ರಾಜಮನೆತನದ ಖಾಸಗಿ ದಸರಾ - ಯದುವೀರ್ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಕೆ
ಮೈಸೂರು 22: ರಾಜಮಾತೆ ತಾಯಿಯ ನಿಧನದಿಂದ ಮುಂದೂಡಲ್ಪಟ್ಟಿದ್ದ ಅರಮನೆಯ ಖಾಸಗಿ ದಸರಾ ಇಂದು ಆರಂಭಗೊಂಡಿದ್ದು, ಅರಮನೆ ಕಲ್ಯಾಣ ಮಂಟಪದಲ್ಲಿ ರಾಜಮನೆತನದ ಖಾಸಾ ಆಯುಧಗಳಿಗೆ ರಾಜವಂಶಸ್ಥ ಯದುವೀರ್ ವಿಶೇಷ ಪೂಜೆ ಸಲ್ಲಿಸಿದರು. ರಾಜ ಪುರೋಹಿತರ ಮಾರ್ಗದರ್ಶನದಲ್ಲಿ ಯದುವೀರ್ ಒಡೆಯರ್ ಪೂಜೆ ಸಲ್ಲಿಸಿ ಬಳಿಕ ಸಾಂಪ್ರದಾಯಿಕ ವಜ್ರಮುಷ್ಠಿ ಕಾಳಗಕ್ಕೆ ಚಾಲನೆ ನೀಡಿದರು.
ಸಾವಿನ ಸೂತಕದಿಂದ ವಿಜಯದಶಮಿ ದಿನ ರದ್ದಾಗಿದ್ದ ವಜ್ರಮುಷ್ಟಿ ಕಾಳಗ ಇಂದು ಆನೆ ಬಾಗಿಲಲ್ಲಿನ ಸವಾರಿ ತೊಟ್ಟಿಯಲ್ಲಿ ನಡೆಯಿತು. ನಾಲ್ವರು ಜಟ್ಟಿಗಳ ನಡುವೆ ನಡೆದ ವಜ್ರಮುಷ್ಠಿ ಕಾಳಗ ಒಂದೇ ನಿಮಿಷಕ್ಕೆ ಮುಗಿಯಿತು. ಬೆಂಗಳೂರಿನ ರಾಘವೇಂದ್ರ ಜಟ್ಟಿ ಹಾಗು ಚಾಮರಾಜನಗರದ ಪುರುಷೋತ್ತಮ್ ಜಟ್ಟಿ ಕಾಳಗದಲ್ಲಿ ರಾಘವೇಂದ್ರ ಜಟ್ಟಿ ಜಯ ಗಳಿಸಿದರು. ಮತ್ತೊಂದು ಜೋಡಿಯಾದ ಚೆನ್ನಪಟ್ಟಣದ ವಿದ್ಯಾದರ ಹಾಗು ಮೈಸೂರಿನ ಮಂಜುನಾಥ್ ನಡುವೆ ನಡೆದ ಕಾಳಗದಲ್ಲಿ ಇಬ್ಬರೂ ಸಮಾನ ಅಂಕ ಗಳಿಸಿದರು.
ಪುರುಷೋತ್ತಮ ಜಟ್ಟಿಯ ರಕ್ತ ಚಿಮ್ಮಿಸಿದ ರಾಘವೇಂದ್ರ ಜಟ್ಟಿ ಒಂದೇ ನಿಮಿಷದಲ್ಲಿ ಮುಷ್ಠಿ ಕಾಳಗವನ್ನು ಮುಕ್ತಾಯಗೊಳಿಸಿದರು. ರಾಘವೇಂದ್ರ ಜೆಟ್ಟಿ ಮಾತನಾಡಿ, ಚಾಮುಂಡಿ ತಾಯಿಯ ಆಶೀವರ್ಾದದಿಂದ ಮೊದಲ ಬಾರಿಗೆ ಜಟ್ಟಿ ಕಾಳಗದಲ್ಲಿ ಅವಕಾಶ ಸಿಕ್ಕಿದೆ. ಇದರಲ್ಲಿ ಸೋಲು ಗೆಲುವು ಪ್ರಶ್ನೆ ಇಲ್ಲ.
ಎಲ್ಲವೂ ಚಾಮುಂಡಿ ತಾಯಿಗೆ ಅಪರ್ಿಸುತ್ತೇನೆ ಎಂದರು. ಕಾಳಗದ ಬಳಿಕ ವಿಜಯಯಾತ್ರೆ ಹಾಗು ಶಮಿ ವೃಕ್ಷದ ಪೂಜೆ ನಡೆಯಿತು.
ಬೆಳ್ಳಿ ಪಲ್ಲಕ್ಕಿಯಲ್ಲಿ ಕುಳಿತು ಯದುವೀರ್ ಒಡೆಯರ್ ಭುವನೇಶ್ವರಿ ದೇವಾಲಯಕ್ಕೆ ವಿಜಯ ಯಾತ್ರೆ ನಡೆಸಿದರು.