ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ 31ನೇ ಸರ್ವ ಸಾಧಾರಣ ಸಭೆ
ಲೋಕದರ್ಶನ ವರದಿ
ಅಥಣಿ 21: ಅಥಣಿ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ 5 ವರ್ಷಗಳ ಅವಧಿಯಲ್ಲಿ ಅಥಣಿ ತಾಲೂಕಿನ 5 ಸಕ್ಕರೆ ಕಾರಖಾನೆಗಳಲ್ಲಿಯೇ ಪ್ರತಿ ಟನ್ ಕಬ್ಬಿಗೆ ಅತೀ ಹೆಚ್ಚು ಬೆಲೆ ಪಾವತಿಸಲಾಗಿದೆ ಎಂದು ಸಕ್ಕರೆ ಕಾರಖಾನೆ ಅಧ್ಯಕ್ಷ ಪರಪ್ಪ ಸವದಿ ಹೇಳಿದರು. ಅವರು ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ 31 ನೇ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಐದು ಹಂಗಾಮಿನಲ್ಲಿ ಕೃಷ್ಣಾ ಸಕ್ಕರೆ ಕಾರಖಾನೆ ಕಬ್ಬು ಪೂರೈಕೆ ಮಾಡಿದ ರೈತರ ಖಾತೆಗೆ ಒಟ್ಟು 23, 775 ರೂಪಾಯಿಗಳನ್ನು ಪಾವತಿಸಿದರೆ ರೇಣುಕಾ ಶುಗರ್ಸ 23,495, ಉಗಾರ ಶುಗರ್ಸ 23, 560, ಅಥಣಿ ಶುಗರ್ಸ 23,420 ಹಾಗೂ ಶಿರಗುಪ್ಪಿ ಶುಗರ್ಸ 23,440 ರೂ.ಗಳನ್ನು ಪಾವತಿಸಿದೆ ಎಂದ ಅವರು ಚಾಲ್ತಿ ವರ್ಷದಲ್ಲಿ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಗೆ 5 ಕೋಟಿ 20 ಲಕ್ಷ 86 ಸಾವಿರದಷ್ಟು ಲಾಭವಾಗಿದೆ ಎಂದರು.
ರೈತ ಹಿತ ಕಾಯುವ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಗೆ ಅಥಣಿ ತಾಲೂಕಿನ ರೈತರು ಉತ್ತಮ ಗುಣ ಮಟ್ಟದ ಕಬ್ಬನ್ನು ಪೂರೈಸಿ ಕಾರಖಾನೆಯ ಬೆಳವಣಿಗೆಗೆ ಸಹಕರಿಸಬೇಕು ಎಂದ ಅವರು ಕಳೆದ ಹಂಗಾಮಿನಲ್ಲಿ 6,41,519 ಟನ್ ಕಬ್ಬು ನುರಿಸಿ 11.48 ಇಳುವರಿ ಮೂಲಕ 7,30,500 ಕ್ವಿಂಟಾಲ್ ಸಕ್ಜರೆ ಉತ್ಪಾದಿಸಲಾಗಿದೆ ಜೊತೆಗೆ 6 ಕೋಟಿ 65 ಲಕ್ಷ 24 ಸಾವಿರದಷ್ಟು ಯುನಿಟ್ಸ ವಿದ್ಯುತ್ ಉತ್ಪಾದಿಸಲಾಗಿದೆ ಎಂದು ಹೇಳಿದರು.
ಕಾರಖಾನೆಯ ವ್ಯವಸ್ಥಾಪಕ ನಿರ್ದೇ ಶಕ ಜಿ.ಎಮ್.ಪಾಟೀಲ ಮಾತನಾಡಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ನಿರ್ಧರಿಸುವ ಕಬ್ಬಿನ ದರದ ಆಧಾರದಲಿಯೇ ಬೆಳಗಾವಿ, ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳ ಸಕ್ಕರೆ ಕಾರಖಾನೆಗಳ ದರ ನಿರ್ಧಾರ ಆಗುತ್ತದೆ ಹೀಗಾಗಿ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಮೂರು ಜಿಲ್ಲೆಗಳ ಕಾರಖಾನೆಯಾಗಿದೆ ಎಂದರು. ಸಕ್ಕರೆ ದರದಲ್ಲಿ ಕುಸಿತವಾಗಿದ್ದರೂ ಕೂಡ ನಮ್ಮ ಕಾರಖಾನೆ ರೈತರಿಗೆ ಒಳ್ಳೆಯ ದರ ನೀಡಿದ್ದು, ಪ್ರಸಕ್ತ ಹಂಗಾಮಿನಲ್ಲಿಯೂ ಸಹ ಇತರ ಎಲ್ಲ ಖಾಸಗಿ ಕಾರಖಾನೆಗಳಿಗಿಂತ ರೈತರಿಗೆ ಹೆಚ್ಚು ದರ ನೀಡುತ್ತೇವೆ ಎಂದು ಹೇಳಿದರು.
ಸಭೆಯಲ್ಲಿ ರೈತ ಸದಸ್ಯರು, ರೈತ ಸಂಘದ ಪದಾಧಿಕಾರಿಗಳು ಕೇಳಿದ ಪ್ರಶ್ನೆಗೆ ಕಾರಖಾನೆ ಅಧ್ಯಕ್ಷ ಪರಪ್ಪ ಸವದಿ, ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್.ಪಾಟೀಲ ಉತ್ತರಿಸಿದರು. ಸಭೆ ನಡುವಳಿಜೆಯನ್ನು ಕಛೇರಿ ಅಧಿಕ್ಷಕ ಡಿ.ಬಿ.ಠಕ್ಕಣ್ಣವರ ಓದಿದರು, ಮುಖ್ಯ ಲೆಕ್ಕಾಧಿಕಾರಿ ಎ.ಸಿ.ರಾಚಪ್ಪನವರ 2023-24 ನೇ ಸಾಲಿನ ಅಂದಾಜು ಪತ್ರಿಕೆ ಓದಿ ಅನುಮೋದನೆ ಪಡೆದುಕೊಂಡರು.
ಸಭೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಶಂಕರ. ವಾಘಮೋಡೆ, ನಿರ್ದೇಶಕ ಮಂಡಳಿ ಸದಸ್ಯರಾದ ಗುರುಬಸು ತೆವರಮನಿ, ಶಾಂತಿನಾಥ ನಂದೇಶ್ವರ, ಘೂಳಪ್ಪ ಜತ್ತಿ, ರುಕ್ಮೀಣಿ ಕುಲಕರ್ಣಿ, ರಮೇಶ ಪಟ್ಟಣ, ಸೌರಭ ಪಾಟೀಲ, ಸುನಂದಾ ನಾಯಿಕ, ಸಿದ್ರಾಯ ನಾಯಿಕ, ಮಲ್ಲಿಕಾರ್ಜುನ ಗೋಟಖಿಂಡಿ, ಹಣಮಂತ ಜಗದೇವ, ವಿಶ್ವನಾಥ ಪಾಟೀಲ ಸೇರಿದಂತೆ ಕಾರಖಾನೆಯ ವಿಭಾಗಾಧಿಕಾರಿಗಳು, ರೈತ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು