ಧಾರವಾಡ - ಹುಬ್ಬಳ್ಳಿ

ಮಾನವ ಕಳ್ಳ ಸಾಗಾಣಿಕೆ ಒಂದು ಹೀನಕೃತ್ಯ; ಇದನ್ನು ತಡೆಗಟ್ಟಲು ಪ್ರತಿಯೊಬ್ಬರು ಬದ್ಧರಾಗಬೇಕು

ಮಾನವ ಕಳ್ಳ ಸಾಗಾಣಿಕೆ ಒಂದು ಹೀನಕೃತ್ಯ; ಇದನ್ನು ತಡೆಗಟ್ಟಲು ಪ್ರತಿಯೊಬ್ಬರು ಬದ್ಧರಾಗಬೇಕು

ಮಾನವ ಕಳ್ಳ ಸಾಗಾಣಿಕೆ ಒಂದು ಹೀನಕೃತ್ಯ; ಇದನ್ನು ತಡೆಗಟ್ಟಲು ಪ್ರತಿಯೊಬ್ಬರು ಬದ್ಧರಾಗಬೇಕು

ಧಾರವಾಡ 30: ಮಾನವ ಕಳ್ಳ ಸಾಗಾಣಿಕೆ ಮಾಡುವುದು, ದೌರ್ಜನ್ಯ ಎಸಗುವುದು ಒಂದು ಹೀನಕೃತ್ಯವಾಗಿದೆ. ಇದೊಂದು ಸಮಾಜಕ್ಕೆ ಅಂಟಿದ ರೋಗ. ಇದನ್ನು ತಡೆಗಟ್ಟುವಲ್ಲಿ ಪ್ರತಿಯೋಬ್ಬ ನಾಗರಿಕರು ಬದ್ಧರಾಗಿರಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆಗಿರುವ ಹಿರಿಯ ಸಿವಿಲ್ ನ್ಯಾಯಾದೀಶ ಪಿ.ಎಫ್‌.ದೊಡ್ಡಮನಿ ಅವರು ಹೇಳಿದರು. 

ಅವರು ಇಂದು (ಜು.30) ಬೆಳಿಗ್ಗೆ ಆಲೂರು ವೆಂಕಟರಾವ್ ಸಾಂಸ್ಕೃತಿಕ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಕಾನೂನು ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. 

ಮಾನವ ಕಳ್ಳ ಸಾಗಾಣಿಕೆ ತಡೆಯುವುದು ಎಲ್ಲರ ಕರ್ತವ್ಯ ಆಗಿದೆ. ಮಕ್ಕಳು, ಮಹಿಳೆ, ಪುರುಷ ಎನ್ನದೆ ಎಲ್ಲ ರೀತಿಯ ಜನರನ್ನು ವಿವಿಧ ಕಾರಣಗಳಿಗಾಗಿ ಕಿಡ್ನ್ಯಾಪ್, ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ. ಮುಖ್ಯವಾಗಿ ಹಣದ ಆಮಿಷ, ದೌರ್ಜನ್ಯಗಳಿಂದ ಕಳ್ಳ ಸಾಗಾಣಿಕೆ ಮಾಡುತ್ತಾರೆ. ಇಂದು ಯಾರದೋ ಕುಟುಂಬದಲ್ಲಿ ಆಗಿರಬಹುದು. ಮುಂದಿನ ದಿನಗಳಲ್ಲಿ ನಮ್ಮ ಕುಟುಂಬದಲ್ಲೂ ಅಗಬಹುದು. ಈ ಎಚ್ಚರಿಕೆಯಿಂದ ನಾವು ಎದುರಿಸಿ, ಕಳ್ಳ ಮಾನವ ಸಾಗಾಣಿಕೆ ಆಗದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು. 

ಮಾನವ ಕಳ್ಳ ಸಾಗಾಣಿಕೆ ಕಂಡುಬಂದರೆ ತಕ್ಷಣ ಪೊಲೀಸ್ ಅದಿಕಾರಿ, ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕು. ಅನೇಕ ಸಲ ಪೊಲೀಸರಿಗೆ ಮಾಹಿತಿ ಕೊಟ್ಟರೆ ತಾವು ಸಾಕ್ಷಿ ಆಗಿ, ನ್ಯಾಯಾಲಯಕ್ಕೆ ಅಲೆಯಬೇಕಾಗುತ್ತದೆ ಎಂಬ ತಪ್ಪು ಗ್ರಹಿಕೆ ಮೂಡುತ್ತದೆ. ಆದರೆ ಸಾಕ್ಷಿದಾರ ಒಂದು ಸಲ ಮಾತ್ರ ನ್ಯಾಯಾಲಯಕ್ಕೆ ಬಂದು ಸಾಕ್ಷಿ ನುಡಿದರೆ ಸಾಕು. ಮತ್ತೇ ಅವರು ಬರುವ ಅಗತ್ಯವಿಲ್ಲ. ಆದ್ದರಿಂದ ಸಮಾಜ ಈ ಅನಿಷ್ಠವನ್ನು ತೊಲಗಿಸಲು ಧೈರ್ಯದಿಂದ ಮುಂದೆ ಬಂದು, ಮಾಹಿತಿ ಹಂಚಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್‌.ದೊಡ್ಡಮನಿ ಅವರು ತಿಳಿಸಿದರು. 

ಅಂತರಾಷ್ಟ್ರೀಯ ನ್ಯಾಯ ಮಿಷನ್ಸ್‌ ಸಂಸ್ಥೆಯ ವಿನೋದ್ ಕುಮಾರ್ ಪಿ. ಹಾಗೂ ಸರ್‌.ಸಿದ್ದಪ್ಪ ಕಂಬಳಿ ಕರ್ನಾಟಕ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಶಶಿರೇಖಾ ಮಾಳಗಿ  ಅವರು ಮಾನವ ಕಳ್ಳ ಸಾಗಾಣಿಕೆ ಅಪರಾಧ ಹಾಗೂ ರಕ್ಷಣಾತ್ಮಕ ಕಾನೂನುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. 

ಪೊಲೀಸ್ ಇಲಾಖೆಯ ಸಿಇಎನ್ ವಿಭಾಗದ ಡಿವೈಎಸ್‌ಪಿ ಶಿವಾನಂದ ಕಟಗಿ, ಧಾರವಾಡ ನಗರ ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್‌.ಎಂ.ಹಿರೇಮಠ, ಜಿಲ್ಲಾ ನಿರೂಪಣಾಧಿಕಾರಿ ಡಾ.ಕಮಲಾ ಬೈಲೂರ ವೇದಿಕೆಯಲ್ಲಿ ಇದ್ದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ.ಎಚ್‌.ಎಚ್‌.ಕುಕನೂರ ಅವರು ಸ್ವಾಗತಿಸಿ, ಅಂತರಾಷ್ಟ್ರೀಯ ಮಾನವ ಕಳ್ಳ ಸಾಗಾಣಿಕೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಪಾಟೀಲ ವಂದಿಸಿದರು. ಸುನಿತಾ ನಾಡಿಗೇರ ಕಾರ್ಯಕ್ರಮ ನಿರೂಪಿಸಿದರು.  

ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಲಿಂಗತ್ವ ಅಲ್ಪಸಂಖ್ಯಾತರು, ಮಾಜಿ ದೇವದಾಸಿಯರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ