ಕಾರವಾರ

ಕ್ರಿಮ್ಸ್‌ ಆಸ್ಪತ್ರೆ ಅಭಿವೃದ್ಧಿ: ಬಿಜೆಪಿ ತಂದ ಅನುದಾನಕ್ಕೆ ಕಾಂಗ್ರೆಸ್ ಲೇಬಲ್; ಮಾಜಿ ಶಾಸಕಿ ರೂಪಾಲಿ ನಾಯ್ಕ ವಾಗ್ದಾಳಿ

ಕ್ರಿಮ್ಸ್‌ ಆಸ್ಪತ್ರೆ ಅಭಿವೃದ್ಧಿ: ಬಿಜೆಪಿ ತಂದ ಅನುದಾನಕ್ಕೆ ಕಾಂಗ್ರೆಸ್ ಲೇಬಲ್; ಮಾಜಿ ಶಾಸಕಿ  ರೂಪಾಲಿ ನಾಯ್ಕ ವಾಗ್ದಾಳಿ

ಕಾರವಾರ 08: ಕಾರವಾರ ಮೆಡಿಕಲ್ ಕಾಲೇಜು ಹಾಗೂ  ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್‌) ನೂತನ ಆಸ್ಪತ್ರೆ ಹಾಗೂ ಸೌಲಭ್ಯಗಳಿಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾದ ಅನುದಾನವನ್ನು, ಪ್ರಸ್ತುತ ಕಾಂಗ್ರೆಸ್ ಶಾಸಕರು ಮತ್ತು ಅವರ ಬೆಂಬಲಿಗರು ತಮ್ಮ ಕಾಲದ ಅಭಿವೃದ್ಧಿ ಎಂದು  ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಗಂಭೀರ ಆರೋಪ ಮಾಡಿದರು. 

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು  ಮಾತನಾಡಿ, ಕ್ರಿಮ್ಸ ಅಧೀನ  ಆಸ್ಪತ್ರೆಯ ಅಭಿವೃದ್ಧಿಯ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಪ್ರಚಾರಕ್ಕೆ ತೀವ್ರ ವಾಗ್ದಾಳಿ ನಡೆಸಿದರು.  459 ಹಾಸಿಗೆಗಳ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಬಿ.ಎಸ್‌. ಯಡಿಯೂರ​‍್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಅನುದಾನ ಬಿಡುಗಡೆ ಮಾಡಿದ್ದರು. ತದನಂತರ ಉಸ್ತುವಾರಿ ಸಚಿವರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರು ಆಸ್ಪತ್ರೆಗಾಗಿ ಹೆಚ್ಚಿನ ಅನುದಾನ ಒದಗಿಸಿದ್ದರು. ಈ ಬಗ್ಗೆ ತಮ್ಮ ಬಳಿ ಅಧಿಕೃತ ದಾಖಲೆಗಳಿದ್ದರೂ, ಕಾಂಗ್ರೆಸ್ ನಾಯಕರು ಯಾವುದೋ ದಾಖಲೆಗಳನ್ನು ಮುಂದಿಟ್ಟುಕೊಂಡು,  ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಜನರ ದಿಕ್ಕು  ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.

ಕಾರವಾರ-ಅಂಕೋಲಾ ಕ್ಷೇತ್ರದ ಹಾಲಿ ಶಾಸಕ ಸತೀಶ್ ಸೈಲ್ ಅವರು ಕ್ಷೇತ್ರಕ್ಕೆ ಮತ್ತು ಆಸ್ಪತ್ರೆಗೆ ನಿಜವಾಗಿಯೂ ಹೊಸ ಅನುದಾನ ತಂದಿದ್ದರೆ, ಅದಕ್ಕೆ ಸಂಬಂಧಿಸಿದ ಸರ್ಕಾರದ ಆದೇಶ ಅಥವಾ ಕ್ರಮ ಸಂಖ್ಯೆಯುಳ್ಳ ಸುತ್ತೋಲೆಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲಿ ಎಂದು ರೂಪಾಲಿ ನಾಯ್ಕ ಸವಾಲು ಹಾಕಿದರು. ಅಲ್ಲದೆ, ನಗರದ ಪ್ರವಾಸಿ ಮಂದಿರ ಮತ್ತು ಮಾಲಾದೇವಿ ಮೈದಾನದ ಅಭಿವೃದ್ಧಿಗೆ ಬಿಜೆಪಿ ಅವಧಿಯಲ್ಲಿ ಬಿಡುಗಡೆಯಾಗಿದ್ದ ಅನುದಾನವನ್ನು ಅನ್ಯ ಕಾಮಗಾರಿಗಳಿಗೆ ಬಳಸಿಕೊಂಡಿದ್ದರಿಂದ, ಆ ಯೋಜನೆಗಳು ನೆನೆಗುದಿಗೆ ಬಿದ್ದಿವೆ.  ಪ್ರವಾಸಿ ಮಂದಿರವನ್ನು ಶಾಸರು ಒಬ್ಬರೇ ಉದ್ಘಾಟಿಸಿಕೊಂಡರು. ಉದ್ಘಾಟನೆ ನಂತರ ಅದರ ಬಾಗಿಲು ಇನ್ನು ಮುಚ್ಚಿದ ಹಾಗೆ ಇದೆ. ಕನಿಷ್ಠ ಸೌಜನ್ಯಕ್ಕೂ ನಗರಸಭೆ ಅಧ್ಯಕ್ಷರನ್ನು ಆಹ್ವಾನಿಸದೆ ಪ್ರವಾಸಿ ಮಂದಿರವನ್ನು ಉದ್ಘಾಟಿಸಿರುವುದು ಕಾಂಗ್ರೆಸ್ ಶಾಸಕರಿಗೆ ಶೋಭೆ ತರುವುದಿಲ್ಲ ಎಂದು ಹರಿಹಾಯ್ದರು.

ಮುಖ್ಯಮಂತ್ರಿಗಳು ಆಸ್ಪತ್ರೆ ಉದ್ಘಾಟನೆಗೆ ಬರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಆಸ್ಪತ್ರೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಮುಖ್ಯವಾಗಿದೆ. ಶಾಸಕರು ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದರೂ ಆಸ್ಪತ್ರೆಗೆ ಅತ್ಯಗತ್ಯವಾದ ಎಂ.ಆರ್‌.ಐ (ಒಖಋ) ಯಂತ್ರವನ್ನು ತರಲು ಸಾಧ್ಯವಾಗಿಲ್ಲ. 1.5 ಕೋಟಿ ವೆಚ್ಚದ ಒಂದು ಯಂತ್ರ ನೀಡಲು ಈ ಸರ್ಕಾರಕ್ಕೆ, ಶಾಸಕರಿಗೆ ಆಗಿಲ್ಲ.ಇದರಿಂದ ಬಡ ರೋಗಿಗಳು ಚಿಕಿತ್ಸೆಗಾಗಿ ಬೇರೆ ಊರುಗಳಿಗೆ ಅಲೆಯುವಂತಾಗಿದೆ. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ಕೇವಲ ಉದ್ಘಾಟನೆ ಮಾಡಿದರೆ, ಬಿಜೆಪಿ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಇನ್ನು ಕಾಂಗ್ರೆಸ್ ಶಾಸಕ ಸೈಲ್ ಜನರಿಗೆ ಸಿಗುತ್ತಿಲ್ಲ. ಜನ ಶಾಸಕರನ್ನು ಭೇಟಿಯಾಗಬೇಕೆಂದರೂ ಅವರು ಲಭ್ಯವಿಲ್ಲ. ಇನ್ನು 2.5 ವರ್ಷ ಸಮಯ ಇದೆ. ಹೀಗಾದರೆ ಹೇಗೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಪ್ರಶ್ನಿಸಿದರು.  

ಸವಾಲಿಗೆ ಪ್ರತಿಸವಾಲು : ಗ್ಯಾರಂಟಿ ಯೋಜನೆಗಳ ಕುರಿತ ಕಾಂಗ್ರೆಸ್ ವಕ್ತಾರರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರು ಗ್ಯಾರಂಟಿ ಬೇಡ ಎಂದು ಬರೆದುಕೊಡಲಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ. ಹಾಗಾದರೆ ಕಾಂಗ್ರೆಸ್ಸಿಗರು ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ನಾವು ಬಳಸುವುದಿಲ್ಲ ಎಂದು ಬರೆದುಕೊಡಲಿ ಎಂದು ಮರುಸವಾಲು ಹಾಕಿದರು. ಗ್ಯಾರಂಟಿ ಯೋಜನೆಗಳು ಜನರ ತೆರಿಗೆ ಹಣದಿಂದ ನಡೆಯುತ್ತಿವೆಯೇ ಹೊರತು,  ಕಾಂಗ್ರೆಸ್ ನಾಯಕರ ಸ್ವಂತ ಹಣದಿಂದಲ್ಲ ಎಂದು ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ  ಆಕ್ರೋಶ ವ್ಯಕ್ತಪಡಿಸಿದರು.  ಜಿಲ್ಲೆಯ ವಿವಿಧ ಭಾಗದಿಂದ ಬಂದ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ