ರಾಷ್ಟ್ರೀಯ ಪ್ಯಾರಾ ವಾಲಿಬಾಲ್: ಕರ್ನಾಟಕಕ್ಕೆ ಬೆಳ್ಳಿ ಹಬ್ಬ; ಹೊನ್ನಳ್ಳಿಯ ಯಮನಪ್ಪ ಸಾಧನೆ
ದೇವರ ಹಿಪ್ಪರಗಿ 05 : ಉತ್ತರ ಪ್ರದೇಶದ ಮೀರತ್ನಲ್ಲಿ ಇತ್ತೀಚೆಗೆ ನಡೆದ 14 ನೇ, ಹಿರಿಯ ಪುರುಷರ ಸಿಟ್ಟಿಂಗ್ ವಾಲಿಬಾಲ್ ನ್ಯಾಷನಲ್ ಚಾಂಪಿಯನ್ಶಿಪ್-2026ರಲ್ಲಿ ಕರ್ನಾಟಕ ತಂಡ ಅದ್ವಿತೀಯ ಪ್ರದರ್ಶನ ನೀಡಿ ರನ್ನರ್ ಅಪ್ ಸ್ಥಾನದೊಂದಿಗೆ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ. ಈ ಐತಿಹಾಸಿಕ ಸಾಧನೆಯಲ್ಲಿ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಯುವಕ ಯಮನಪ್ಪ ಶಂಕ್ರೆಪ್ಪ ದೊಡಮನಿ ಪ್ರಮುಖ ಪಾತ್ರ ವಹಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಪ್ಯಾರಾ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಪ್ಯಾರಾ ಒಲಿಂಪಿಕ್ ಕಮಿಟಿ ಆಫ್ ಇಂಡಿಯಾ ಜಂಟಿಯಾಗಿ ಫೆಬ್ರವರಿ 25 ರಿಂದ 28 ರವರೆಗೆ ಆಯೋಜಿಸಿದ್ದ ಲೀಗ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಸತತ ನಾಲ್ಕು ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶಿಸಿತು. ಸೆಮಿಫೈನಲ್ನಲ್ಲಿ ರಾಜಸ್ಥಾನ ತಂಡವನ್ನು ಮಣಿಸಿ ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಆಂಧ್ರ್ರದೇಶ ತಂಡಕ್ಕೆ ಶರಣಾಯಿತು. ತೀವ್ರ ಪೈಪೋಟಿಯ ಆಟ ಪ್ರದರ್ಶಿಸಿದ ಕರ್ನಾಟಕ ತಂಡವು ಅಂತಿಮವಾಗಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟು ಬೆಳ್ಳಿ ಪದಕ ಪಡೆಯಿತು. ತಂಡದ 'ಪ್ಲೇಯಿಂಗ್ 6' ನಲ್ಲಿ ಸ್ಥಾನ ಪಡೆದಿದ್ದ ಹೊನ್ನಳ್ಳಿಯ ಯಮನಪ್ಪ ದೊಡಮನಿ ತಂಡದ ಯಶಸ್ಸಿಗೆ ಅಮುಲ್ಯ ಕೊಡುಗೆ ನೀಡಿದರು.
ಸಾಧಕರಿಗೆ ಅಭಿನಂದನೆ:
ವಿಜೇತ ತಂಡದಲ್ಲಿದ್ದ ಆಟಗಾರರಾದ ಪ್ರತಾಪ ಹೆಗಡೆ (ನಾಯಕ), ದಾದಾ ಕಲಾಂದರ (ಉಪನಾಯಕ), ಮುತ್ತುರಾಜು, ಯಮನಪ್ಪ ದೊಡಮನಿ, ಜಾಕಿ, ಹರೀಶ, ಮನೋಜ, ಪ್ರಕಾಶ, ಕಿರಣ, ಲಕ್ಷ್ಮಣ್ಣ, ರವಿ, ಪ್ರೀತಮ, ಲೋಕಣ್ಣ, ಮಾಶಪ್ಪ ಹಾಗೂ ತರಬೇತುದಾರ ರಾಘವೇಂದ್ರ ಅವರನ್ನು ಪ್ಯಾರಾಲಿಂಪಿಕ್ ಕಮಿಟಿಆಫ್ ಇಂಡಿಯಾದ ಅಧ್ಯಕ್ಷ ಸತ್ಯ ನಾರಾಯಣ, ಪ್ಯಾರಾ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ವಿಜಯರಾವ್ ಶಿಂದೆ ಮತ್ತು ದಿವ್ಯಾಂಗ ಪ್ಯಾರಾ ವಾಲಿಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.