ವಿಜಯಪುರ

ಮಧ್ವಾಚಾರ್ಯರ ತತ್ವಗಳಲ್ಲಿ ಭಕ್ತಿ, ಜ್ಞಾನ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಆದ್ಯತೆ: ಪ್ರಶಾಂತ ಚನಗೊಂಡ

ಮಧ್ವಾಚಾರ್ಯರ ತತ್ವಗಳಲ್ಲಿ ಭಕ್ತಿ, ಜ್ಞಾನ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಆದ್ಯತೆ: ಪ್ರಶಾಂತ ಚನಗೊಂಡ
Emphasis on Devotion, Knowledge, and Social Harmony in Madhvacharya’s Philosophy: Prashanth Chanagon

ಲೋಕದರ್ಶನ ವರದಿ 

ವಿಜಯಪುರ 21 : ಮಧ್ವಾಚಾರ್ಯರು ಪ್ರತಿಪಾದಿಸಿದ ತತ್ವಗಳಲ್ಲಿ ಭಕ್ತಿ, ಜ್ಞಾನ, ಪರಸ್ಪರ ಗೌರವ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ವಿಶೇಷ ಆದ್ಯತೆ ನೀಡಲಾಗಿತ್ತು.  ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ವಿಜಯಪುರ ಉಪ ವಿಭಾಗಾಧಿಕಾರಿ ಪ್ರಶಾಂತ ಚನಗೊಂಡ ಅವರು ಹೇಳಿದರು. 


ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಮಧ್ವಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ಸಿದ್ಧಾಂತವು ಜೀವಾತ್ಮ ಮತ್ತು ಪರಮಾತ್ಮರ ನಡುವಿನ ಸಂಬಂಧವನ್ನು ಪ್ರತಿಪಾದಿಸುತ್ತದೆ.


ಜೀವಾತ್ಮನು ಪರಮಾತ್ಮನನ್ನು ಅರಿತು ಭಕ್ತಿ, ಶ್ರದ್ಧೆ ಹಾಗೂ ನಿಷ್ಠೆಯಿಂದ ಆರಾಧಿಸಬೇಕು ಎಂಬುದನ್ನು ಮಧ್ವಾಚಾರ್ಯರು ಬೋಧಿಸಿದ್ದಾರೆ. ಅವರ ತತ್ವಗಳು ಆಧ್ಯಾತ್ಮಿಕ ಜಾಗೃತಿಯೊಂದಿಗೆ ಜ್ಞಾನಾರ್ಜನೆ ಮತ್ತು ಉತ್ತಮ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತವೆ ಎಂದು ತಿಳಿಸಿದರು. 

ಭಕ್ತಿಯು ಯಾವುದೇ ಒಂದು ಜಾತಿ, ಪಂಗಡ ಅಥವಾ ಸಮುದಾಯಕ್ಕೆ ಸೀಮಿತವಾಗಿಲ್ಲ.


ಪ್ರತಿಯೊಬ್ಬರೂ ಭಕ್ತಿಯ ಮೂಲಕ ದೇವರನ್ನು ಆರಾಧಿಸಬಹುದು ಎಂಬ ಸಂದೇಶವನ್ನು ಮಧ್ವಾಚಾರ್ಯರು ಸಾರಿದ್ದಾರೆ. ಭಕ್ತಿಗೆ ಜಾತಿಯ ಹಂಗಿಲ್ಲ ಎಂಬ ಈ ಆಶಯವು ಎಲ್ಲರಿಗೂ ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗಲು ಅವಕಾಶವಿದೆ ಎಂಬುದನ್ನು ಸಾರುತ್ತದೆ. ಇಂತಹ ಉದಾತ್ತ ಚಿಂತನೆಗಳನ್ನು ಅರಿತುಕೊಂಡು ಸಮಾಜದಲ್ಲಿ ಸಮಾನತೆ, ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. 


ಸುದ್ದಿ ಓದಿ