ಬೇಸಿಗೆ ಬೆಳೆಗೆ ಕಾಲುವೆಗಳಿಗೆ ನೀರು ಹರಿಸದಿದ್ದರೆ, ರಾಷ್ಟ್ರೀಯ ಹೆದ್ದಾರಿ ಬಂದ್; ರಸ್ತೆ ಚಳುವಳಿಗೆ ರೈತರ ಎಚ್ಚರಿಕೆ
ಬೇಸಿಗೆ ಬೆಳೆಗೆ ಕಾಲುವೆಗಳಿಗೆ ನೀರು ಹರಿಸದಿದ್ದರೆ, ರಾಷ್ಟ್ರೀಯ ಹೆದ್ದಾರಿ ಬಂದ್; ರಸ್ತೆ ಚಳುವಳಿಗೆ ರೈತರ ಎಚ್ಚರಿಕೆ
ಕಂಪ್ಲಿ 26: ತುಂಗಭದ್ರ ಜಲಾಶಯದಲ್ಲಿ ಅಧಿಕ ಮಟ್ಟದಲ್ಲಿ ನೀರು ಸಂಗ್ರಹವಿದ್ದು, ರೈತರ ಸಂಕಷ್ಟವನ್ನರಿತು ಬೇಸಿಗೆ ಬೆಳೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಮುಂದಿನದಲ್ಲಿ ರಾಜ್ಯ ಹೆದ್ದಾರಿಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ರಸ್ತೆ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಎಚ್ಚರಿಸಿದರು. ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಬೇಸಿಗೆ ನೀರು ಹರಿಸುವ ಸಂಬಂಧ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೈತೃತ್ವದಲ್ಲಿ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಮಾತನಾಡಿ, ಜಲಾಶಯದಲ್ಲಿ 80 ಟಿಎಂಸಿ ನೀರು ಇದ್ದು, ಎರಡನೇ ಬೆಳೆಗೆ ನೀರು ಹರಿಸಿದರೆ, ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ. ಮುಂಗಾರು ಹಂಗಾಮಿನ ಬೆಳೆಯು ರೋಗಬಾಧೆ, ವಾತಾವರಣ ವೈಪ್ಯರಿತ್ಯ ಮತ್ತು ಮಳೆಯಿಂದಾಗಿ ರೈತರ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಇದರಿಂದ ರೈತರಿಗೆ ನಷ್ಟವಾಗಿದ್ದು, ಆದ್ದರಿಂದ ಬೇಸಿಗೆ ಬೆಳೆಗೆ ನೀರು ಹರಿಸಿದರೆ, ರೈತರು ಉಳಿಯಲು ಸಾಧ್ಯ. ಬೆಂಗಳೂರಿನಲ್ಲಿ ಐಸಿಸಿ ಸಭೆ ನಡೆಸುವುದರಿಂದ ಇಲ್ಲಿನ ರೈತರಿಗೆ ತುಂಬ ತೊಂದರೆಯಾಗುತ್ತಿದೆ. ಆದ್ದರಿಂದ ತುಂಗಭದ್ರ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆಯನ್ನು ಇದೇ ನವೆಂಬರ್ 3ರ ಒಳಗಾಗಿ ನಡೆಸಿ, ಬೇಸಿಗೆ ಬೆಳೆಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಬೇಕು.
ಕ್ರಸ್ ಗೇಟ್ ದುರಸ್ಥಿ ನೆಪದಲ್ಲಿ ಬೇಸಿಗೆ ಬೆಳೆಗೆ ನೀರು ಹರಿಸುವುದನ್ನು ತಡೆಯುವುದು ಖಂಡನೀಯವಾಗಿದೆ. ಎರಡನೇ ಬೆಳೆ ತೆಗೆದುಕೊಂಡ ನಂತರ ಹೊಸ ಗೇಟ್ ಅಳವಡಿಸಲು ಅವಕಾಶವಿದೆ. ಆದ್ದರಿಂದ ಮಾನ್ಯ ಸಚಿವರು, ಶಾಸಕರು ಹಾಗೂ ಟಿ.ಬಿ.ಡ್ಯಾಮ ಅಧಿಕಾರಿಗಳ ಗಮನ ಹರಿಸಿ, ರೈತರನ್ನು ಉಳಿಸುವ ನಿಟ್ಟಿನಲ್ಲಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕು ಬಿಳ್ಳಾರಿ ಕೊಪ್ಪಳ ಮತ್ತು ರಾಯಚೂರು ಭಾಗದ ರೈತರು ಹೋರಾಟದಲ್ಲಿ ಭಾಗವಹಿಸಿ ಬೇಕು ಎಂದರು. ಇಲ್ಲಿನ ಸಭೆಯಲ್ಲಿ ರೈತ ಮುಖಂಡರು ಹಲವು ಸಲಹೆ ಸೂಚನೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ, ರೈತ ಹಾಗೂ ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ಆನಂದರೆಡ್ಡಿ, ತಾಲೂಕು ಅಧ್ಯಕ್ಷ ಎಮ್ಮಿಗನೂರು ವಿರೇಶ, ಕಾರ್ಯಾಧ್ಯಕ್ಷರಾದ ಕೊಟ್ಟೂರು ರಮೇಶ, ಡಿ.ಮುರಾರಿ, ನಗರ ಘಟಕ ಅಧ್ಯಕ್ಷ ತಿಮ್ಮಪ್ಪ ನಾಯಕ, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಎಂ.ಸುಧೀರ್, ಗಂಗಣ್ಣ, ಡಿ.ಶ್ರೀನಿವಾಸ, ವಿರೂಪಾಕ್ಷರೆಡ್ಡಿ, ವಿರೇಶ ಬಳ್ಳಾರಿ, ಈರಣ್ಣ, ಶಿವಜಾತ ಸೇರಿದಂತೆ ಅನೇಕರಿದ್ದರು.