ಮಾನವೀಯತೆ ಮೆರೆದ ನಂದಕುಮಾರ ಭೈರಿ
ತಾಳಿಕೋಟಿ 05: ದೇ.ಹಿಪ್ಪರಗಿ ಮತಕ್ಷೇತ್ರದ ಸಾತಿಹಾಳ್ ಎಲ್. ಟಿ. ಗ್ರಾಮದಲ್ಲಿ ಇತ್ತೀಚಿಗೆ ಕೃಷಿ ಹೊಂಡದಲ್ಲಿ ಆಯತಪ್ಪಿ ಬಿದ್ದು ಮೃತನಾದ ಬಾಲಕನ ಮನೆಗೆ ಭೇಟಿ ನೀಡಿದ ಭೈರಿ ಫೌಂಡೇಶನ್ (ಕಲಕೇರಿ) ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ನಂದಕುಮಾರ ಭೈರಿ ಧನ ಸಹಾಯ ನೀಡಿ ಮಾನವೀಯತೆ ಮೆರೆದರು.
ಧನ ಸಹಾಯ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿದ ನಂತರ ಮಾತನಾಡಿದ ಅವರು, ಈ ಬಡಕುಟುಂಬಕ್ಕೆ ಭವಿಷ್ಯದಲ್ಲಿ ಆಧಾರ ಸ್ಥಂಭವಾಗಬಹುದಾದ ಮೃತ ಬಾಲಕ ಚೇತನ್ ಜಾದವ್(09) ಅರಳುವ ಮುನ್ನವೆ ಸಾವನ್ನಪ್ಪಿದ್ದು ದುಃಖದ ಸಂಗತಿಯಾಗಿದೆ. ಭಗವಂತ ಈ ಆಘಾತವನ್ನು ಸಹಿಸುವ ಶಕ್ತಿಯನ್ನು ಬಾಲಕನ ಕುಟುಂಬದವರಿಗೆ ನೀಡಲೆಂದು ತಿಳಿಸಿದರು.
ಹೂ.ಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬಗೌಡ ಪಾಟೀಲ ಮಾತನಾಡಿ ಇದೊಂದು ಮನಕಲಕುವ ಘಟನೆಯಾಗಿದೆ. ಭೈರಿಯವರು ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಇದಷ್ಟೇ ಸಾಲದು ಈ ಕ್ಷೇತ್ರದ ಶಾಸಕರು ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ಘಟಕದ ಅಧ್ಯಕ್ಷ ಪ್ರಕಾಶ ಅವರಾದಿ, ಮೈನು ಮನಿಯಾರ್. ಅಂಬರೀಶ್ ಹಿರೇಮಠ, ಶಾಂತಗೌಡ ಹೊಸಗೌಡ್ರು ಇದ್ದರು