ಸರ್ಕಾರಿ ವಸತಿಗೃಹ ಕಾನೂನು ಬಾಹಿರವಾಗಿ ಮಂಜೂರು; ಜಿಲ್ಲಾಧಿಕಾರಿಗಳ ಕ್ರಮ
ದಾಂಡೇಲಿ ಫೇ 12 : ದಾಂಡೇಲಿ ನಗರಸಭೆ ಸ್ವೀಪರ್ ಕ್ವಾಟರ್ಸ್ ಖಾಸಗಿಯವರ ಕಣ್ಣು ಬಿದ್ದಿದೆ. ಈ ಸರ್ಕಾರಿ ವಸತಿಗೃಹಗಳು ಕಬಳಿಕೆಯಾಗುತ್ತಿರುವ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಹೋಗಿದ್ದು ಕ್ರಮಕ್ಕೆ ಒತ್ತಾಯಿಸಲಾಗಿದೆ. ನಗರಸಭೆಯಿಂದ ಪೌರಸೇವಾ ಕಾರ್ಮಿಕರಿಗೆ ಮತ್ತು ನೈರ್ಮಲ್ಯ ಕಾರ್ಮಿಕರಿಗಾಗಿ ನಿರ್ಮಿಸಿರುವ ಸ್ವೀಪರ್ ಕ್ವಾಟರ್ಸ್ಗಳನ್ನು ಖಾಸಗಿಯವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸುತ್ತಿರುವ ಆರೋಪ ಕೇಳಿ ಬಂದಿದೆ.
ಈ ಕುರಿತು ನಗರದ ಬಾಂಬೆ ಚಾಳಿನ ಮಹಿಳೆಯೊಬ್ಬರು ಪೌರಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಟೌನಶಿಪ್ನ ಸಿ.ಎಸ್.ಐ ಚರ್ಚಿನ ಹತ್ತಿರವಿರುವ ಸ್ವೀಪರ್ ಕಾಲನಿಯಲ್ಲಿ ಸರ್ಕಾರಿ ವಸತಿಗೃಹವೊಂದನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಕೊಂಡು ತಮಗಿಷ್ಟ ಬಂದಂತೆ ಕಟ್ಟಡವನ್ನು ಒಡೆದು ದುರಸ್ಥಿ ಕಾರ್ಯಗಳನ್ನು ನಡೆಸಿದ್ದಾರೆಂದು ಆರೋಪಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಸ್ಥಳೀಯ ನಗರಸಭೆಯಲ್ಲಿ ಈ ಹಿಂದೆ ಭೂ ಕಬಳಿಕೆ ಮತ್ತು ನಕಲಿ ಪಟ್ಟಾಗಳನ್ನು ಸೃಷ್ಟಿಸಿ ನಿವೇಶನಗಳನ್ನು ಒಂದಿಬ್ಬರು ಪತ್ರಕರ್ತರು, ಪ್ರತಿಷ್ಟಿತರೆಲ್ಲ ಸೇರಿ ನಗರದ ಪ್ರಮುಖ ಬಡಾವಣೆಗಳಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ನಿವೇಶನಗಳನ್ನು ಕಬಳಿಸಿದ್ದರು. ಈ ಬಗ್ಗೆ ಲೋಕಾಯುಕ್ತದಿಂದ ಹಾಗೂ ಪೋಲಿಸರಿಂದ ತನಿಖೆ ನಡೆಯುತ್ತಿದೆ. ಸ್ವೀಪರ್ಸ್ ಕ್ವಾಟರ್ಸ್ ಎಂಬುದು ಸಾಮಾನ್ಯವಾಗಿ ಸರ್ಕಾರಿ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೈರ್ಮಲ್ಯ ಕಾರ್ಮಿಕರು ಅಥವಾ ಪೌರ ಕಾರ್ಮಿಕರಿಗೆ ಒದಗಿಸಲಾದ ವಸತಿ ಸೌಕರ್ಯಗಳಿವು. ಪೌರ ಕಾರ್ಮಿಕರ ವಸತಿ ಸೌಕರ್ಯಗಳು ಸರ್ಕಾರದ ಆದ್ಯತೆಯ ವಿಷಯಗಳಲ್ಲೊಂದಾಗಿದೆ.
ಆದರೆ ದಾಂಡೇಲಿ ನಗರಸಭೆಯಲ್ಲಿ 30 ಕ್ಕು ಹೆಚ್ಚು ಸ್ವೀಪರ್ಸ್ ಕ್ವಾಟರ್ಸ್ಗಳಿದ್ದು, ಇವೆಲ್ಲ ನಗರದ ಪ್ರಮುಖ ಬಡಾವಣೆಯಾದ ಟೌನಶಿಪ್ನ ಹಳೆ ನಗರಸಭಾ ಕಛೇರಿ ಸುತ್ತಮುತ್ತಲು ಇದೆ. ಈ ವಸತಿ ಗೃಹಗಳನ್ನು ಪೌರ ಕಾರ್ಮಿಕರು ಮತ್ತು ನೈರ್ಮಲ್ಯ ಕಾರ್ಮಿಕರಿಗೆ ನೀಡಿಲ್ಲ. ಈ ಕಾರ್ಮಿಕರು ಬಾಡಿಗೆ ಮನೆಗಳಲ್ಲಿದ್ದಾರೆ. ಈ ವಸತಿ ಗೃಹಗಳನ್ನು ನಿವೃತ್ತ ನೌಕರರು ಮತ್ತು ಖಾಸಗಿಯವರೇ ಉಳಿದುಕೊಂಡಿದ್ದಾರೆ. ಅವರಿಗೆ ಈ ಮನೆಗಳನ್ನು ಯಾರು ಮಂಜೂರು ಮಾಡಿದರು. ಹೇಗೆ ದಾಖಲೆಗಳು ಸೃಷ್ಟಿಯಾದವು ಎನ್ನುವದು ಪ್ರಶ್ನಾರ್ಹವಾಗಿದೆ. ಈ ಬಗ್ಗೆ ಪೌರಾಯುಕ್ತರನ್ನು ಪ್ರಶ್ನಿಸಿದಾಗ ದಾಖಲೆಗಳನ್ನು ಪರೀಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವದೆಂದು ತಿಳಿಸಿದ್ದಾರೆ.