ಘಟಪ್ರಭಾದಲ್ಲಿ ಕಾಳಿಕಾದೇವಿ ಪುರಾಣ ಮಂಗಲ ಕಾರ್ಯಕ್ರಮ
ಘಟಪ್ರಭಾ 21: ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆದ ದೇವಿ ಪುರಾಣ ಮಂಗಲ ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿತು. ಘಟಪ್ರಭಾ ಹೊಸ ಮಠದ ಪೂಜ್ಯ ವಿರೂಪಾಕ್ಷ ಮಹಾಸ್ವಾಮಿಗಳು ಮಾತನಾಡಿ,
ನವರಾತ್ರಿ ಉತ್ಸವ ಹಾಗೂ ವಿಶ್ವಕರ್ಮ ಜಯಂತಿಯಂತಹ ಕಾರ್ಯಕ್ರಮಗಳ ಮೂಲಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುವಲ್ಲಿ ವಿಶ್ವಕರ್ಮ ಸಮಾಜದ ಕೊಡುಗೆ ಶ್ಲಾಘನೀಯವಾಗಿದೆ ಎಂದರು. ಗುಬ್ಬಲಗುಡ್ಡದ ಕೆಂಪಣ್ಣ ಸ್ವಾಮಿಗಳ ಮಠದ ಪೂಜ್ಯ ಮೃತ್ಯುಂಜಯ ದೇವರು ವಿಶ್ವಕರ್ಮ ಸಮಾಜದ ಇತಿಹಾಸ ಹಾಗೂ ದೇವಿ ಮಹಾತ್ಮೆಯ ಕುರಿತು ವಿವರಿಸಿದರು. ಭೀಮಾಚಾರ್ಯರು ಒಂಬತ್ತು ದಿನಗಳ ದೇವಿ ಪುರಾಣವನ್ನು ನಡೆಸಿಕೊಟ್ಟರು.
ಕಾಳಿಕಾದೇವಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಡಾ. ವಿರೂಪಾಕ್ಷ ಪತ್ತಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಮಾರುತಿ ಕೌಜಲಗಿ ಅವರ ನೇತೃತ್ವದ ಭಜನಾ ಮಂಡಳಿಯ ಸದಸ್ಯರು ಸಂಗೀತ ಸೇವೆ ಸಲ್ಲಿಸಿದರು. ವಿಶ್ವಕರ್ಮ ಸಮಾಜದ ಮುಖಂಡರು ಹಾಗೂ ವಿವಿಧ ಸಮಾಜಗಳ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.