ಶಿಕ್ಷಣಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ: ಕಲ್ಯಾಣಿ
ಗೋಕಾಕ 01: ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. ಶಿಕ್ಷಣವೆಂದರೆ, ಪುಸ್ತಕದ ಜ್ಞಾನವಷ್ಟೇ ಅಲ್ಲ. ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. ಶಿಕ್ಷಣವೆಂದರೆ, ಮನಸ್ಸು, ದೇಹ, ಬುದ್ಧಿಗಳೊಂದಿಗೆ ದೊರೆಯುವ ಸಂಸ್ಕಾರ ಹೀಗೆ ಹಲವು ಶಿಕ್ಷಣ ತಜ್ಞರು ಹಲವು ರೀತಿಯಲ್ಲಿ ತಮ್ಮ ತಮ್ಮ ವಿಚಾರಗಳನ್ನು ವ್ಯಕ್ತ ಪಡಿಸಿರುವುದನ್ನು ನೆನಪಿಸುತ್ತ ಇಂದಿನ ಕಾಲದಲ್ಲಿ ಶಿಕ್ಷಣಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ ಎಂದು ರಾಮದುರ್ಗ ತಾಲೂಕಿನ ಹಿರೇಕೊಪ್ಪ ಬಿ. ಜಿ. ಪ್ರೌಢ ಶಾಲೆಯ ಇಂಗ್ಲೀಷ್ ಬೋಧಕ ರಾಜೇಂದ್ರ ಎಸ್. ಕಲ್ಯಾಣಿ ಹೇಳಿದರು.
ತಾಲೂಕಿನ ಶಿವಶಕ್ತಿ ನಗರ ಪಂಚನಾಯಕನ ಹಟ್ಟಿ ಕ್ರಾಸ್ ಬಳಿ ಹೂಗಾರವರ ಮನೆಯ ಆವರಣದಲ್ಲಿ ರಸಸವೀ ಫೌಂಡೇಶನ್ ಅಡಿಯಲ್ಲಿ ಪಾಕ್ಷಿಕ ಜ್ಞಾನಾಕ್ಷಯ ಚಿಂತಕರ ಚಾವಡಿ 33ನೇ ಮಾಲಿಕೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಣವು ಎಂದಿಗೂ ಕೊನೆಗೊಳ್ಳದ ಮತ್ತು ನಾಶವಾಗದ ಸಂಪತ್ತು. ನಮ್ಮಿಂದ ಯಾರೂ ಶಿಕ್ಷಣವನ್ನು ಕದಿಯಲು ಸಾಧ್ಯವಿಲ್ಲ ಮತ್ತು ಅದನ್ನು ನಾವು ನಮ್ಮ ಶ್ರೇಯೋಭಿವೃದ್ಧಿಗೆ ಉಪಯೋಗಿಸಿ ಸಮಾಜದಲ್ಲಿ ನಮ್ಮ ಹೆಸರನ್ನು ಪ್ರಸಿದ್ಧಿಗೊಳಿಸಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಿವಶಕ್ತಿ ನಗರದ ಹಿರಿಯ ರಾಮಲಿಂಗಪ್ಪ ಪಟ್ಟಣಶೆಟ್ಟಿ ಇಂಥ ಕಾರ್ಯಕ್ರಮಗಳನ್ನು ವಾರಕ್ಕೊಮ್ಮೆಯಾದರೂ ಇಡುವಂತೆ ಸಂಚಾಲಕರಿಗೆ ಮನವಿ ಮಾಡಿದರು. ವಿದ್ಯಾರ್ಥಿಗಳು ಇಂಥ ಮೌಲ್ಯಯುತ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಂಕರ ಮುರಗೋಡ ತಮ್ಮ ಶಾಲೆಯಲ್ಲಿ ಸಾಧಕರನ್ನು ಗೌರವಿಸುತ್ತ ಬಂದಿರುವುದನ್ನು ಗಮನಿಸಿದ ತಾವು ಶಿಕ್ಷಕರು ಹಾಕಿಕೊಟ್ಟಂತೆ ಜೀವನದ ಗುರಿ, ಉದ್ದೇಶಗಳನ್ನು, ಅವುಗಳನ್ನು ಸಾಧಿಸುವ ಮಾರ್ಗಗಳನ್ನು, ಧ್ಯೇಯವನ್ನು, ವಿದ್ಯಾರ್ಥಿಗಳು ಮನಸಲ್ಲಿ ಇರಿಸಿಕೊಂಡು ಸಾಧನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವೇದಿಕೆಯಲ್ಲಿ ನಿರುಪಾದಿ ಪ. ಬೆಣ್ಣಿ ಉಪಸ್ಥಿತರಿದ್ದರು. ಐಶ್ವರ್ಯ ದೇಮಶೆಟ್ಟಿ ಮತ್ತು ನೇತ್ರಾ ಪಾಟೀಲ ವಿಜ್ಞಾನ ಗೀತೆಯನ್ನು ಹಾಡಿದರು. ಪ್ರಿಯಾಂಕಾ ಬನವಿ ಸ್ವಾಗತಿಸಿದರು. ಚಿಂತಾಮಣಿ ಪಾವಟೆ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ, ಕಾರ್ಯಕ್ರಮ ಸಂಚಾಲಕ ರ. ವೀ ದೇಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಗೌರವಿಸಿ ವಂದಿಸಿದರು. ಪ್ರವೀಣ ದೇಮಶೆಟ್ಟಿ ನಿರೂಪಿಸಿದರು. ಐಶ್ವರ್ಯ ಶಿಲ್ತಿಭಾಂವಿ ವಚನ ವಾಚಿಸಿದರು. ವಿದ್ಯಾರ್ಥಿ ಪಾಲಕರು ಹಾಜರಿದ್ದರು .