ನಾಡೋಜ ಪುರಸ್ಕೃತ ನಾರಾಯಣರೆಡ್ಡಿ ನಿಧನಕ್ಕೆ ಸಂತಾಪ
ಲೋಕದರ್ಶನ ವರದಿ
ಬಳ್ಳಾರಿ 14:ನಾಡಿನ ಹೆಸರಾಂತ ಸಾವಯವ ಕೃಷಿಕರು ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪುರಸ್ಕೃತರು ಆದ ನಾಡೋಜ ಎಲ್. ನಾರಾಯಣರೆಡ್ಡಿ ಅವರು ದಿನಾಂಕ 13.1.2019 ಭಾನುವಾರ ರಾತ್ರಿ 11.00 ಗಂ ನಿಧನರಾಗಿದ್ದಾರೆ.
ನಾಲ್ಕು ದಶಕಗಳಿಂದ ಸಾವಯಕ ಕೃಷಿ ಮಾಡುತ್ತಾ, ಸಾವಯವ ಕೃಷಿ ಪದ್ದತಿ ಕುರಿತು ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದ ನಾರಾಯಣರೆಡ್ಡಿ ಅವರಿಗೆ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಹಾಲೆಂಡ್, ಜಪಾನ್, ಜರ್ಮನಿ ಸೇರಿದಂತೆ ಹದಿನೈದು ದೇಶಗಳ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಉಪನ್ಯಾಸ ನೀಡಿದ್ದಾರೆ.
ಜಪಾನ್ನ ವಿಶ್ವವಿಖ್ಯಾತ ರೈತ ಫುಕುವೋಕಾ ಅವರ ವಿಚಾರಗಳಿಂದ ಪ್ರೇರಿತರಾಗಿದ್ದ ನಾರಾಯಣರೆಡ್ಡಿ ಅವರು ರಾಸಾಯನಿಕರಹಿತವಾಗಿ ಸಾವಯವ ಪದ್ದತಿಯನ್ನು ಅಳವಡಿಸಿಕೊಂಡು ಅದರಲ್ಲಿ ಯಶಸ್ಸು ಕಂಡರು. ತಾವು ತಿಳಿದುಕೊಂಡಿದ್ದನ್ನು ಅವರು ಇತರೆ ರೈತರಿಗೂ ತಿಳಿಸಿ ಮಾರ್ಗದರ್ಶನ ನೀಡುವ ಮೂಲಕ ರಾಜ್ಯ ಮತ್ತು ದೇಶದಲ್ಲಿ ಸಾವಯವ ಕೃಷಿ ಪಸರಿಸಲು ಮುಖ್ಯಪಾತ್ರ ವಹಿಸಿದರು.
ನಾರಾಯಣರೆಡ್ಡಿ ಅವರ ನಿಧನಕ್ಕೆ ಕನ್ನಡ ವಿಶ್ವವಿದ್ಯಾಲಯವು ಸಾಂತ್ವಾನದೊಂದಿಗೆ ಸಂತಾಪವನ್ನು ಸೂಚಿಸುತ್ತದೆ. ಇಂದು ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಬೋಧಕ, ಬೋಧಕೇತರ ಮತ್ತು ವಿದ್ಯಾಥರ್ಿಗಳು ಸಂತಾಪವನ್ನು ಸೂಚಿಸಲು ಗೌರವಾರ್ಥವಾಗಿ ಎರಡು ನಿಮಿಷಗಳ ಮೌನಾಚರಣೆಯನ್ನು ಆಚರಿಸುತ್ತಿದೆ. ಮೃತರ ಆತ್ಮಕ್ಕೆ ಶಾಂತಿ ಮತ್ತು ಅವರ ಕುಟುಂಬದವರಿಗೆ ದುಖಃವನ್ನು ಭರಿಸಲು ಶಕ್ತಿಯನ್ನು ಕೊಡುವಂತೆ ದೇವರಿಗೆ ಪ್ರಾಥರ್ಿಸುತ್ತೇವೆ.