ಕಾರವಾರ

ಕರಾವಳಿ ಉತ್ಸವ-2018ಕ್ಕೆ ಉತ್ಸಾಹದ ಸಿದ್ಧತೆ: ಶೃಂಗಾರಗೊಳ್ಳುತ್ತಿದೆ ಕಾರವಾರ

ಕರಾವಳಿ ಉತ್ಸವ-2018ಕ್ಕೆ ಉತ್ಸಾಹದ ಸಿದ್ಧತೆ: ಶೃಂಗಾರಗೊಳ್ಳುತ್ತಿದೆ ಕಾರವಾರ

ನಾಗರಾಜ್ ಹರಪನಹಳ್ಳಿ

ಕಾರವಾರ 06: ಕರಾವಳಿ ಉತ್ಸವ -2018ಕ್ಕೆ ಭರದ ಸಿದ್ಧತೆ ನಡೆದಿದೆ. ಇಲ್ಲಿನ ರವೀಂದ್ರನಾಥ ಟಾಗೋರ್ ಬೀಚ್ನಲ್ಲಿ ಮಯೂರವರ್ಮ ವೇದಿಕೆಯ ಪಕ್ಕವೇ ಉತ್ಸವದ ವೇದಿಕೆ ಸಜ್ಜಾಗುತ್ತಿದ್ದು, ವೇದಿಕೆ ನಿಮರ್ಾಣದ ಸ್ಥಳಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ನಕುಲ್ ಅವರು ಕರಾವಳಿ ಉತ್ಸವಕ್ಕೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕಲಾವಿದರು ಆಗಮಿಸುತ್ತಿದ್ದಾರೆ. ಹಾಗೇ ಸ್ಥಳೀಯ ಮತ್ತು ಜಿಲ್ಲೆಯ ವಿವಿಧ ತಾಲೂಕುಗಳ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಪ್ರವಾಸೋದ್ಯಮ ಮತ್ತು ಜಿಲ್ಲೆಯಲ್ಲಿನ ಸಾಹಸಿ ತಾಣಗಳನ್ನು ಹೊರ ಜಗತ್ತಿಗೆ ಪರಿಚಯಿಸಲು ಮತ್ತು ಕಾರವಾರ ಪ್ರವಾಸಿತಾಣ ಎಂಬುದನ್ನು ಸಾರಲು ಹೆಚ್ಚಿನ ಒತ್ತು ನೀಡಲಾಗಿದೆ. ಅಲ್ಲದೇ ದೇಶದ ಕಲೆ ಸಂಸ್ಕೃತಿಯನ್ನು ಬಿಂಬಿಸಲು ಆದ್ಯತೆ ನೀಡಲಾಗಿದೆ. ಭರತನಾಟ್ಯದಿಂದ ಹಿಡಿದು ಚಿತ್ರಕಲೆ (ಖಾವಿ ಕಲೆ, ವರಲೆ ಚಿತ್ರ, ಹಸೆ ಚಿತ್ರ), ರಂಗೋಲಿ ಕಲೆಗಳಿಗೆ ಸಹ ಪ್ರೋತ್ಸಾಹ ನೀಡಲಾಗಿದೆ.  ಉತ್ಸವ ಡಿ.8 ರಿಂದ ಆರಂಭವಾಗಲಿದೆ. ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಉತ್ಸವ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಗೌರವ ಉಪಸ್ಥಿತಿ ಇದೆ. ಸಚಿವೆ ಜಯಮಾಲ, ಸಚಿವ ವೆಂಕಟರಾವ್ ನಾಡಗೌಡ, ಸಚಿವ ಸಾ.ರಾ.ಮಹೇಶ್, ಶಾಸಕಿ ರೂಪಾಲಿ ನಾಯ್ಕ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ ಎಂದರು. 

ಮೊದಲ ದಿನ ಮಯೂರವರ್ಮ ವೇದಿಕೆಯಲ್ಲಿ ರಾಷ್ಟ್ರಮಟ್ಟದ ಗಾಯಕಿ ಡಾ.ಜಯದೇವಿ ಜಂಗಮಶೆಟ್ಟಿ ಅವರಿಂದ  ವಚನ ಹಾಗೂ ಸೂಫಿ ಗಾಯನ,  ಸುಗಮ ಸಂಗೀತ, ಚಿತ್ರಗೀತೆ ಹಾಡುವವರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಬೆಂಗಳೂರಿನ ಪ್ರಭಾತ್ ಕಲಾವಿದರು ಕರುನಾಡ ದರ್ಶನ ನೃತ್ಯ ನಡೆಸಿಕೊಡಲಿದ್ದಾರೆ. ಹಾಗೂ ಸಂಧ್ಯಾ ಗ್ರೂಪ್ ಮೋಹಿನಿ ಅಟ್ಟಂ , ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಕಲಾವಿದರು ನೃತ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಿನ್ನರದ ಕಲಾವಿದರಿಂದ ಗುಮಟೆಪಾಂಗ್ ವಾದ್ಯ ನುಡಿಸುವಿಕೆ ಸಹ ಇದೆ. ಹಾಗೆ ಬಾಲಿವುಡ್ನ ಖ್ಯಾತ ಗಾಯಕ ಅಭಿಜಿತ್ ಸಾವಂತ ಅವರಿಂದ ರಸಮಂಜರಿ ಕಾರ್ಯಕ್ರಮ ಪ್ರಧಾನವಾಗಿ ನಡೆಯಲಿದೆ ಎಂದರು.

ಡಿ.9 ರಂದು ಹಳಿಯಾಳದ ಜ್ಯೂಲಿಯಾನ ಫನರ್ಾಂಡೀಸ್ ತಂಡದಿಂದ ಡುಮಾಮಿ ನೃತ್ಯ ಪ್ರದರ್ಶನವಿದೆ. ಭಟ್ಕಳದ ಝೇಂಕಾರ್ ಮೆಲೋಡಿಸ್ ನಿಂದ ರಸಮಂಜರಿ, ಕುಮಟಾ ನಾದಶ್ರೀ ತಂಡದಿಂದ ಸಂಗೀತ ಕಾರ್ಯಕ್ರಮ,ಹುಬ್ಬಳ್ಳಿಯ ಸುಜಾತ ರಾಜಗೋಪಾಲ ತಂಡದಿಂದ ಭರತನಾಟ್ಯ,ಶ್ರೀಲಕ್ಷ್ಮಿ ಹೆಗಡೆ ಶಿರಸಿ ಅವರಿಂದ ಹಿಂದೂಸ್ತಾನಿ ಗಾಯನ,

 ಸಂಕೇತ್ ಗಾಂವಕರ ನಿಂದ ಪಾಶ್ಚತ್ಯ ನೃತ್ಯ ಗಳಿವೆ. ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಕಲಾವಿದರು ನೃತ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪ್ರಮುಖವಾಗಿ ಸ್ಯಾಂಡಲ್ವುಡ್ ಗಾಯಕ ರಘು ದೀಕ್ಷಿತ್ ಅವರಿಂದ ಸಂಗೀತ ಕಾರ್ಯಕ್ರಮವಿದೆ. 

ಡಿ.10 ರಂದು ಡಾ. ಜಯದೇವಿ ಜಂಗಮ ಶೆಟ್ಟಿ ಸೂಫಿ ಹಾಡುಗಳನ್ನು ಹಾಡಲಿದ್ದಾರೆ. ಚಿತ್ರನಟ ವಿಕ್ರಮಸೂರಿಯಿಂದ ನೃತ್ಯ ಕಾರ್ಯಕ್ರಮ ಹಾಗೂ ಬಾಲಿವುಡ್ ಹಿನ್ನೆಲೆ ಗಾಯಕಿ ನೀತಿ ಮೋಹನ್ ಅವರಿಂದ ಸಂಗೀತ ರಸಮಂಜರಿ ಇದೆ. 

ಅಲ್ಲದೇ ಜಿಲ್ಲಾ ರಂಗಮಂದಿರದಲ್ಲಿ ಸ್ಥಳೀಯ ಕಲಾವಿದರಿಂದ ಉತ್ಸವದ ಮೂರು ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಇವೆ. ಪ್ರತಿ ದಿನ ಸರಾಸರಿ 40 ಕಲಾವಿದರು ಉತ್ಸವದಲ್ಲಿ ತಮ್ಮ ಪ್ರತಿಭೆ ಪ್ರದಶರ್ಿಸಲಿದ್ದಾರೆ. ಅಂಧ ಗಾಯಕ ಅನಿಲ್ ನಾಯ್ಕ ಉಳಗಾ ಹಾಗೂ ಕಾರವಾರ ಆಶಾ ನಿಕೇತನದ ಮೂಕ ಮಕ್ಕಳ ನೃತ್ಯ ಪ್ರದರ್ಶನಕ್ಕೂ ಉತ್ಸವದಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ನ್ಯಾಯವನ್ನು ಕಲಾವಿದರ ಆಯ್ಕೆ ಮತ್ತು ಅವಕಾಶ ನೀಡುವಲ್ಲಿ ಕಾಪಾಡಲಾಗಿದೆ. 

ಉತ್ಸವದ ಪ್ರಮುಖ ಆಕರ್ಷಣೆಯಾಗಿ ಬೈಕ್ ಸ್ಟಂಟ್, ಹೆಲಿಕಾಪ್ಟರ್ ರೈಡಿಂಗ್, ಮತ್ಸಮೇಳ, ಫಲಪುಷ್ಪ ಪ್ರದರ್ಶನ, ರಂಗೋಲಿ ಕಲೆ, ಕಬ್ಬಡ್ಡಿ ಪಂದ್ಯಾವಳಿ, ಮ್ಯಾರಥಾನ್ ಕರಾವಳಿ ರನ್, ಅಡುಗೆ ಪ್ರದರ್ಶನಗಳು ಇವೆ. ಟೆರಾಕೋಟಾ, ಕಂಬಾರಿಕೆ ಪ್ರದರ್ಶನಗಳು ಸಹ ಉತ್ಸವದಲ್ಲಿವೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ವಿವರಿಸಿದರು. 


ಸುದ್ದಿ ಓದಿ