ಧಾರವಾಡ - ಹುಬ್ಬಳ್ಳಿ

ಮಾ. 03 ರಂದು ‘ಪುಟ್ಟರಾಜ ಸಮ್ಮಾನ’ ಪುರಸ್ಕಾರ ; ಹಿರಿಯ ವಯೋಲಿನ್ ವಾದಕ ಪಂ. ಬಿ.ಎಸ್‌. ಮಠರಿಗೆ ಪುಟ್ಟರಾಜ ಸಮ್ಮಾನ

ಮಾ. 03 ರಂದು ‘ಪುಟ್ಟರಾಜ ಸಮ್ಮಾನ’ ಪುರಸ್ಕಾರ ; ಹಿರಿಯ ವಯೋಲಿನ್ ವಾದಕ ಪಂ. ಬಿ.ಎಸ್‌. ಮಠರಿಗೆ ಪುಟ್ಟರಾಜ ಸಮ್ಮಾನ

ಹುಬ್ಬಳ್ಳಿ 02 :  ಸಂಗೀತ ಸಾಧಕರ ತಪೋಧಾಮ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಅವಧೂತ ಪುರುಷ ಡಾ. ಪುಟ್ಟರಾಜ ಗವಾಯಿಗಳ 115ನೇ ಜನ್ಮದಿನೋತ್ಸವ ಅಂಗವಾಗಿ 2026ರ ಪುಟ್ಟರಾಜ ಸಮ್ಮಾನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ ಸಮಾರಂಭ ಮಾ. 03 ರಂದು ಮಂಗಳವಾರ ಸಂಜೆ 5.30ಕ್ಕೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಜರುಗಲಿದೆ. ಧಾರವಾಡದ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ ಪ್ರತಿವರ್ಷ ಪ್ರದಾನಿಸಲಾಗುವ ಪುಟ್ಟರಾಜ ಸಮ್ಮಾನ ರಾಷ್ಟ್ರೀಯ ಪ್ರಶಸ್ತಿಯು ಪ್ರಸ್ತುತ ವರ್ಷ ಹಿರಿಯ ವಯೋಲಿನ್ ವಾದಕ ಪಂ. ಬಿ.ಎಸ್‌. ಮಠರಿಗೆ ಸಂದಿದೆ. ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಗಳು ಸಮಾರಂಭದ ಸಾನ್ನಿಧ್ಯ ವಹಿಸಲಿದ್ದಾರೆ. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಶಸ್ತಿಯನ್ನು ಪ್ರದಾನಿಸುವರು.

ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆಯ ಮಹಾಪೌರರಾದ ಜ್ಯೋತಿ ಪಾಟೀಲ ಅವರು ಅತಿಥಿಗಳಾಗಿ ಆಗಮಿಸುವರು. ಪ್ರತಿಷ್ಠಾನದ ಅಧ್ಯಕ್ಷ ಮಹಾಬಲೇಶ್ವರ  ಹಾಸಿನಾಳ ಕಾಯಕ್ರಮದ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ, ಖಜಾಂಚಿ ಪಂ. ಡಿ. ಕುಮಾರದಾಸ, ಉಪಾಧ್ಯಕ್ಷ ಶಂಕರ ಕುಂಬಿ ಉಪಸ್ಥಿತರಿರುವರು. ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಈ ಕಾರ್ಯಕ್ರಮಕ್ಕೆ ಕೈಜೋಡಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಪಂ. ಬಿ.ಎಸ್‌. ಮಠ, ವಿದುಷಿ ಅಕ್ಕಮಹಾದೇವಿ ಮಠ ಹಾಗೂ ವೀಣಾ ದಂಡಾವತಿಮಠ ಅವರ ಮೂರು ವಯೋಲಿನ್‌ಗಳ ಝೇಂಕಾರ ಮೊಳಗಲಿದೆ.  ಬೆಂಗಳೂರಿನ ಯುವ ಪ್ರತಿಭೆ ಅನಿರುದ್ಧ ಐತಾಳ ಅವರ ಗಾಯನದ ಪ್ರಸ್ತುತಿಯೊಂದಿಗೆ ಸಮಾರಂಭಕ್ಕೆ ಚಾಲನೆ ದೊರೆಯಲಿದೆ. ತಬಲಾದಲ್ಲಿ ಬೆಂಗಳೂರಿನ ಕೇಶವ ಜೋಶಿ ಹಾಗೂ ಸಂವಾದಿನಿಯಲ್ಲಿ ಧಾರವಾಡದ ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ಸಂಗತ್ ಮಾಡಲಿದ್ದಾರೆ.  

ಪಂ. ಬಿ.ಎಸ್‌. ಮಠ ಅವರ ಕುರಿತು ಒಂದಿಷ್ಟು... 

ನಮ್ಮ ನಾಡಿನ ಸುಪ್ರಸಿದ್ಧ ವಯೋಲಿನ್ ವಾದಕರಲ್ಲಿ ಪಂ. ಬಿ.ಎಸ್‌. ಮಠ ಅವರೂ ಒಬ್ಬರು. ಧಾರವಾಡ-ಪಣಜಿ ಆಕಾಶವಾಣಿಯ ನಿಲಯ ಕಲಾವಿದರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದವರು. ಮೂಲತಃ ಬಾಗಲಕೋಟೆ ಜಿಲ್ಲೆಯ ಚಿತ್ತರಗಿಯವರು. ಇವರದು ಸಂಗೀತ ಪರಂಪರೆಯ ಮನೆತನ. ಹೀಗಾಗಿ ಇವರಿಗೆ ಬಾಲ್ಯದಿಂದಲೇ ಸಂಗೀತದತ್ತ ಒಲವು ಮೂಡಿತು. ಇವರ ಆರಂಭಿಕ ಸಂಗೀತ ಪಾಠವಾಗಿದ್ದು ದೊಡ್ಡಪ್ಪ ಪುಟ್ಟದಯ್ಯಸ್ವಾಮಿ ಅವರಲ್ಲಿ. ನಂತರ ಪದ್ಮಭೂಷಣ ಡಾ. ಪುಟ್ಟರಾಜ ಗವಾಯಿಗಳಲ್ಲಿ 10 ವರ್ಷಗಳ ಆಳವಾದ ಮಾರ್ಗದರ್ಶನ ಪಡೆದು ಪ್ರತಿಭಾವಂತ ಕಲಾವಿದರಾಗಿ ಹೊರಹೊಮ್ಮಿದರು.

ಗ್ವಾಲಿಯರ್ ಹಾಗೂ ಕಿರಾನಾ ಘರಾಣೆ ಶೈಲಿಗಳಲ್ಲಿ ಅತ್ಯಂತ ವಿದ್ವತ್ಪೂರ್ಣವಾಗಿ ನುಡಿಸುವ ಪಂ. ಬಿ.ಎಸ್‌. ಮಠ ಅವರು ಗಾಯಕಿ ಹಾಗೂ ತಂತ್ರಕಾರಿ ಅಂಗಗಳ ಪ್ರಸ್ತುತಿಯಲ್ಲಿ ಸಿದ್ಧಹಸ್ತರು. ಕರ್ನಾಟಕ ಕಲಾಶ್ರೀ, ಮಾನಸ ಸಮ್ಮಾನ, ಪಂ. ಡಿ.ಕೆ. ದಾತಾರ ಪ್ರಶಸ್ತಿ, ಹಾನಗಲ್ ಕುಮಾರಶ್ರೀ ಪ್ರಶಸ್ತಿ, ಸಂಗೀತಶ್ರೀ, ಶ್ರೀಗುರು ಪುಟ್ಟರಾಜ ಪುರಸ್ಕಾರ, ನಿಜಗುಣ ಪುರಂದರ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅನೇಕ ಶಿಷ್ಯರು ಇವರ ಗರಡಿಯಲ್ಲಿ ಪಳಗಿದ್ದಾರೆ.. ಅವರಲ್ಲಿ ಅಕ್ಕಮಹಾದೇವಿ ಮಠ, ಮಿಲಿಂದ ರಾಯ್ಕರ, ವೀಣಾ ದಂಡಾವತಿಮಠ, ಡಾ. ಮಾಯಾ ಕುಡಚಡಕರ, ಸುಭಾಸ ಸರಮಳಕರ, ಮೋಹನದಾಸ ಭಗತ್, ಗುರುಬಸವ ಮಹಾಮನೆ ಪ್ರಮುಖರು. ಆಕಾಶವಾಣಿ ಎ ಉಚ್ಚಶ್ರೇಣಿಯ ಕಲಾವಿದರಾಗಿರುವ ಬಿ.ಎಸ್‌. ಮಠ ಅವರು ದೇಶ-ವಿದೇಶಗಳಲ್ಲಿ ತಮ್ಮ ಸಂಗೀತದ ನಿನಾದವನ್ನು ಹರಿಸಿದ್ದಾರೆ. 


ಸುದ್ದಿ ಓದಿ