ಬ್ಯಾಡ್ಗಿ

ಗ್ರಾಮಸ್ಥರು ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಗ್ರಾಮಸ್ಥರು ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಬ್ಯಾಡಗಿ 19: ಜಾನುವಾರುಗಳಿಗೆ ಮೇಯಲು ಇರುವ ಸರ್ಕಾರಿ  ಗೋಮಾಳ ಜಮೀನನ್ನು ಯಾವುದೇ ಕಾರಣಕ್ಕೂ ಅನ್ಯ ಯೋಜನೆಗಳಿಗಾಗಲಿ, ಸಂಘ ಸಂಸ್ಥೆಗಳಿಗಾಗಲಿ ಮಂಜೂರು ಮಾಡಬಾರದೆಂದು ಒತ್ತಾಯಿಸಿ ತಾಲೂಕಿನ ಅಂಗರಗಟ್ಟಿ ಗ್ರಾಮಸ್ಥರು ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಶೇಖಪ್ಪ ಅಳಲಗೇರಿ ಮಾತನಾಡಿ, ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸರ್ವೇ  ನಂಬರ್ 57ರಲ್ಲಿ 8.05ಎಕರೆ ಹಾಗೂ 58ರಲ್ಲಿ 7.33ಎಕರೆ ಸೇರಿದಂತೆ ಕೇವಲ 15.38ಎಕರೆಯಷ್ಟು ಮಾತ್ರ ಗೋಮಾಳ ಜಮೀನು ಉಳಿದಿದ್ದು, ಇದನ್ನು ಬಿಟ್ಟು ಬೇರೆ ಯಾವುದೇ ಜಮೀನು ಇರುವುದಿಲ್ಲ. ಗ್ರಾಮದಲ್ಲಿ ಸುಮಾರು 431 ಜಾನುವಾರುಗಳಿದ್ದು, ಸರ್ಕಾರಿ  ಮಾರ್ಗಸೂಚಿ ಪ್ರಕಾರ ಗೋಮಾಳ ಜಮೀನು ಇಲ್ಲದೇ ಇರುವುದು ತಮ್ಮ ಗಮನಕ್ಕೆ ಇದ್ದರೂ ಸಹ ತಾವು ಈಗ ಬಂಜಾರ ಸಮಾಜದವರಿಗೆ ಸಮುದಾಯ ಭವನ ನಿರ್ಮಿಸಲು 2ಎಕರೆ ಜಮೀನನ್ನು ಮಂಜೂರು ಮಾಡುವ ಕುರಿತು ಪ್ರಸ್ತಾವನೆ ಸಲ್ಲಿಸಿರುವುದು ಖಂಡನೀಯ, ತಹಶೀಲ್ದಾರ ಅವರು ಸದ್ಯ ಇರುವ ಅಲ್ಪ ಜಮೀನಿನಲ್ಲಿ ಸಮುದಾಯ ಭವನ ನಿರ್ಮಿಸಲು ಜಮೀನು ಮಂಜೂರು ಮಾಡಲು ಮುಂದಾದಲ್ಲಿ ಗ್ರಾಮಸ್ಥರೆಲ್ಲರೂ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಗ್ರಾಮದ ಮುಖಂಡ ಶಿವಪುತ್ರಪ್ಪ ಮಾಸಣಗಿ ಮಾತನಾಡಿ, ಗ್ರಾಮದ ವ್ಯಾಪ್ತಿಯಲ್ಲಿ ಬರುವ 15.38ಎಕರೆ ಜಮಿನನ್ನು ಹುಲ್ಲುಗಾವಲು ಪ್ರದೇಶವೆಂದು ಮಿಸಲಿರಿಸಿ, ಜಾನುವಾರುಗಳ ಹಾಗೂ ರೈತವರ್ಗದ ಹಿತ ಕಾಯಲು ತಾಲೂಕಾಡಳಿತ ಮುಂದಾಗಬೇಕು. 

ಈಗಾಗಲೇ ಬಂಜಾರ ಸಮಾಜದವರು ಸೀತಾಸತಿ ದೇವಸ್ಥಾನವನ್ನು ಅಕ್ರಮವಾಗಿ ನಿರ್ಮಾಣ  ಮಾಡಿದ್ದಾರೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜಮೀನಿನ್ನು ಯಾರಿಗೂ ಯಾವುದೇ ಕಾರಣಕ್ಕೂ ಹಸ್ತಾಂತರ ಮಾಡಬಾರದೆಂದು ಆಗ್ರಹಿಸಿದರಲ್ಲದೇ, ಈ ಜಮೀನಿನ ಸುತ್ತಮುತ್ತ ಸರ್ಕಾರಿ  ಜಮೀನನ್ನು ಒತ್ತುವರಿ ಮಾಡಿಕೊಂಡವರನ್ನು ತೆರವುಗೊಳಿಸಿ ಸರ್ಕಾರಿ  ಗುಡ್ಡವನ್ನು ಉಳಿಸಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಗ್ರಾಪಂ ಅಧ್ಯಕ್ಷ ನಾಗರಾಜ ಕೊರ್ಲ , ಗ್ರಾಮಸ್ಥರಾದ ಡಿ.ಜಿ.ಹಾದಿಮನಿ, ನೀಲಪ್ಪ ಓಲೇಕಾರ, ಹನುಮಂತಪ್ಪ ಗಬ್ಬಗಡಿ, ಜಗದೀಶ ತಗಡಿನಮನಿ, ನಾಗಪ್ಪ ಹಾದಿಮನಿ, ಲಕ್ಷ್ಮಣ ಓಲೇಕಾರ, ಶೇಖಪ್ಪ ಮಾಸಣಗಿ, ಮಾರುತಿ ಅಳಲಗೇರಿ ಗೋಪಾಲ ಗುಡಿಹಿಂದಲ್, ಹನುಮಂತಪ್ಪ ಅಳಲಗೇರಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು 

ಸುದ್ದಿ ಓದಿ