ಸಿಹಿಕಹಿ ಚಂದ್ರು "ಬೊಂಬಾಟ್ ಭೋಜನ" ಕ್ಕೆ 150 ರ ಸಂಭ್ರಮ
ಬೆಂಗಳೂರು, ಏಪ್ರಿಲ್ 08:ನಟ, ನಿರ್ಮಾಪಕ ಸಿಹಿಕಹಿ ಚಂದ್ರು ಅವರ "ಬೊಂಬಾಟ್ ಭೋಜನ" ಕಾರ್ಯಕ್ರಮ ನೋಡದವರು, ಅದರ ಬಗ್ಗೆ ಕೇಳಿರದವರು ಬಹಳ ಕಡಿಮೆ. ತನ್ನದೇ ಆದ ಅಭಿಮಾನಿಗಳನ್ನು ಹೊಂದಿದೆ ಈ ಅಡುಗೆ ಕಾರ್ಯಕ್ರಮ.ಪ್ರಸ್ತುತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರದವರೆಗೂ ಮಧ್ಯಾಹ್ನ 12ರಿಂದ1 ಗಂಟೆಯವರೆಗೆ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಇದೇ 12 ನೇ ತಾರೀಖು ಈ ಕಾರ್ಯಕ್ರಮದ 150ನೇ ಸಂಚಿಕೆ ಮೂಡಿಬರಲಿದ್ದು, ಈವರೆಗೆ ಪ್ರಸಾರವಾಗಿರುವ ಅಡುಗೆಗಳ ಪುಸ್ತಕ “ಬೊಂಬಾಟ್ ಭೋಜನ” ಬಿಡುಗಡೆಯಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿಹಿಕಹಿ ಚಂದ್ರು ನಾನು 2012 ರಲ್ಲಿ ಮೊದಲ ಬಾರಿಗೆ "ಬೊಂಬಾಟ್ ಭೋಜನ" ಕಾರ್ಯಕ್ರಮ ಆರಂಭ ಮಾಡಿದ್ದೆ. ಅದು ಎಷ್ಟು ಜನಪ್ರಿಯವಾಯಿತೆಂದರೆ, 'ಜನ ನಾನೊಬ್ಬ ನಟ ಅನ್ನವುದನ್ನು ಮರೆತು ಅಡುಗೆ ಭಟ್ಟ ಅಂದು ಕೊಂಡು ಬಿಟ್ಟದ್ದರು. ತುಂಬಾ ಜನಪ್ರಿಯವಾಗಿದ್ದಾಗಲೇ ನಾನು ಆ ಕಾರ್ಯಕ್ರಮ ನಿಲ್ಲಿಸಿ, ಮತ್ತೆ ನಟನೆಯಲ್ಲಿ ತೊಡಗಿಸಿಕೊಂಡೆ. ಆದರೂ ನಾನು ಎಲ್ಲೇ ಹೋದರೂ ನನ್ನನ್ನು "ಬೊಂಬಾಟ್ ಭೋಜನ" ದ ಮೂಲಕವೇ ಗುರುತಿಸಿದ್ದು ಹೆಚ್ಚು. ಇದರ ಬಗ್ಗೆ ಯೋಚಿಸಿದ ನಾನು ಕೆಲವು ದಿನಗಳಿಂದ ಸ್ಟಾರ್ ಸುವರ್ಣ ವಾಹಿನಿಗಾಗಿ ಈ ಕಾರ್ಯಕ್ರಮವನ್ನು ಮತ್ತೆ ಆರಂಭಿಸಿದ್ದೇನೆ. ಇದೇ ಏಪ್ರಿಲ್ 12ರಂದು ಇದರ 150ನೇ ಸಂಚಿಕೆ ಪ್ರಸಾರವಾಗಲಿದೆ. ಅಂದಿನ ವಿಶೇಷ ಸಂಚಿಕೆಗೆ ವಿಶೇಷ ಅತಿಥಿಯಾಗಿ ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ಆಗಮಿಸುತ್ತಿದ್ದಾರೆ.
"ಬೊಂಬಾಟ್ ಭೋಜನ" ಕಾರ್ಯಕ್ರಮದಲ್ಲಿ ಹಲವು ವಿಭಾಗಗಳಿದ್ದು, ನಾನು ಅಡುಗೆ ಮಾಡುವುದಕ್ಕೆ ನಳಪಾಕ ಅಂತ ಹೆಸರಿಟ್ಟಿದ್ದೀನಿ. ಡಾ. ಗೌರಿ ಸುಬ್ರಹ್ಮಣ್ಯ ಅವರು ಆರೋಗ್ಯಕ್ಕೆ ಸಂಬಂಧಿಸಿದರ ಬಗ್ಗೆ ಮಾಹಿತಿ ನೀಡುತ್ತಾರೆ. ಟೈಂಪಾಸ್ ವಿಭಾಗದ ಮೂಲಕ ಎಂ.ಎಸ್.ನರಸಿಂಹಮೂರ್ತಿ ಅವರ ಮಾತುಗಳು ರಂಜಿಸುತ್ತವೆ ಎಂದು ವಿವರಣೆ ನೀಡಿದರು. ಕೃಷ್ಣ ಗೀ ಮಾಲೀಕರಾದ ಅಶ್ವಥ್ ನಾರಾಯಣ ಗುಪ್ತ ಪುಸ್ತಕ ಬಿಡುಗಡೆ ಮಾಡಿ ಶುಭ ಕೋರಿದರು.ಹಾಸ್ಯ ಲೇಖಕ ಎಂ.ಎಸ್.ನರಸಿಂಹಮೂರ್ತಿ, ಮುಕ್ತಿನಾಗ ಕ್ಷೇತ್ರದ ಮುಖ್ಯಸ್ಥರು ಹಾಗೂ ವೈದ್ಯೆ ಡಾ. ಗೌರಿ ಸುಬ್ರಹ್ಮಣ್ಯ ಮತ್ತು ಕಾರ್ಯಕ್ರಮದ ನಿರ್ಮಾಪಕಿ ಸಿಹಿಕಹಿ ಗೀತಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.