ಜಾನಪದ ಹಾಡುಗಳು ಕಾರ್ಯಕ್ರಮ; ಜನಪದ ಸಾಹಿತ್ಯ ಮೋಹಕ ಸಾಹಿತ್ಯವಾಗಿದೆ: ಡಾ.ಜಿನದತ್ತ ಹಡಗಲಿ
ಧಾರವಾಡ 01 : ಜನಪದ ಸಾಹಿತ್ಯ ನಮ್ಮ ಜನಪದರ ಜೀವನಾನುಭವದ ರಸ ಘಟ್ಟ. ಅದೊಂದು ಮೋಹಕ ಸಾಹಿತ್ಯವಾಗಿದೆ ಎಂದು ಕ.ವಿ.ವ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಜಿನದತ್ತ ಹಡಗಲಿ ಹೇಳಿದರು.
ಅವರು ನಗರದ ಮದಿಹಾಳ ಸಿದ್ಧಾರೂಢ ಕಾಲೋನಿಯಲ್ಲಿ ನಡೆದ ಸದ್ಗುರು ಸಿದ್ಧಾರೂಢರ ನೂತನ ರಥೋತ್ಸವ ಹಾಗೂ ದ್ವಿತೀಯ ವರ್ಷದಜಾತ್ರಾ ಮಹೋತ್ಸವದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾ ಮತ್ತು ಜಾನಪದ ಮಂಟಪದ ವತಿಯಿಂದ ಆಯೋಜಿಸಿದ್ದ ಜಾನಪದ ಹಾಡುಗಳು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು, ಜಾತ್ರೆ, ಹಬ್ಬಗಳು ಬರೀ ಆಚರಣೆಗಳಲ್ಲ, ಅವು ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಎಲ್ಲಾ ಜಾತಿಯ ಜನರಲ್ಲಿ ಏಕತೆ, ಸೌಹಾರ್ದತೆಗಳನ್ನು ಬೆಳೆಸುತ್ತವೆ. ಈ ಹಬ್ಬಗಳು ಆಚರಣೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಒಂದು ಭಾಗವಾಗಿದೆ. ಜಾನಪದ ಹಾಡುಗಳಲ್ಲಿ ನಮ್ಮ ಬದುಕನ್ನುತಿದ್ದಿ ಸಂಸ್ಕಾರಗೊಳಿಸುವ ಶಕ್ತಿ ಇದೆ. ಇಂತಹಅಮೂಲ್ಯ ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸಬೇಕಿದೆ.ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಮಾತನಾಡಿ, ಜನಪದ ಹಾಡುಗಳನ್ನು ರಚಿಸಿದವರು ನಮ್ಮ ಹಳ್ಳಿಯ ಅನಕ್ಷರಸ್ಥರು. ಅವರು ಅನಕ್ಷರಸ್ಥರಾದರೂ ಜಾನಪದ ಹಾಡುಕಟ್ಟಿ ಭಾವನಾತ್ಮಕವಾಗಿ ಹಾಡಿದ್ದಾರೆ. ಅಂತಹ ಶ್ರೀಮಂತ ಸಾಹಿತ್ಯ ಉಳಿಸಬೇಕಿದೆ ಎಂದರು.
ಹರ್ಲಾಪೂರದ ಶಂಭಯ್ಯ ಹಿರೇಮಠ ನೇತೃತ್ವದ ಸಿ.ವಾಯ್.ಸಿ.ಡಿ ಕಲಾ ತಂಡದವರುಜಾನಪದ ಹಾಡುಗಳನ್ನು ಪ್ರಸ್ತುತಪಡಿಸಿದರು. ಸಿದ್ಧಾರೂಢ ಸದ್ಭಕ್ತ ಮಂಡಳಿ ವತಿಯಿಂದ ಕ.ವಿ.ವ. ಸಂಘದ ಪದಾಧಿಕಾರಿಗಳನ್ನ ಸನ್ಮಾನಿಸಿ, ಗೌರವಿಸಲಾಯಿತು.
ಜಯಶ್ರೀ ಪಾಟೀಲ ಪ್ರಾರ್ಥಿಸಿದರು, ಎಚ್.ಎಂ.ಹೂಗಾರ ಸ್ವಾಗತಿಸಿದರು, ಶಿವಾನಂದ ಹೂಗಾರ ನಿರ್ವಹಿಸಿದರು.ಕಲಾ ಹಾಗೂ ಜಾನಪದ ಮಂಟಪದ ಸಂಚಾಲಕರಾದ ಡಾ.ಮಹೇಶ ಧ. ಹೊರಕೇರಿ ವಂದಿಸಿದರು. ಶಿವಾನಂದ ಭಾವಿಕಟ್ಟಿ, ವೀರಣ್ಣಒಡ್ಡೀನ, ಗಣೇಶ ಬಡಿಗೇರ, ಕಿರಣ ಸಿದ್ಧಾಪೂರದ, ಲಾಲಸಾಬ ಬೂದಿಹಾಳ, ಆರ್.ಎಸ್. ಬಾಳನಗೌಡ್ರ, ಸುರೇಶಕುರಡಿಕೇರಿ, ಎಸ್.ಎಲ್.ಮಠದ, ಆರ್.ಎಸ್. ಒಡೆಯರ, ಎಂ.ಎಸ್.ಕುಂಬಾರಿ, ಎಸ್.ಸಿ.ಶಿಗ್ಲಿಹಿರೇಮಠ, ಸರೋಜಾ, ಸುಜಾತಾ ಪೂಜಾರ ಸೇರಿದಂತೆ ಸಿದ್ಧಾರೂಢ ಸದ್ಭಕ್ತ ಮಂಡಳಿ ಹಾಗೂ ಸಿದ್ಧಾರೂಢ ಕಾಲೋನಿ ನಿವಾಸಿಗಳು ಕಾರ್ಯಕ್ರಮದಲ್ಲಿದ್ದರು.