಸಕರು, ಜಾಹೀರಾತು, ಪ್ರಸಾರಾಂಗ ವಿಭಾಗ, ಮುದ್ರಣ, ಪ್ಯಾಕಿಂಗ್, ಸಾಗಾಟ, ಮತ್ತು ಪತ್ರಿಕಾ ಏಜೆಂಟರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದ ಅವರು ಬಹು ಮುಖ್ಯವಾಗಿ ಮನೆಗೆ ತಲುಪಿಸುವ ವಿತರಕರು ಸಾಕಷ್ಟು ಶ್ರಮ ಪಡುತ್ತಾರೆ. ಹಂಚುವವರು ಇಲ್ಲದಿದ್ದರೆ ಯಾರು ಇರಲಾರದು ಎಂದು ವಿವರಿಸಿ ಮಾತನಾಡಿದರು ಹಾವೇರಿ ತಾಲೂಕು ಘಟಕದ ಅಧ್ಯಕ್ಷ ಕರಬಸಪ್ಪ ಹಳದೂರು, ಬೀರಪ್ಪ ಕುರುಗುಂದ್, ಜಿಲ್ಲಾ ಕಾರ್ಯದರ್ಶಿ ಜಯಪ್ಪ ಬಣಕಾರ್, ಸೇರಿದಂತೆ ವಿತರಕರಾದ ಕರಬಸಪ್ಪ ಗುಡ್ಡದ, ವೀರಪ್ಪ ಪೂಜಾರ್, ಚಂದ್ರಶೇಖರ ಬಳ್ಳಿ, ಹರೀಶ್ ಬಳಿಗಾರ್, ಮಣಿಕಂಠ ದೈವಜ್ಞ, ಮತ್ತಿತರರು ಉಪಸ್ಥಿತರಿದ್ದರು