ಟಿಬೆಟಿಯನ್ ಕ್ಯಾಂಪ್ ದಲೈಲಾಮಾ ಸ್ವಾಗತಕ್ಕೆ ಸಜ್ಜು; ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಬೌದ್ಧ ಮಂದಿರಗಳು
ಮುಂಡಗೋಡ 09: ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲೈಲಾಮಾ ಅವರ ಡಿಸೆಂಬರ್ 12 ರಂದು ಮುಂಡಗೋಡಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಇಲ್ಲಿನ ಟಿಬೆಟಿಯನ್ ಕ್ಯಾಂಪ್ ಸಂಪೂರ್ಣವಾಗಿ ಹಬ್ಬದ ವಾತಾವರಣಕ್ಕೆ ತಿರುಗಿದೆ. ಧರ್ಮಗುರುಗಳ ಸ್ವಾಗತಕ್ಕಾಗಿ ಟಿಬೆಟಿಯನ್ನರು ವ್ಯಾಪಕ ಸಿದ್ಧತೆಗಳನ್ನು ನಡೆಸುತ್ತಿದ್ದು, ಬೌದ್ಧ ಮಂದಿರಗಳು ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ವಿಶೇಷವಾಗಿ ಸಿಂಗರಿಸಲಾಗಿದೆ. ದಲೈಲಾಮಾ ಅವರ ಆಗಮನದ ಪ್ರಯುಕ್ತ ಪೂರ್ವಭಾವಿಯಾಗಿ ಸ್ವಚ್ಛತಾ ಕಾರ್ಯಕ್ರಮಗಳು ನಡೆದಿವೆ. ಕ್ಯಾಂಪಿನ ಪ್ರತಿಯೊಂದು ಬೌದ್ಧ ಗುಡಿ, ಗೋಪುರ ಮತ್ತು ಮಂದಿರಗಳನ್ನು ಆಕರ್ಷಕ ದೀಪಾಲಂಕಾರಗಳಿಂದ ಅಲಂಕರಿಸಲಾಗಿದ್ದು,
ಇಡೀ ಕ್ಯಾಂಪ್ ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಂಗೊಳಿಸುತ್ತಿದೆ. ಮಂದಿರಗಳ ಒಳಗೆ ಮತ್ತು ಹೊರಗೆ ನಾನಾ ರೀತಿಯ ವಿಶೇಷ ಲೈಟಿಂಗ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಜೊತೆಗೆ, ಪುಷ್ಪಾಲಂಕಾರದಿಂದ ಸಿಂಗರಿಸಲಾಗಿದ್ದು, ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದೆ. ಕ್ಯಾಂಪಿಗೆ ಹೋಗುವ ಮುಖ್ಯ ರಸ್ತೆಯುದ್ದಕ್ಕೂ ಬ್ಯಾನರ್ಗಳನ್ನು ಅಳವಡಿಸಲಾಗಿದೆ. ಬೌದ್ಧ ಮಂದಿರಗಳು ಮಾತ್ರವಲ್ಲದೆ, ಕ್ಯಾಂಪಿನ ನಿವಾಸಿಗಳು ತಮ್ಮ ಮನೆಗಳನ್ನೂ ಸಹ ಲೈಟಿಂಗ್ ಮತ್ತು ಪುಷ್ಪಾಲಂಕಾರಗಳಿಂದ ಸಿಂಗರಿಸಿಕೊಂಡಿರುವುದು ವಿಶೇಷವಾಗಿ ಕಂಡುಬಂದಿದೆ. ಧರ್ಮಗುರುಗಳ ಆಗಮನಕ್ಕಾಗಿ ಇಡೀ ಸಮುದಾಯ ಕಾತರದಿಂದ ಕಾಯುತ್ತಿದೆ.