ವಿವಿಧ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಿ ಸರ್ಕಾರದಿಂದ ಆದೇಶ
ವಿವಿಧ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಿ ಸರ್ಕಾರದಿಂದ ಆದೇಶ
ಚಿಕ್ಕೋಡಿ: ತಾಲೂಕಿನ ಖಡಕಲಾಟ, ಶಿರಗಾಂವ, ವಾಳಕಿ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಿ ಸರ್ಕಾರ ಆದೇಶ ಮಾಡಿದೆ. ಇದರಿಂದ ಗಡಿ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಸಿಗಲಿದೆ ಎಂದು ವಿಧಾನ ಪರಿಷತ್ ಸದಸ್ಯರು ಮತ್ತು ದೆಹಲಿ ಪ್ರತಿನಿಧಿ ಪ್ರಕಾಶ ಹುಕ್ಕೇರಿ ತಿಳಿಸಿದರು.ಪತ್ರಿಕಾ ಪ್ರಕಟಣೆ ನೀಡಿದ ಅವರು.ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಖಡಕಲಾಟ, ಹಾಗೂ ವಾಳಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಇತ್ತೀಚೆಗಷ್ಟೇ ಸರ್ಕಾರದಿಂದ ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಲಾಗಿತ್ತು. ಆದರೆ ಪ್ರೌಢ ಶಿಕ್ಷಣ ಮುಗಿದ ನಂತರ ವಿದ್ಯಾರ್ಥಿಗಳಿಗೆ ಪದವಿ ಪೂರ್ವ (ಪಿ.ಯು.ಸಿ) ಶಿಕ್ಷಣ ಪಡೆಯಲು ಬೇರೆ ಗ್ರಾಮಗಳಿಗೆ ತೆರಳಬೇಕಾಗುತ್ತಿತ್ತು. ಈ ಭಾಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಲ್ಲದೇ ಇಲ್ಲದೇ ಇರುವುದರಿಂದ ಬಡ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ಪಡೆಯಲು ಖಾಸಗಿ ಕಾಲೇಜುಗಳಿಗೆ ಹೋಗಬೇಕಾಗುತ್ತಿದ್ದರಿಂದ ತುಂಬಾ ಅನಾನುಕೂಲವಾಗುತ್ತಿತ್ತು.
ಈ ಹಿನ್ನಲೆಯಲ್ಲಿ ನಾನು ಹಾಗೂ ಶಾಸಕರಾದ ಗಣೇಶ ಹುಕ್ಕೇರಿಯವರು ಶಿರಗಾಂವ ಪ್ರೌಢ ಶಾಲೆ, ಖಡಕಲಾಟ ಹಾಗೂ ವಾಳಕಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಎಲ್.ಕೆ.ಜಿ ಯಿಂದ 12 ನೇ ತರಗತಿಯವರೆಗೆ ಒಂದೇ ಸೂರಿನಡಿ (ಕ್ಯಾಂಪಸ್ ನಡಿಯಲ್ಲಿ) ಮಕ್ಕಳಿಗೆ ಶಿಕ್ಷಣ ಪಡೆಯಲು ಅನುಕೂಲವಾಗಿಸುವ ಹಿತದೃಷ್ಟಿಯಿಂದ ಕರ್ನಾಟಕ ಪಬ್ಲಿಕ ಶಾಲೆಗಳನ್ನಾಗಿ ಉನ್ನತೀಕರಿಸಿ ಆದೇಶಿಸುವಂತೆ ಮನವಿ ಮಾಡಲಾಗಿತ್ತು, ನಮ್ಮ ಮನವಿಗೆ ಸ್ಪಂದಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸನ್ಮಾನ್ಯ ಶಾಲಾ ಶಿಕ್ಷಣ ಸಚಿವರು 3 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಿ ಆದೇಶ ಹೊರಡಿಸಿರುತ್ತಾರೆ.
ಕರ್ನಾಟಕ ಪಬ್ಲಿಕ ಶಾಲೆಗಳಾಗಿ ಉನ್ನತೀಕರಣ ಹೊಂದಿದ ನಂತರ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಪಡೆಯುವುದರ ಜೊತೆಗೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಣ ಭೋಧನೆ, ಶಾಲೆಗಳಿಗೆ ಮೂಲಭೂತ ಸೌಕರ್ಯಗಳಾದ ಶಾಲಾ ಕೊಠಡಿಗಳು, ಪ್ರಯೋಗಾಲಯ, ಶುದ್ಧ ಕುಡಿಯುವ ನೀರು ಮುಂತಾದ ಕಾಮಗಾರಿ ಕೈಗೊಳ್ಳಲು ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಲಿದೆ ಎಂದರು.