ಶಿವಸ್ಫೂರ್ತಿ ಮಹಾಶಿವರಾತ್ರಿ ಸುವರ್ಣ ಸಂಗೀತೋತ್ಸವ; ಸುವರ್ಣ ಸಾಧಕ ಶಿವ ಪ್ರಶಸ್ತಿ ಪ್ರದಾನ ಸಮಾರಂಭ
ಧಾರವಾಡ 14 : ಶಿವಸ್ಫೂರ್ತಿ ಮಹಾಶಿವರಾತ್ರಿ ಸುವರ್ಣ ಸಂಗೀತೋತ್ಸವ ಆಚರಣಾ ಸಮಿತಿಯು ಕುಮಾರೇಶ್ವರ ಕಲ್ಚರಲ್ ಸೊಸೈಟಿ(ರಿ), ಧಾರವಾಡ ಇವರ ಸಹಯೋಗದಲ್ಲಿ ದಿನಾಂಕ: 13.02.2026ರಂದು ಸಂಜೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಮಹಾಶಿವರಾತ್ರಿ ಸಂಗೀತೋತ್ಸವ ಹಾಗೂ ಸಾಧಕ ಶಿವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಅಧ್ಯಕ್ಷ ಡಾ.ರಂಜಾನ ದರ್ಗಾ ಶಿವನ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿದರು.
ಹೈದರಾಬಾದನ ರುದ್ರೇಶ ಭಜಂತ್ರಿ ಹಾಗೂ ನಿಖಿಲ್ ಜೋಶಿ ಅವರ ಶಹನಾಯಿ ಮತ್ತು ಸಿತಾರ ಜುಗಲ್ಬಂದಿಯಲ್ಲಿ ರಾಗ ಶ್ಯಾಮಕಲ್ಯಾಣ ಮತ್ತು ದುನ್ಗಳನ್ನು ಪ್ರಸ್ತುತ ಪಡಿಸಿದರು. ಪುಣೆಯ ಖ್ಯಾತ ಹಿಂದೂಸ್ತಾನಿ ಗಾಯಕಿ ವಿದುಷಿ ಆರತಿ ಅಂಕಲಿಕರ ಟಿಕೇಕರ ಅವರು ಗಾಯನದಲ್ಲಿ ರಾಗ ಜಿಂಜೋಟಿ, ಬಸಂತ ಬಹಾರ ಹಾಗೂ ಭೈರವಿಯಲ್ಲಿ ಅಭಂಗ್ ಪ್ರಸ್ತುತ ಪಡಿಸಿದರು. ಶಿವಚಿತ್ರಗಾನದಲ್ಲಿ ರಾಧಾ ದೇಸಾಯಿ, ಸುಜಾತಾ ಗುರವ, ಭಾರ್ಗವಿ ಕುಲಕರ್ಣಿ, ಡಾ.ವೀಣಾ ಸವದತ್ತಿ, ಡಾ. ಅರ್ಚನಾ ಪತ್ತಾರ ಸುತಾರ ಇವರು ರಾಗ ಯಮನ್ದಲ್ಲಿ ಶಿವನ ಬಂದೀಶ್, ಶಿವನ ಭಜನ್ಗಳನ್ನು ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಪಂ.ಸಾತಲಿಂಗಪ್ಪ ದೇಸಾಯಿಕಲ್ಲೂರ ಪಂ.ರವೀಂದ್ರ ಯಾವಗಲ್, ವಾದಿರಾಜ ದಂಡಾಪೂರ, ಪ್ರಸಾದ ಮಡಿವಾಳರ, ಹಾರ್ಮೊನಿಯಂದಲ್ಲಿ ಡಾ.ಪರಶುರಾಮ ಕಟ್ಟಿಸಂಗಾವಿ, ಸತೀಶ ಭಟ್ ಹೆಗ್ಗಾರ ಸಾಥ್ ಸಂಗತ ನೀಡಿದರು. ಕಲಕೇರಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಶಿವಸ್ತುತಿ ಪ್ರಸ್ತುತ ಪಡಿಸಿದರು.
ಶಿವಕುಂಚಗಾನದಲ್ಲಿ ಹಿರಿಯ ಚಿತ್ರಕಲಾವಿದರಾದ ಎಸ್.ಕೆ.ಪತ್ತಾರ, ಡಾ. ಪ್ರತಾಪ ಬಹುರೂಪಿ, ಶಿವಕುಮಾರ ಕಂಕಣವಾಡಿ, ಶಿವರಾಜ ಕಮ್ಮಾರ ಅವರು ಶಿವಸ್ತುತಿಗೆ ಚಿತ್ರಗಳನ್ನು ಬಿಡಿಸಿದರು. ಇದೇ ಸಂದರ್ಭದಲ್ಲಿ ಸುವರ್ಣ ಸಾಧಕ ಶಿವ ಪ್ರಶಸ್ತಿಗೆ ಖಾತ ಹಿಂದೂಸ್ಥಾನಿ ಗಾಯಕಿ ವಿದುಷಿ ಆರತಿ ಅಂಕಲಿಕರ್ ಟಿಕೇಕರ, ಪಂ. ರವೀಂದ್ರ ಯಾವಗಲ್, ಪಂ.ಸಾತಲಿಂಗಪ್ಪ ದೇಸಾಯಿ ಕಲ್ಲೂರ, ವಾದಿರಾಜ ದಂಡಾಪೂರ ಹಾಗೂ ಸುವರ್ಣ ಕಲಾಪೋಷಕ ಸಾಧಕ ಶಿವ ಪ್ರಶಸ್ತಿಗೆ ಗುರುಮಾತೆ ಭಾರತಿದೇವಿ ರಾಜಗುರು ಮತ್ತು ಸಾಧಕ ಶಿವ ಸಮ್ಮಾನಕ್ಕೆ ನಿಖಿಲ್ ಜೋಶಿ ಇವರಿಗೆ ಪ್ರದಾನ ಮಾಡಲಾಯಿತು. ಸತೀಶ್ ಮೂರುರು ನಿರೂಪಿಸಿದರು. ಸುವರ್ಣ ಮಹಾಶಿವರಾತ್ರಿ ಸಂಗೀತೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ವೀರಣ್ಣ ಪತ್ತಾರ ಸ್ವಾಗತಿಸಿದರು. ಸಮಿತಿ ಉಪಾಧ್ಯಕ್ಷ ಡಾ.ಶಶಿಧರ ನರೇಂದ್ರ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ ವಂದಿಸಿದರು. ಶಿವರಾತ್ರಿ ಸುವರ್ಣ ಸಂಗೀತೋತ್ಸವಕ್ಕೆ ಸಂಸ್ಕಾರ ಭಾರತಿ, ಧಾರವಾಡ, ಕಲಕೇರಿ ಸಂಗೀತ ವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಆಯೋಜನೆಗೊಂಡಿದೆ.