ತಪ್ಪಿಲ್ಲ ಬಯಲು ಬಹಿರ್ದೆಸೆ
‘ಶುಚಿತ್ವವಿದ್ದಲ್ಲಿ ದೈವತ್ವವಿದೆ’ ಎಂದು ಶತಮಾನದ ಹಿಂದೆಯೇ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಹೇಳಿದ್ದರು. ಸ್ವಚ್ಛತೆಯಲ್ಲೂ ದೇವರನ್ನು ಕಂಡವರು ಮಹಾತ್ಮಾ ಗಾಂಧಿ. ಅಚ್ಚರಿಯೆಂದರೇ ಇಂದಿಗೂ ಜಗತ್ತಿನಲ್ಲಿ ಗ್ರಾಮೀಣ ಪ್ರದೇಶಗಳ ಜನರಿಗೆ ಶೌಚಾಲಯ ವ್ಯವಸ್ಥೆಇಲ್ಲ. ಪ್ರತಿಯೊಂದು ಹಳ್ಳಿಗಳಲ್ಲಿಯೂ ಮಹಿಳೆಯರು ಶೌಚಕ್ಕೆ ಸಂಬಂಧಿಸಿದಂತೆ ಹಿಂಸೆ, ಅವಮಾನ ಮತ್ತು ಕಿರಿಕಿರಿಯನ್ನು ಅನುಭವಿಸುತ್ತಾರೆ. ಹೆಣ್ಣುಮಕ್ಕಳು ಶೌಚಾಲಯಕ್ಕೆ ಹೋಗಬೇಕೆಂದರೆ ಬಯಲಿಗೆ ಹೋಗಬೇಕು. ಅದು ಸೂರ್ಯ ಹುಟ್ಟುವ ಮೊದಲೇ ಹೋಗಬೇಕು ಅಥವಾ ಸೂರ್ಯ ಮುಳುಗಿದ ಮೇಲೆ ಅಂದರೆ ಕತ್ತಲಾದಾಗ ಹೋಗಬೇಕು. ಸೂರ್ಯ ಮುಳುಗಿದ ಮೇಲೂ ಹೋದರೂಇವರಿಗೆ ಸಮಸ್ಯೆತಪ್ಪಿದ್ದಲ್ಲ. ರಾತ್ರಿ ವೇಳೆ ರಸ್ತೆಯಲ್ಲಿ ಬಸ್, ಲಾರಿ, ಗಾಡಿಗಳು ಬರುವಾಗ ಈ ಹೆಣ್ಣುಮಕ್ಕಳು ತಲೆ ತಗ್ಗಿಸಿ ನಾಚಿಕೆ ಮತ್ತು ಅವಮಾನದಿಂದ ಎದ್ದು ನಿಲ್ಲಬೇಕು. ಇಂತಹ ಅನಿಷ್ಟ ಪದ್ಧತಿಯನ್ನು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಹೆಚ್ಚಾಗಿ ನೋಡಬಹುದಾಗಿದೆ.
ಹೀಗೆ ಪ್ರತಿಯೊಂದು ಹಳ್ಳಿಗಳಲ್ಲಿಯೂ ಸಾಲು ಸಾಲಾಗಿ ನಾಚಿಕೆಯಿಂದತಲೆ ತಗ್ಗಿಸಿಎದ್ದು ನಿಲ್ಲುವ ಹೆಣ್ಣು ಮಕ್ಕಳು ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ಬದುಕುತ್ತಿದ್ದಾರೆಎಂಬುದು ಸಮಾಜಕ್ಕೆ ನಾಚಿಕೆಯ ಸಂಗತಿಯೇ ಸರಿ.‘ಭಾರತ ಬಯಲು ಬಹಿರ್ದೆಸೆ ಮುಕ್ತ ದೇಶವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿ ನಾಲ್ಕೈದು ವರ್ಷಗಳಾದವು. ಆದರೆ ವಾಸ್ತವದಲ್ಲಿ ಭಾರತ ಸಂಪೂರ್ಣವಾಗಿ ಬಯಲು ಬಹಿರ್ದೆಸೆ ಮುಕ್ತ ದೇಶವಾಗಿಲ್ಲ. ವಿಶ್ವದಲ್ಲಿ ಇಂದಿಗೂ ಕೂಡಾ 400 ಕೋಟಿಜನರು ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿದ್ದಾರೆ. ಭಾರತದೇಶವು ಇದಕ್ಕೆ ಹೊರತಾಗಿಲ್ಲ. ಸರ್ಕಾರದ ಅಂಕಿ ಅಂಶಗಳು ತಿಳಿಸುವಂತೆ ಭಾರತದಲ್ಲಿ ಶೌಚಾಲಯಗಳನ್ನು ಹೊಂದಿಲ್ಲದ ಕುಟುಂಬಗಳ ಸಂಖ್ಯೆ 470 ಲಕ್ಷ. ಕರ್ನಾಟಕ ರಾಜ್ಯದಲ್ಲಿ 13 ಲಕ್ಷ ಕುಟುಂಬಗಳಿಗೆ ಶೌಚಾಲಯಗಳಿಲ್ಲ. ನೈರ್ಮಲ್ಯ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಭಾರತದೇಶದಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿದ್ದರೂ ನಗರಗಳ ಕೊಳಚೆ ಪ್ರದೇಶಗಳು ಹಾಗೂ ಗ್ರಾಮೀಣ ಭಾರತದ ಬಹುಪಾಲು ಜನರು ಬಯಲು ಶೌಚ ಪದ್ಧತಿಯನ್ನು ಇಂದಿಗೂ ಅನುಭವಿಸುತ್ತಿದ್ದಾರೆ.
ಆಧುನಿಕತೆ, ವಿಜ್ಞಾನ, ಮಾಹಿತಿತಂತ್ರಜ್ಞಾನ, ಮೊಬೈಲ್‌ಕ್ರಾಂತಿದೇಶದ ಹಳ್ಳಿಗಳನ್ನು ತಲುಪಿರುವುದು ನಿಜ. ಆದರೆ ಶೌಚಾಲಯಗಳ ಬಳಕೆ ಮತ್ತು ಸ್ವಚ್ಛತೆಯ ಅಭ್ಯಾಸಗಳಲ್ಲಿ ಮಾತ್ರ ನೀರೀಕ್ಷಿತ ಬದಲಾವಣೆ ಹಾಗೂ ಸುಧಾರಣೆ ಕಂಡುಬರುತ್ತಿಲ್ಲ. ಬಡತನ, ಅನಕ್ಷರತೆ, ಆರ್ಥಿಕ ಸಂಕಷ್ಟ, ಅರಿವಿನ ಕೊರತೆ, ರೂಢಿಗತ ಅಭ್ಯಾಸಗಳು, ಬದಲಾವಣೆಗೆ ಹೊಂದಿಕೊಳ್ಳದ ಮನೋಸ್ಥಿತಿಗಳು, ನೀರಿನ ತೊಂದರೆ ಹೀಗೆ ಹತ್ತು ಹಲವು ಕಾರಣಗಳು ಇವೆಯಾದರೂ ಅವುಗಳೆಲ್ಲವನ್ನು ಮೀರಿಜನಸಮುದಾಯವು ಸ್ವಚ್ಛತೆಯ ವಿಷಯದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಮೊಬೈಲ್ ಅವರಿಗೆ ಬೇಕು. ಟಿ.ವಿ ರೇಡಿಯೋಗಳು ಬೇಕು. ಹಾಗಾಗಿ ಅವುಗಳನ್ನು ಕೊಂಡುಕೊಂಡಿದ್ದಾರೆ.ಆದರೆಅವರಿಗೆ ಶೌಚಾಲಯಗಳಿಲ್ಲ. ಅವರಿಗೆ ಶೌಚಾಲಯ ಎಂಬುದು ಅವರ ಆದ್ಯತೆಯಾಗಿಲ್ಲದಿರಬಹುದು. ಅವರಿಗೆ ಶೌಚಾಲಯದ ಮಹತ್ವದ ಬಗ್ಗೆ ಹೆಚ್ಚಿನ ಅರಿವು ಇಲ್ಲದಿರಬಹುದು.
ಸಾಮಾನ್ಯವಾಗಿ ನಮ್ಮಜನರನ್ನು ಕಾಡುತ್ತಿರುವ ಬಹುಪಾಲು ಕಾಯಿಲೆಗಳಿಗೆ ಅಶುದ್ಧ ನೀರು, ಕಲುಷಿತ ಪರಿಸರ ಮತ್ತು ಬಯಲು ಮಲವಿಸರ್ಜನೆಯಂತಹ ಕೆಟ್ಟ ಅಭ್ಯಾಸಗಳೇ ಪ್ರಮುಖ ಕಾರಣಗಳಾಗಿವೆ. ಬಯಲಲ್ಲಿ ಬಿದ್ದ ಮನುಷ್ಯನ ಮಲ ಅತ್ಯಂತಅಪಾಯಕಾರಿ ಎಂಬ ಅರಿವು ಹೆಚ್ಚಿನಜನರಿಗೆಇರುವುದಿಲ್ಲ. ‘’ಒಂದು ಗ್ರಾಮದಲ್ಲಿ 2 ಸಾವಿರ ಜನರು ವಾಸ ಮಾಡುತ್ತಿದ್ದಾರೆ ಎಂದಿಟ್ಟುಕೊಳ್ಳೋಣ. ಅದರಲ್ಲಿ ಒಬ್ಬ ಮನುಷ್ಯ ಬಯಲಲ್ಲಿ 300 ಗ್ರಾಂ ಕಕ್ಕಸು ಮಾಡಿದರೆ ದಿನಕ್ಕೆ 60 ಸಾವಿರಕೆಜಿ ಕಕ್ಕಸುಭೂಮಿಗೆ ಸೇರುತ್ತದೆ. ಇದು ನೀರಿನೊಂದಿಗೆ, ಮಣ್ಣಿನೊಂದಿಗೆ ಬೆರೆತು ಹೋಗುತ್ತದೆ. ಕೆಲವು ಕ್ರಿಮಿಕೀಟಗಳು ಇದನ್ನೇತಿನ್ನುತ್ತವೆ. ಅಲ್ಲಿಗೆ ಹೀಗೆ ವಾತಾವರಣಕ್ಕೆ ಸೇರಿದ ಮಲವನ್ನೇ ನಾವು ತರಕಾರಿ, ನೀರು, ಆಹಾರ ರೂಪದಲ್ಲಿ ಪ್ರತಿದಿನ 50ರಿಂದ 100 ಮಿಲಿ ತಿನ್ನುತ್ತಿದ್ದೇವೆ. ಇದು ನಿಜಕ್ಕೂ ಆತಂಕಕಾರಿ. ಇದರಿಂದ ಎಚ್ಚೆತ್ತು ಕೊಳ್ಳದೇ ಹೋದರೆ ಅಪಾಯಕಟ್ಟಿಟ್ಟ ಬುತ್ತಿ”ಎನ್ನುತ್ತಾರೆತಜ್ಞರು.
ಇಡೀ ವಿಶ್ವದಲ್ಲಿ ಕಾಡುವ ಅತಿದೊಡ್ಡ ಸಮಸ್ಯೆ ಎಂದರೆ ಅದು ಶೌಚಾಲಯಗಳನ್ನು ಬಳಸದೇ ಇರುವುದು. ಇಂದಿಗೂ ಜಗತ್ತಿನ ಅನೇಕ ದೇಶಗಳ ಗ್ರಾಮಗಳಲ್ಲಿ ಶೌಚಾಲಯ ಬಳಕೆಯ ಬಗ್ಗೆ ಅರಿವೇಇಲ್ಲ. ಜಗತ್ತು ಎಷ್ಟೇ ಮುಂದುವರೆಯುತ್ತಿದ್ದರೂ ಜನರು ಮಾತ್ರ ಬಯಲಿನಲ್ಲಿ ಮೂತ್ರ ವಿಸರ್ಜನೆ, ಶೌಚ ಮಾಡುವುದನ್ನು ಬಿಡುತ್ತಿಲ್ಲ. ಬಯಲು ಶೌಚ ಮುಕ್ತ ಮಾಡಲು ಆಯಾದೇಶದ ಸರ್ಕಾರಗಳು, ಅಂತರಾಷ್ಟ್ರೀಯ ಸಂಘ-ಸಂಸ್ಥೆಗಳು ಹಲವಾರು ಯೋಜನೆಗಳನ್ನು ಕೈಗೊಂಡಿವೆ. ಬಯಲು ಶೌಚ ಮುಕ್ತವನ್ನಾಗಿ ಮಾಡುವುದಕ್ಕೆ ಅನೇಕ ಯೋಜನೆಗಳಲ್ಲಿ ಸಾವಿರಾರು ಕೋಟಿ ಹಣವನ್ನುಖರ್ಚು ಮಾಡಲಾಗುತ್ತಿದೆ. ಆದರೆ ಇಂದಿಗೂ ಜನರು ಶೌಚಾಲಯಗಳನ್ನು ಬಳಸದೇ ಸಮಸ್ಯೆಗಳ ಹುಟ್ಟಿಗೆ ಕಾರಣವಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಜಾಗತಿಕ ನೈರ್ಮಲ್ಯ ಬಿಕ್ಕಟ್ಟನ್ನು ನಿಭಾಯಿಸಲು ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಯಿಂದ ‘ವಿಶ್ವ ಶೌಚಾಲಯ ದಿನ’ ವನ್ನು ನವೆಂಬರ್ 19 ರಂದು ಜಗತ್ತಿನಾದ್ಯಂತ ಆಚರಿಸುತ್ತಿದೆ. ಶೌಚಾಲಯ ನಿರ್ಮಾಣ, ಬಳಕೆ ಹಾಗೂ ಸ್ವಚ್ಛತೆಯ ಅಭ್ಯಾಸಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವುದು ಅತ್ಯಂತ ಅವಶ್ಯಕವೂ ಹಾಗೂ ಓಚಿತ್ಯ ಪೂರ್ಣವೂ ಆಗಿದೆ.
ಭಾರತ ಸರ್ಕಾರದ ಸ್ವಚ್ಛ ಭಾರತ ಅಭಿಯಾನದ ಯೋಜನೆಯಡಿ ‘ಮನೆಗೊಂದು ಶೌಚಾಲಯ” ಎಂಬ ಧ್ಯೇಯ ವಾಕ್ಯವೇನೋ ಎಲ್ಲೆಡೆಯೂ ಮೊಳಗಿತು. 25 ರಾಜ್ಯದ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡಂತೆ ಐದು ಲಕ್ಷಕ್ಕೂ ಹೆಚ್ಚು ಹಳ್ಳಿಗಳನ್ನು ಬಯಲು ಶೌಚ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ. ಇನ್ನು ಕರ್ನಾಟಕ್ಕೆ ಬಂದರೆ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಒಟ್ಟು 22.40 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ ಎಂದು ರಾಷ್ಟ್ರೀಯ ಗ್ರಾಮೀಣ ನೈರ್ಮಲ್ಯ ಸಮೀಕ್ಷೆ ವರದಿ ಮಾಡಿದೆ.ಆದರೆ ಎಷ್ಟು ಹಳ್ಳಿಗಳಲ್ಲಿ ಶೌಚಾಲಯ ಬಳಸುತ್ತಿದ್ದಾರೆ?ಎಷ್ಟು ಹಳ್ಳಿಗಳಲ್ಲಿ ನೀರಿನ ವ್ಯವಸ್ಥೆ ಇದೆ? ನೀರಿನ ಸೌಲಭ್ಯಇದ್ದೂ ಬಳಸಲಾಗುತ್ತಿರುವ ಶೌಚಾಲಯಗಳ ಸಂಖ್ಯೆ ಎಷ್ಟು? ಶೌಚಕ್ಕೆ ವ್ಯವಸ್ಥೆ ಇದ್ದರೂ ನಮ್ಮಲ್ಲಿ ಎಷ್ಟೋ ಜನರು ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ. ಹಳ್ಳಿಯ ಜನರಿಗೆ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚಾಗಿ ಮಾಡಬೇಕಿದೆ. 2030ರ ವೇಳೆಗೆ ವಿಶ್ವದಎಲ್ಲ ವ್ಯಕ್ತಿಯೂ ಸುರಕ್ಷಿತ ಶೌಚಾಲಯ ಹೊಂದುವಂತೆ ಮಾಡುವುದು ವಿಶ್ವಸಂಸ್ಥೆಯ ಗುರಿಯಾಗಿದೆ.
ಇದು ನೈರ್ಮಲ್ಯ ಸಾಧನೆಯ ಹಾದಿಯಲ್ಲಿ ಬಹುಮುಖ್ಯ ಹೆಜ್ಜೆಯಾಗಿದೆ.ಇದು ಕೇವಲ ಒಬ್ಬ ಪ್ರಧಾನಿಯಿಂದ ಮಾತ್ರ ಸಾಧ್ಯವಾಗುವಂತಹುದಲ್ಲ. ಸಮುದಾಯದ ಸಹಭಾಗಿತ್ವವಲ್ಲದೇ ಸ್ವಚ್ಛತೆಯಂತಹ ಯೋಜನೆಗಳು ಯಶಸ್ವಿಯಾಗಲು ಸಾಧ್ಯವೇಇಲ್ಲ. ಆದ್ದರಿಂದ ಸಮುದಾಯಗಳು, ಸಂಘ-ಸಂಸ್ಥೆಗಳು, ಮಹಿಳಾ ಸಂಘಗಳು, ಯುವಜನತೆ, ದಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಹೀಗೆ ಜನಸಮುದಾಯದ ಸಹಭಾಗಿತ್ವದೊಂದಿಗೆ ಮಾತ್ರ ಶೌಚಾಲಯ ನಿರ್ಮಾಣ, ಶೌಚಾಲಯ ಬಳಕೆ ಹಾಗೂ ಸ್ವಚ್ಛತೆಯ ಅಭ್ಯಾಸಗಳಲ್ಲಿ ಉತ್ತಮರೀತಿಯ ಬದಲಾವಣೆಗಳನ್ನು ತರಲು ಸಾಧ್ಯವಾಗುತ್ತದೆ.