“ಗೋವಿಂದ ಗೋವಿಂದ” ಆಡಿಯೋ ಬಿಡುಗಡೆ
ಬೆಂಗಳೂರು, ಮಾರ್ಚ್ 23 : ಶೈಲೇಂದ್ರ ಪ್ರೊಡಕ್ಷನ್ಸ್, ಎಲ್.ಜಿ. ಕ್ರಿಯೇಷನ್ಸ್, ರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ನಿರ್ಮಿಸಿರುವ "ಗೋವಿಂದ ಗೋವಿಂದ" ಚಿತ್ರದ ಆಡಿಯೋ ಜ್ಯೂಕ್ ಬಾಕ್ಸ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿದ್ದು, ಪುಷ್ಕರ್ ಫಿಲಂಸ್ ಮೂಲಕ ಹಾಡುಗಳು ಹೊರಬಂದಿದ್ದು, ಮುಂದಿನ ತಿಂಗಳ 16ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತಿಲಕ್ ನಿರ್ದೇಶಿಸಿದ್ದಾರೆ. ಶೈಲೇಂದ್ರ ಬಾಬು, ಕಿಶೋರ್ ಎಂ.ಕೆ.ಮಧುಗಿರಿ ಹಾಗೂ ರವಿ ಆರ್ ಗರಣಿ ಈ ಚಿತ್ರದ ನಿರ್ಮಾಪಕರು. ಜನಾರ್ದನ್ ರಾಮ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.ಸುಮಂತ್ ಶೈಲೇಂದ್ರ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಮತ್ತೋರ್ವ ನಾಯಕನಾಗಿ ತುಳು ಸಿನಿಮಾ ಖ್ಯಾತಿಯ ರೂಪೇಶ್ ಶೆಟ್ಟಿ ನಟಿಸಿದ್ದಾರೆ. ಸುಮಂತ್ ಹಾಗೂ ರೂಪೇಶ್ ಅವರಿಗೆ ನಾಯಕಿಯರಾಗಿ ಕವಿತಾ ಗೌಡ ಹಾಗೂ ಭಾವನ ಮೆನನ್ ನಟಿಸಿದ್ದಾರೆ.
ಈ ಚಿತ್ರದ ಆಡಿಯೋ ಬಿಡುಗಡೆಗೆ ಅತಿಥಿಗಳಾಗಿ ರಾಜಕಾರಣಿ ಕೆ.ಎನ್ ರಾಜಣ್ಣ ಮತ್ತು ನಿರ್ದೇಶಕ ಲಿಂಗದೇವರು ಆಗಮಿಸಿದ್ದರು. ದೇವ್ ರಂಗಭೂಮಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ರವಿಚಂದ್ರನ್ ಸಂಕಲನ, ಪ್ರಕಾಶ್ ಪುಟ್ಟಸ್ವಾಮಿ ಕಲಾ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿದೆ. ಸುಮಂತ್ ಶೈಲೇಂದ್ರ ನಾಯಕರಾಗಿ ನಟಿಸಿದ್ದು, ತಾರಾಬಳಗದಲ್ಲಿ ಕವಿತಾ ಗೌಡ, ಭಾವನಾ ಮೆನನ್, ರೂಪೇಶ್ ಶೆಟ್ಟಿ, ಪವನ್ ಕುಮಾರ್, ವಿಜಯ್ ಚೆಂಡೂರ್, ಅಚ್ಯುತ ಕುಮಾರ್, ವಿ.ಮನೋಹರ್, ಕೆ.ಮಂಜು, ಕಡ್ಡಿಪುಡಿ ಚಂದ್ರು, ಪದ್ಮಾ ವಾಸಂತಿ, ಶ್ರೀನಿವಾಸಪ್ರಭು, ಸುನೇತ್ರ ಪಂಡಿತ್, ಗೋವಿಂದೇ ಗೌಡ, ಯಮುನ ಶ್ರೀನಿಧಿ ಮುಂತಾದವರಿದ್ದಾರೆ.