ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಆಗ್ರಹಿಸಿ ಮನವಿ
ಬ್ಯಾಡಗಿ: ಶೀಘ್ರದಲ್ಲಿಯೇ ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿ ಅಗಲೀಕರಣ (ಮುಖ್ಯರಸ್ತೆ) ಮಾಡುವಂತೆ ಆಗ್ರಹಿಸಿ ಮುಖ್ಯರಸ್ತೆ ಅಗಲೀಕರಣ ಸಮಿತಿ ಸದಸ್ಯರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮಾತನಾಡಿದ ಮುಖ್ಯರಸ್ತೆಯ ಅಗಲೀಕರಣ ಸಮಿತಿಯ ಅಧ್ಯಕ್ಷ ಸುರೇಶ ಚಲವಾದಿ, ಕಳೆದ 13 ವರ್ಷ ದಿಂದ ನೆನಗುದಿಗೆ ಬಿದ್ದಿರುವ ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿ ಅಗಲೀಕರಣ ಮಾಡದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಮತ್ತೊಂದು ಅಪಘಾತ ಸಂಭವಿಸಿ ಅಮಾಯಕ ರೈತನೊಬ್ಬ ಜೀವ ಕಳೆದುಕೊಂಡಿದ್ದಾನೆ, ಕಳೆದ 13ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಸಹ ಜಿಲ್ಲಾಡಳಿತ ಮತ್ತು ತಾಲೂಕಾಡಳಿತದ ದಿವ್ಯನಿರ್ಲಕ್ಷ್ಯದಿಂದ ಅಗಲೀಕರಣ ಮರೀ ಚಿಕೆಯಾಗಿ ಉಳಿದಿದೆ ಇನ್ನಾದರೂ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಎಚ್ಚೆತ್ತುಕೊಂಡು ಶೀಘ್ರದಲ್ಲಿಯೇ ಅಗಲೀಕರಣ ಮಾಡದಿದ್ದಲ್ಲಿ ನ.27 ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಪ್ರವೀಣ್ ಯಾದವಾಡ ಮಾತನಾಡಿ, ಅಂತರಾಷ್ಟ್ರೀಯ ಖ್ಯಾತಿಯ ಮಾರುಕಟ್ಟೆ ಹೊಂದಿರುವ ಪಟ್ಟಣದಲ್ಲಿ ಮುಖ್ಯರಸ್ತೆ ಅಭಿವೃದ್ಧಿಯಾಗದಿರುವುದು ನಾಚಿಕೆಗೇಡಿನ ಸಂಗತಿ, ಈಗಾಗಲೇ ಮುಖ್ಯರಸ್ತೆಯಲ್ಲಿ ಹಲವು ಅಪಘಾತಗಳು ಸಂಭವಿಸಿ ಅನೇಕ ಜನರು ಪ್ರಾಣವನ್ನ ಕಳೆದುಕೊಂಡಿದ್ದಾರೆ, ಮುಂದೆಯೂ ಸಾಕಷ್ಟು ಅನಾಹುತ ಸಂಭವಿಸುವ ಎಲ್ಲ ಸಾಧ್ಯತೆಗಳಿದ್ದು ಇದಕ್ಕೆಲ್ಲ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತವೇ ನಿರ್ವಹಣೆ ಎಂದು ಆಕ್ರೋಶ ಹೊರ ಹಾಕಿದರು.
ಪಾಂಡುರಂಗ ಸುತಾರ, ಎಂ.ಪಿ.ಹಂಜಗಿ, ಮಂಜು ಕುಮ್ಮೂರ, ಎಂ.ಎಸ್.ಜಾಧವ, ಎಚ್.ಎಂ. ಬಾಸೂರ, ತನು ಕುಮಾರ, ಕೆ.ವಿ.ದೊಡ್ಡಗೌಡರ, ಮಂಜಪ್ಪ ಅಂಬಲಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.