ಬೆಳಗಾವಿ

5 ದಿನ ಉತ್ತಮ ಮಳೆಯಾದರೆ ಬೆಳಗಾವಿಗೆ ನೀರಿನ ಸಮಸ್ಯೆ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ

5 ದಿನ ಉತ್ತಮ ಮಳೆಯಾದರೆ ಬೆಳಗಾವಿಗೆ ನೀರಿನ ಸಮಸ್ಯೆ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: ಜಿಲ್ಲೆಯಲ್ಲಿ ಸದ್ಯ ಸಾಧಾರಣ ಮಳೆಯಾಗುತ್ತಿದ್ದು, ಇನ್ನೂ ಐದು ದಿನಗಳ ಕಾಲ ಉತ್ತಮ ಮಳೆಯಾದರೆ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.  ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಉನ್ನತಾಧಿಕಾರಿಗಳ ಪ್ರಗತಿ ಪರೀಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆ ಕೊರತೆ ಇದ್ದರೂ, ಹವಾಮಾನ ಮುನ್ಸೂಚನೆಯಂತೆ ಮುಂದಿನ ಐದು ದಿನ ಮಳೆಯಾದರೆ ಜಲಮೂಲಗಳು ಸಮರ​‍್ಕವಾಗಿ ಭರ್ತಿಯಾಗಲಿದ್ದು, ನೀರಿನ ಆತಂಕ ದೂರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  

ಜಿಲ್ಲೆಯ ಜಲಾಶಯಗಳಲ್ಲಿ ಸದ್ಯ ಮುಂದಿನ ಎರಡು ತಿಂಗಳವರೆಗೆ ಕುಡಿಯುವ ನೀರು ಪೂರೈಸಲು ಸಾಕಾಗುವಷ್ಟು ನೀರಿನ ಸಂಗ್ರಹವಿದೆ. ಆದ್ದರಿಂದ ಸಾರ್ವಜನಿಕರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದರು.  ಕೆಲವು ಪ್ರದೇಶಗಳಲ್ಲಿ ತಾಂತ್ರಿಕ ಕಾರಣಗಳು ಹಾಗೂ 24ಥ7 ಕುಡಿಯುವ ನೀರಿನ ಯೋಜನೆ ವಿಳಂಬದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ ಸಮರ​‍್ಕ ನೀರು ನಿರ್ವಹಣೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.  ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನೀರಿನ ಅಭಾವ ಉಂಟಾದರೆ ತಕ್ಷಣ ಟ್ಯಾಂಕರ್ ಮೂಲಕ ನೀರು ಪೂರೈಸಲು ಅಗತ್ಯ ಅನುದಾನ ಮತ್ತು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳ ನಿರ್ವಹಣಾ ಲೋಪದಿಂದ ಕೆಲವೆಡೆ ಸಮಸ್ಯೆಗಳಾಗಿದ್ದು, ಅವುಗಳನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.  

ಹಿಡಕಲ್ ಹಾಗೂ ರಕ್ಕಸಕೊಪ್ಪ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗುತ್ತಿದ್ದು, ಇದು ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲಕರವಾಗಿದೆ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಬಿತ್ತನೆ ಕಾರ್ಯವೂ ಉತ್ತಮವಾಗಿ ನಡೆಯುತ್ತಿದೆ. ರಾಮದುರ್ಗ ಸೇರಿದಂತೆ ಎರಡು-ಮೂರು ತಾಲ್ಲೂಕುಗಳಲ್ಲಿ ಮಾತ್ರ ಮಳೆಯ ಪ್ರಮಾಣ ಕಡಿಮೆಯಿದ್ದು, ಮುಂದಿನ ದಿನಗಳಲ್ಲಿ ಮಳೆಯಾದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹೇಳಿದರು.  ಒಂದು ವೇಳೆ ಮಳೆ ಕೈಕೊಟ್ಟು ಬಿತ್ತಿದ ಬೆಳೆ ಒಣಗುವ ಪರಿಸ್ಥಿತಿ ನಿರ್ಮಾಣವಾದರೆ ಸರ್ಕಾರ ರೈತರನ್ನು ಕೈಬಿಡುವುದಿಲ್ಲ. ಜಂಟಿ ಸಮೀಕ್ಷೆ ನಡೆಸಿ ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.  


ಸುದ್ದಿ ಓದಿ